ಕನ್ನಡಪ್ರಭ ವಾರ್ತೆ ಗೋಕಾಕ
ಆರೋಗ್ಯ ರಕ್ಷಣೆಯೊಂದಿಗೆ ಯುವ ಶಕ್ತಿ ಆರೋಗ್ಯಕರ ಭಾರತ ನಿರ್ಮಾಣಕ್ಕೆ ಶ್ರಮಿಸುವಂತೆ ಮೈಸೂರಿನ ಮಹಾರಾಜರು ಹಾಗೂ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಹೇಳಿದರು.ನಗರದ ಜೆಎಸ್‌ಎಸ್ ಕಾಲೇಜು ಆವರಣದಲ್ಲಿ ರೋಟರಿ ಸಂಸ್ಥೆ ಆಯೋಜಿಸಿದ್ಧ ಗೋಕಾಕ ಹಿಲ್ ಹಾಫ್ ಮ್ಯಾರಾಥಾನ್ 2025 ಕಾರ್ಯಕ್ರಮಕ್ಕೆ ಭಾನುವಾರ ಚಾಲನೆ ನೀಡಿ, 10 ಕಿ.ಮೀ ಮ್ಯಾರಾಥಾನ ಓಟದಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
ಇಂದಿನ ಯುವ ಶಕ್ತಿಯೇ ದೇಶ ಶಕ್ತಿಯಾಗಿದ್ದು, ಯುವ ಪೀಳಿಗೆ ತಮ್ಮ ಆರೋಗ್ಯ ರಕ್ಷಣೆಗೆ ಹೆಚ್ಚಿನ ಮಹತ್ವ ನೀಡಬೇಕು. ರೋಟರಿ ಸಂಸ್ಥೆ ಸಮಾಜಮುಖಿ ಕಾರ್ಯಗಳನ್ನು ಮಾಡುತ್ತ ದೇಶದ ಜನರ ಪ್ರೀತಿಗಳಿಸಿದೆ. ಇಲ್ಲಿಯ ರೋಟರಿ ಸಂಸ್ಥೆ ಮ್ಯಾರಾಥಾನ್ ಅಂತಹ ಕಾರ್ಯಕ್ರಮ ಮೂಲಕ ಆರೋಗ್ಯ ಹಾಗೂ ರಕ್ತದಾನದ ಜಾಗೃತಿ ಮೂಡಿಸುತ್ತಿದೆ. ಸಂಸ್ಥೆಯು ಹಲವಾರು ಸಮಾಜಕ್ಕೆ ಅವಶ್ಯವಿರುವ ಕಾರ್ಯಗಳನ್ನು ಮಾಡುತ್ತಿರುವುದು ಮಾದರಿಯಾಗಿದೆ. ಸಂಸ್ಥೆಯಿಂದ ಸಮಾಜಕ್ಕೆ ಇನ್ನೂ ಹೆಚ್ಚಿನ ಸೇವೆ ದೊರೆಯಲೆಂದು ಹಾರೈಸಿದರು.ಈ ಮ್ಯಾರಾಥಾನನಲ್ಲಿ 21 ಕಿ.ಮೀ, 10 ಕಿ.ಮೀ, 5 ಕಿ.ಮೀ, 3 ಕಿ.ಮೀ ಗಳಲ್ಲಿ 3 ಸಾವಿರಕ್ಕೂ ಹೆಚ್ಚು ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು. ವಿಜೇತರಿಗೆ ₹6 ಲಕ್ಷ ನಗದು ಬಹುಮಾನದೊಂದಿಗೆ ಟ್ರೋಫಿಗಳನ್ನು ನೀಡಲಾಯಿತು. ಭಾಗವಹಿಸಿದ ಎಲ್ಲ ಸ್ಫರ್ಧಿಗಳಿಗೆ ಟಿ ಶರ್ಟ್ ವಿತರಿಸಲಾಯಿತು.
ಪೂಜ್ಯರಾದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ, ಕಾಡಸಿದ್ದೇಶ್ವರ ಮಹಾಸ್ವಾಮೀಜಿ, ಮಲ್ಲಿಕಾರ್ಜುನ ಮಹಾಸ್ವಾಮೀಜಿ, ಮಲ್ಲಯ್ಯ ಮಹಾಸ್ವಾಮೀಜಿ, ಶಾಸಕರಾದ ರಮೇಶ ಜಾರಕಿಹೊಳಿ, ಹನಮಂತ ನಿರಾಣಿ, ಸಂಸದ ಈರಣ್ಣ ಕಡಾಡಿ, ರೋಟರಿ ಸಂಸ್ಥೆ ಜಿಲ್ಲಾ ಪ್ರಾಂತಪಾಲ ಅರುಣ ಭಂಡಾರೆ, ಗೋಕಾಕ ರೋಟರಿ ಅಧ್ಯಕ್ಷ ಗಿರೀಶ ಝಂವರ, ಕಾರ್ಯದರ್ಶಿ ಬಸವರಾಜ ಹುಳ್ಳೇರ, ಸೋಮಶೇಖರ ಮಗದುಮ, ಮಲ್ಲಿಕಾರ್ಜುನ ಕಲ್ಲೋಳಿ, ಜಯಾನಂದ ಮುನವಳ್ಳಿ, ಬಸವರಾಜ ಕಲ್ಯಾಣಶೆಟ್ಟಿ, ಮಹಾಂತೇಶ ತಾಂವಶಿ, ವಿಶ್ವನಾಥ ಕಡಕೋಳ ಹಾಗೂ ರೋಟರಿ ಮತ್ತು ಇನ್ನರ್ ವ್ಹೀಲ್ ಸಂಸ್ಥೆಯ ಸದಸ್ಯರು ಇದ್ದರು.ಗೋಕಾಕ ನಗರದ ಪ್ರಕೃತಿ ಸೌಂದರ್ಯದಿಂದ ಸಮೃದ್ಧವಾಗಿದೆ. ಈ ಪ್ರಕೃತಿ ಸೌಂದರ್ಯ ಮೈಸೂರು, ಕೊಡಗನ್ನು ನೆನಪಿಸುತ್ತದೆ. ಇಂತಹ ಶ್ರೇಷ್ಠ ಸ್ಥಳದಲ್ಲಿ ಜನಿಸಿದ ನೀವೆಲ್ಲ ಭಾಗ್ಯವಂತರು. ಈ ನಗರದ ಅರ್ಬನ್ ಬ್ಯಾಂಕಿನ ಸಮಾರಂಭಕ್ಕೆ ನಮ್ಮ ತಾತನವರಾದ ಜಯಚಾಮರಾಜೇಂದ್ರ ಒಡೆಯರ ಪಾಲ್ಗೊಂಡಿದ್ದರು. ಈ ಮ್ಯಾರಾಥಾನ ಯಶಸ್ವಿಯಾಗಿದ್ದು, ಇಂತಹ ಕಾರ್ಯಗಳಿಗೆ ಸದಾ ಸಹಕಾರ ನೀಡಬೇಕು.
ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಮೈಸೂರಿನ ಮಹಾರಾಜರು, ಸಂಸದ