ಸೋಮವಾರಪೇಟೆ : ಯುವಶಕ್ತಿ ದೇಶದ ಅಮೂಲ್ಯ ಸಂಪತ್ತು. ಯುವಕರು ದುಶ್ಚಟಗಳಿಗೆ ಬಲಿಯಾದರೆ ಅವರ ಭವಿಷ್ಯ ಮಾತ್ರವಲ್ಲದೆ ಇಡೀ ಕುಟುಂಬದ ನೆಮ್ಮದಿಯೂ ಹಾಳಾಗುತ್ತದೆ. ಆರೋಗ್ಯವಂತ ಸಮಾಜ ನಿರ್ಮಾಣಕ್ಕೂ ಅಡ್ಡಿಯಾಗುತ್ತದೆ. ಆದ್ದರಿಂದ ಯುವಕರು ಮಾದಕ ವಸ್ತುಗಳು ಸೇರಿದಂತೆ ಎಲ್ಲ ದುಶ್ಚಟಗಳಿಂದ ದೂರವಿರಬೇಕು. ಇಂತಹ ದುಶ್ಚಟಗಳ ದುಷ್ಪರಿಣಾಮಗಳ ಕುರಿತು ಸ್ನೇಹಿತರು ಹಾಗೂ ಸಮಾಜದಲ್ಲಿ ಜಾಗೃತಿ ಮೂಡಿಸಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ ಹೇಳಿದರು.ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮೈ ಭಾರತ್ ಕೊಡಗು, ಜಿಲ್ಲಾ ಯುವ ಒಕ್ಕೂಟ, ಸೋಮವಾರಪೇಟೆ, ವಿರಾಜಪೇಟೆ ಹಾಗೂ ಮಡಿಕೇರಿ ತಾಲೂಕು ಯುವ ಒಕ್ಕೂಟಗಳು ಮತ್ತು ಅಬ್ಬಿಮಠದ ಚೌಡೇಶ್ವರಿ ಯೂತ್ ಕ್ಲಬ್ ಸಂಯುಕ್ತ ಆಶ್ರಯದಲ್ಲಿ ತಲ್ತರೆಶೆಟ್ಟಳ್ಳಿಯ ಚೌಡೇಶ್ವರಿ ಆಟದ ಮೈದಾನದಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ಯುವ ಜನೋತ್ಸವ ಉದ್ಘಾಟಿಸಿ ಮಾತನಾಡಿದರು.
ತಾಲೂಕು ಯುವ ಒಕ್ಕೂಟದ ಅಧ್ಯಕ್ಷೆ ಕೆ.ಆರ್.ಚಂದ್ರಿಕಾ ಮಾತನಾಡಿ, ಗ್ರಾಮೀಣ ಪ್ರದೇಶದ ಯುವಕ-ಯುವತಿಯರಲ್ಲಿ ಸಾಕಷ್ಟು ಪ್ರತಿಭೆಗಳಿದ್ದು, ಅವುಗಳನ್ನು ಹೊರತರುವ ವೇದಿಕೆಗಳ ಅಗತ್ಯವಿದೆ. ಪ್ರತಿಯೊಂದು ಗ್ರಾಮದಲ್ಲೂ ಯುವಕ-ಯುವತಿ ಮಂಡಳಿಗಳು ಸ್ಥಾಪನೆಯಾಗಬೇಕು. ಗ್ರಾಮೀಣ ಜನಪದ ಕಲೆಗಳು ಮತ್ತು ಸಂಸ್ಕೃತಿ ನಶಿಸದಂತೆ ಯುವಜನತೆ ಮುಂದಿನ ಪೀಳಿಗೆಗೆ ಪರಿಚಯಿಸಬೇಕು. ಇಂತಹ ಚಟುವಟಿಕೆಗಳಿಗೆ ಸರ್ಕಾರ ಸೂಕ್ತ ಅನುದಾನ ಒದಗಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಪಿ.ಪಿ.ಸುಕುಮಾರ, ತಾಲೂಕು ಯುವ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಕೆ.ಸಿ.ಉದಯಕುಮಾರ್, ಚೌಡೇಶ್ವರಿ ಯೂತ್ ಕ್ಲಬ್ ಅಧ್ಯಕ್ಷ ಎಚ್.ಬಿ.ರಾಜಪ್ಪ, ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷರಾದ ಕಂದಾ ದೇವಯ್ಯ, ಎಂ.ಡಿ.ಹರೀಶ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎಂ.ಲೋಕೇಶ್ ಕುಮಾರ್, ಪೀಕಾರ್ಡ್ ಬ್ಯಾಂಕ್ ಅಧ್ಯಕ್ಷ ಬಿ.ಬಿ.ಸತೀಶ್, ಜೂನಿಯರ್ ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ವಿ.ಎ.ಲಾರೆನ್ಸ್, ಪ್ರಮುಖರಾದ ಎಂ.ಟಿ.ದಿನೇಶ್, ಎ.ಆರ್.ಕುಶಾಲಪ್ಪ, ರಾಜು, ಯಡೂರು ನಾಗರಾಜು, ಮಹೇಶ್, ಜಯಮ್ಮ, ರಂಜಿತಾ, ತಿಮ್ಮಯ್ಯ, ಎಂ.ಪಿ.ರವಿ ಮತ್ತಿತರರಿದ್ದರು.ಜಿಲ್ಲೆಯ ವಿವಿಧೆಡೆಯಿಂದ ಆಗಮಿಸಿದ್ದ ಯುವ ಕಲಾವಿದರು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡರು.22ಎಸ್‌ಪಿಟಿ05- ಸೋಮವಾರಪೇಟೆ ತಾಲೂಕಿನ ಅಬ್ಬಿಮಠ-ತಲ್ತಾರೆಶೆಟ್ಟಳಿ ಗ್ರಾಮದ ಚೌಡೇಶ್ವರಿ ಮೈದಾನದಲ್ಲಿ ಆಯೋಜಿಸಿದ್ದ ಯುವ ಜನೋತ್ಸವ ಕಾರ್ಯಕ್ರಮವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯಿ ಚಕ್ರವರ್ತಿ ಉದ್ಘಾಟಿಸಿದರು. ಸುಕುಮಾರ, ರಾಜಪ್ಪ, ಮೇದಪ್ಪ, ಚಂದ್ರಿಕಾ ಇದ್ದರು.22ಎಸ್‌ಪಿಟಿ06- ಸೋಮವಾರಪೇಟೆ ತಾಲೂಕಿನ ಅಬ್ಬಿಮಠ-ತಲ್ತಾರೆಶೆಟ್ಟಳಿ ಗ್ರಾಮದ ಚೌಡೇಶ್ವರಿ ಮೈದಾನದಲ್ಲಿ ಆಯೋಜಿಸಿದ್ದ ಯುವ ಜನೋತ್ಸವ ಕಾರ್ಯಕ್ರಮದಲ್ಲಿ ಯಕ್ಷಗಾನ ಪ್ರದರ್ಶನ.