ಕೊಪ್ಪಳ: ಯುವಕರಲ್ಲಿ ಅಡಗಿರುವ ಪ್ರತಿಭೆ ಗುರುತಿಸಲು ಯುವ ಸೌರಭದಂತಹ ಕಾರ್ಯಕ್ರಮ ಉತ್ತಮ ವೇದಿಕೆಯಾಗಿದ್ದು, ಯುವಕರಲ್ಲಿ ಅಡಗಿರುವ ಪ್ರತಿಭೆಗಳು ಇಂತಹ ಕಾರ್ಯಕ್ರಮಗಳ ಮೂಲಕ ಹೊರಬರಲಿವೆ ಎಂದು ಕೊಪ್ಪಳ ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಹೇಳಿದರು.
ಕಲೆ,ಸಂಸ್ಕೃತಿ ಹಾಗೂ ತಂತ್ರಜ್ಞಾನದಲ್ಲಿ ನಮ್ಮ ದೇಶದ ಯುವಕರು ಮುಂಚೂಣಿಯಲ್ಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಒಳ್ಳೆಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾರತ ದೇಶ ವಿವಿಧತೆಯಲ್ಲಿ ಏಕತೆ ಕಾಣುವ ದೇಶವಾಗಿದ್ದು ಇಲ್ಲಿ ನಾವೆಲ್ಲರೂ ಒಂದೇ ತಾಯಿಯ ಮಕ್ಕಳಂತೆ ಬಾಳುತ್ತಿದ್ದೇವೆ. ಸರ್ಕಾರ ಮಹಿಳೆಯರಿಗಾಗಿ ಹಲವಾರು ಯೋಜನೆ ಜಾರಿಗೆ ತಂದಿದೆ. ಹೆಣ್ಣು ಮಕ್ಕಳು ದೇಶದ ಭವಿಷ್ಯ ನಿರ್ಮಿಸುವ ನಮ್ಮ ಸಮಾಜದ ಶಕ್ತಿ ಆಗಿದ್ದಾರೆ. ಹೆಣ್ಣು ಕಲಿತರೆ ಕುಟುಂಬ ಹಾಗೂ ಸಮಾಜ ಕಲಿತ ಹಾಗೆ ಎಂದು ಹೇಳಿದರು.
ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ರೆಡ್ಡಿ ಶ್ರೀನಿವಾಸ ಮಾತನಾಡಿ, ನಮ್ಮ ಹಿಂದಿನಿಂದ ನಡೆದುಕೊಂಡು ಬಂದಿರುವ ಸಂಸ್ಕೃತಿ ಹಾಗೂ ಪರಂಪರೆ ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ. ಸರ್ಕಾರ ಯುವಕರ ಕಲಿಕೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಹಾಸ್ಟೆಲ್ ಸೌಲಭ್ಯ, ಲ್ಯಾಪ್‌ಟಾಪ್ ವಿತರಣೆ, ಡಿಗ್ರಿ ಹಾಗೂ ಡಿಪ್ಲೊಮಾ ಪಾಸಾದ ಯುವಕರಿಗೆ ಯುವನಿಧಿ ಯೋಜನೆಗಳಂತಹ ಹಲವಾರು ಸೌಲಭ್ಯ ನೀಡುವ ಮೂಲಕ ಅವರ ಕಲಿಕೆಗೆ ಒತ್ತು ನೀಡುತ್ತಿದ್ದು ಯುವಕರು ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಚೆನ್ನಾಗಿ ಕಲಿತು ತಮ್ಮ ತಂದೆ- ತಾಯಿಯರಿಗೆ ಒಳ್ಳೆಯ ಹೆಸರು ತರಬೇಕೆಂದು ಹೇಳಿದರು.ಹಿರಿಯ ಸಾಹಿತಿ ಹಾಗೂ ಸಾಂಸ್ಕೃತಿಕ ಚಿಂತಕ ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಮಾನವೀಯತೆಯನ್ನು ನಾವೆಲ್ಲರೂ ಬೆಳೆಸಿಕೊಂಡು ಹೋಗಬೇಕಿದೆ. ನಮ್ಮ ಶರಣರಿಗೆ ಮಹತ್ವ ಏಕಿದೆ ಎಂದರೆ ಅವರು ನುಡಿದಂತೆ ನಡೆದರು. ಮಕ್ಕಳು ಓದುವುದರ ಜತೆಗೆ ಮನೆಯ ಕೆಲಸ ಕಾರ್ಯ ಮಾಡಿ ಶ್ರಮ ಹಂಚಿಕೊಂಡು ತಮ್ಮ ತಂದೆ-ತಾಯಿ ಕೆಲಸ ಕಾರ್ಯಗಳಲ್ಲಿ ಸಹಾಯ ಮಾಡಬೇಕು. ಕನ್ನಡ ಜತೆಗೆ ತಮಿಳು, ತೆಲಗು, ಮರಾಠಿ ಎಷ್ಟು ಭಾಷೆ ಕಲಿತರು ಸಂತೋಷ ಆದರೆ ಕನ್ನಡ ಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂದು ಹೇಳಿದರು.
ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮಾತನಾಡಿ, ಯುವಕರ ಮೇಲೆ ಸರ್ಕಾರ ಬಹಳಷ್ಟು ಭರವಸೆ ಇಟ್ಟುಕೊಂಡು ಅವರ ಕಲಿಕೆಗೆ ಹೆಚ್ಚಿನ ಒತ್ತು ನೀಡುವುದರ ಜತೆಗೆ ಯುವ ಪ್ರತಿಭೆ ಹಾಗೂ ಅವರ ಕೌಶಲ್ಯ ಹೊರ ತರಲು ಇಂತಹ ಕಾರ್ಯಕ್ರಮ ಆಯೋಜನೆ ಮಾಡುತ್ತಿದೆ. ಈ ನಿಟ್ಟಿನಲ್ಲಿ ಮಹಿಳಾ ಕಾಲೇಜಿನಲ್ಲಿ ಯುವ ಸೌರಭದಂತಹ ಕಾರ್ಯಕ್ರಮ ಆಯೋಜನೆ ಮಾಡಿರುವುದು ವಿಶೇಷವಾಗಿದೆ. ಎಲ್ಲರೂ ತಮ್ಮ ಕಲಿಕೆಯ ಜತೆಗೆ ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ತಮ್ಮ ಪ್ರತಿಭೆಗಳ ಪ್ರದರ್ಶನ ನೀಡಬೇಕೆಂದು ಹೇಳಿದರು.ಸುಗಮ ಸಂಗೀತ, ಜಾನಪದ ಗೀತೆಗಳು ಮತ್ತು ಸಮೂಹ ನೃತ್ಯ ಸೇರಿದಂತೆ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಸಿ.ವಿ.ಜಡಿ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ನಾಟಕ ಅಕಾಡೆಮಿ ಸದಸ್ಯ ಚಾಂದಪಾಷಾ ಕಿಲ್ಲೆದಾರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕರ್ಣಕುಮಾರ, ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಾ.ಗಣಪತಿ ಕೆ.ಲಮಾಣಿ, ನಿವೃತ್ತ ಪಾಂಶುಪಾಲ ಬಿ.ಜಿ. ಕರಿಗಾರ, ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಪ್ರಾಧ್ಯಾಪಕ ಡಾ. ಹುಲಿಗೆಮ್ಮ ಸೇರಿದಂತೆ ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಉಪನ್ಯಾಸಕರು, ಸಿಬ್ಬಂದಿ ಹಾಗೂ ವಿದ್ಯಾರ್ಥಿನಿಯರು ಸೇರಿದಂತೆ ಇತರೆ ಹಲವಾರು ಜನರು ಉಪಸ್ಥಿತರಿದ್ದರು.