ಕನ್ನಡಪ್ರಭ ವಾರ್ತೆ ಹಾಸನ
ಯುವಕರ ಈ ಹುಚ್ಚಾಟದಿಂದ ಕೆಲವು ಸಮಯ ರಸ್ತೆಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಆಟೋದಲ್ಲಿ ಸಂಚರಿಸುತ್ತಿದ್ದ ಐವರು ಯುವಕರು ನಗರದ ವಿವಿಧ ಮುಖ್ಯ ಭಾಗಗಳಲ್ಲಿ ಅತಿವೇಗವಾಗಿ ವಾಹನ ಚಲಾಯಿಸುತ್ತಾ ಸಿಕ್ಕಸಿಕ್ಕ ವಾಹನಗಳಿಗೆ ಡಿಕ್ಕಿ ಹೊಡೆದು ಹುಚ್ಚಾಟ ಮೆರೆದಿದ್ದಾರೆ. ಆಟೋ ಅತಿವೇಗದಿಂದ ಸಂಚರಿಸಿದ ಕಾರಣ ರಸ್ತೆಗಳಲ್ಲಿ ಸಂಚರಿಸುತ್ತಿದ್ದ ವಾಹನ ಸವಾರರು ಹಾಗೂ ಪಾದಚಾರಿಗಳು ಭಯಭೀತರಾಗಿದ್ದು, ಕೆಲವರು ತಕ್ಷಣ ವಾಹನಗಳನ್ನು ನಿಲ್ಲಿಸಿ ದೂರ ಸರಿದಿದ್ದಾರೆ. ಯುವಕರ ಅಜಾಗರೂಕ ಚಾಲನೆಯ ಪರಿಣಾಮವಾಗಿ ಮೂರು ಬೈಕ್‌ಗಳಿಗೆ ಹಾನಿಯಾಗಿದ್ದು, ನಾಲ್ವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡವರನ್ನು ಸ್ಥಳೀಯರು ಸಮೀಪದ ಆಸ್ಪತ್ರೆಗಳಿಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ.
ಈ ಘಟನೆಯಿಂದ ರೊಚ್ಚಿಗೆದ್ದ ಸಾರ್ವಜನಿಕರು ಆಟೋವನ್ನು ತಡೆದು ಯುವಕರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದರು. ಬಳಿಕ ಪರಿಸ್ಥಿತಿ ಗಂಭೀರವಾಗದಂತೆ ಕೆಲವು ಸ್ಥಳೀಯರು ಮಧ್ಯಪ್ರವೇಶ ಮಾಡಿ ಅವರನ್ನು ಹಾಸನ ನಗರ ಪೊಲೀಸ್ ಠಾಣೆಯ ಪೊಲೀಸರಿಗೆ ಒಪ್ಪಿಸಿದರು. ಯುವಕರು ಮದ್ಯಪಾನ ಅಥವಾ ಗಾಂಜಾ ಸೇವಿಸಿ ಆಟೋ ಚಾಲನೆ ಮಾಡುತ್ತಿದ್ದಾರೆಯೇ ಎಂಬ ಅನುಮಾನವೂ ವ್ಯಕ್ತವಾಗಿದ್ದು, ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಟೋವನ್ನು ವಶಕ್ಕೆ ಪಡೆದಿರುವ ಪೊಲೀಸರು ಯುವಕರನ್ನು ವಿಚಾರಣೆ ನಡೆಸಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ಕೈಗೊಂಡಿದ್ದಾರೆ.ನಗರದ ರಸ್ತೆಗಳಲ್ಲಿ ಇತ್ತೀಚೆಗೆ ಅತಿವೇಗದ ಚಾಲನೆ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.