ಶ್ರೀ ಭೈರವೇಶ್ವರ ಸ್ವಾಮಿ ಹಬ್ಬದ ಪ್ರಯುಕ್ತ ಇಂದು ನಾಟಕ ಪ್ರದರ್ಶನ

KannadaprabhaNewsNetwork |  
Published : Mar 15, 2026, 01:30 AM IST
14ಎಚ್ಎಸ್ಎನ್6 : ನಾಟಕ ತರಬೇತಿಯಲ್ಲಿ ತೊಡಗಿರುವ ತಂಡ. | Kannada Prabha

ಸಾರಾಂಶ

ಹಿರೀಸಾವೆ ಹೋಬಳಿಯ ಉಳ್ಳಾವಳ್ಳಿ ಗ್ರಾಮದ ಕಲಾವಿದರ ತಂಡ ನಾಟಕಗಳ ಪ್ರದರ್ಶನದಲ್ಲಿ ಪ್ರಸಿದ್ಧಿ ಪಡೆದಿದ್ದು ತನ್ನದೇ ಆದ ಮಹತ್ವವನ್ನು ಇಂದಿಗೂ ಉಳಿಸಿಕೊಂಡಿದೆ. ಪೂರ್ವಜರನ್ನು ಹಿಂಬಾಲಿಸಿ ತಂದೆ ನಂತರ ಮಕ್ಕಳು, ಮನೆಗೊಬ್ಬರಂತೆ ಕಲಾವಿದರು ಹುಟ್ಟಿಕೊಂಡಿರುವುದು ಹೆಮ್ಮೆಯ ವಿಚಾರ ಎಂಬುದು ಗ್ರಾಮಸ್ಥರಲ್ಲಿ ಹಿರಿಮೆ ಮೂಡಿಸಿದೆ. ಒಂದು ಶತಮಾನಕ್ಕೂ ಹಿಂದಿನ ಪರಂಪರೆಯನ್ನು ಇಂದಿಗೂ ಸಹ ಭಕ್ತಿಭಾವದಿಂದ ಸೌಹಾರ್ದತೆಯ ಸಂಕೇತವಾಗಿ ಕಲಾ ಪ್ರದರ್ಶನವನ್ನು ಶ್ರೀ ಭೈರವೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ಮಾಡಿಕೊಂಡುಬರುತ್ತಿದೆ.

ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ

ನಿರೀಕ್ಷೆ ಹಾಗೂ ಊಹಿಸಲಾಗದಷ್ಟು ಮಟ್ಟದಲ್ಲಿ ಬೆಳೆಯುತ್ತಿರುವ ಅತ್ಯಾಧುನಿಕ ಜಗತ್ತು ಹಾಗೂ ದೂರದರ್ಶನ, ಧಾರಾವಾಹಿ, ಸಿನಿಮಾ ಹಾಗೂ ಡಿಜಿಟಲ್ ಮಾಧ್ಯಮಗಳ ಪ್ರಭಾವದ ನಡುವೆಯೂ ಗ್ರಾಮೀಣ ಪ್ರದೇಶಗಳಲ್ಲಿ ಪೌರಾಣಿಕ ನಾಟಕದ ಕಲೆಯು ಇಂದಿಗೂ ಜೀವಂತವಾಗಿರುವುದು ಒಂದು ವಿಶೇಷ ಸಂಗತಿ.

ತಾಲೂಕು ಹಿರೀಸಾವೆ ಹೋಬಳಿಯ ಉಳ್ಳಾವಳ್ಳಿ ಗ್ರಾಮದ ಕಲಾವಿದರ ತಂಡ ನಾಟಕಗಳ ಪ್ರದರ್ಶನದಲ್ಲಿ ಪ್ರಸಿದ್ಧಿ ಪಡೆದಿದ್ದು ತನ್ನದೇ ಆದ ಮಹತ್ವವನ್ನು ಇಂದಿಗೂ ಉಳಿಸಿಕೊಂಡಿದೆ. ಪೂರ್ವಜರನ್ನು ಹಿಂಬಾಲಿಸಿ ತಂದೆ ನಂತರ ಮಕ್ಕಳು, ಮನೆಗೊಬ್ಬರಂತೆ ಕಲಾವಿದರು ಹುಟ್ಟಿಕೊಂಡಿರುವುದು ಹೆಮ್ಮೆಯ ವಿಚಾರ ಎಂಬುದು ಗ್ರಾಮಸ್ಥರಲ್ಲಿ ಹಿರಿಮೆ ಮೂಡಿಸಿದೆ. ಒಂದು ಶತಮಾನಕ್ಕೂ ಹಿಂದಿನ ಪರಂಪರೆಯನ್ನು ಇಂದಿಗೂ ಸಹ ಭಕ್ತಿಭಾವದಿಂದ ಸೌಹಾರ್ದತೆಯ ಸಂಕೇತವಾಗಿ ಕಲಾ ಪ್ರದರ್ಶನವನ್ನು ಶ್ರೀ ಭೈರವೇಶ್ವರ ಕೃಪಾ ಪೋಷಿತ ನಾಟಕ ಮಂಡಳಿ ಮಾಡಿಕೊಂಡುಬರುತ್ತಿದೆ.

ಹಿರಿಯರ ಮಾರ್ಗದರ್ಶನದಲ್ಲಿ ೩೦ ಕ್ಕೂ ಹೆಚ್ಚು ಯುವಕರ ತಂಡ ಬಣ್ಣ ಹಾಕುತ್ತಿದೆ. ದಿ. ರಂಗಶೆಟ್ಟಿ, ದಿ. ಕೃಷ್ಣೇಗೌಡ, ದಿ.ಸೀನಪ್ಪ, ದಿ. ತಿಮ್ಮೇಗೌಡ, ದಿ. ಬಸವರಾಜು, ದಿ. ಚಂದ್ರು ಅವರು ಈಗಿನ ಯುವ ಕಲಾವಿದರಿಗೆ ಸ್ಫೂರ್ತಿಯಾಗಿದ್ದಾರೆ. ಮಾರ್ಚ್‌ ತಿಂಗಳ ೧೫ರಂದು ಗ್ರಾಮದೇವತೆ ಶ್ರೀ ಭೈರವೇಶ್ವರ ಸ್ವಾಮಿಯ ಹಬ್ಬ ಹಾಗೂ ಜಾತ್ರಾ ಮಹೋತ್ಸವ ನಡೆಯಲಿದೆ. ಕಳಶೋತ್ಸವ, ಕೆಂಡ ಕೊಂಡೋತ್ಸವ ಮುಗಿದು ನಂತರ ಗ್ರಾಮದೊಳಗೆ ಜಗಮಗಿಸುವ ಬೆಳಕಿನಲ್ಲಿ ಬಂದೂರು ಡ್ರಾಮಾ ಸೀನರಿಯಲ್ಲಿ ನಾಟಕ ಪ್ರದರ್ಶನ ನಡೆಯುತ್ತದೆ.

ಗ್ರಾಮದ ರೈತರು, ಯುವಕರು, ಕಾರ್ಮಿಕರು, ವ್ಯಾಪಾರಸ್ಥರು, ಆಟೋ, ಕಾರು ಚಾಲಕರು, ವಿದ್ಯಾರ್ಥಿಗಳು, ಬಣ್ಣ ಹಚ್ಚಿ ಕಲಾ ಪ್ರದರ್ಶನ ಮಾಡಲಿದ್ದಾರೆ. ಇವರೆಲ್ಲ ಕಲಾವಿದರಾಗಿ ರೂಪಾಂತರವಾದ ನಂತರ ಪಾತ್ರಗಳನ್ನು ತನ್ನೊಳಗೆ ಆವಾಹನೆ ಮಾಡಿಕೊಂಡು ನಾಟಕ ಪ್ರದರ್ಶಿಸುವ ಶಿಸ್ತುಬದ್ಧತೆ ಸಿನಿಮಾ ಕಲಾವಿದರನ್ನು ನಾಚಿಸುವಂತಿರುತ್ತದೆ.

ಗ್ರಾಮದ ದಿ. ಕಲ್ಲಳ್ಳಿ ನಿಂಗೇಗೌಡ ಅವರು ಹಾರ್ಮೋನಿಯಂ ನುಡಿಸುವ ಮೂಲಕ ಕಲೆಯನ್ನು ತನ್ನೂರಿನ ಕಲಾವಿದರಿಗೆ ಕರಗತಗೊಳಿಸಿದ್ದಾರೆ. ಅದರಂತೆ ಇಂದಿಗೂ ಸಹ ಗ್ರಾಮದಲ್ಲಿ ಅವರ ಹೆಸರು ಚಿರವಾಗಿ ಉಳಿದಿದೆ. ಅಲ್ಲದೆ ಪೂರ್ವಜರು ಮಹಾಭಾರತ, ರಾಮಾಯಣ ಸೇರಿದಂತೆ ವಿವಿಧ ಪೌರಾಣಿಕ ನಾಟಕಗಳನ್ನು ಮಾಡುತ್ತಿದ್ದರು ಎಂದು ಹಿರಿಯರಾದ ತಮ್ಮಯ್ಯಣ್ಣ ಹೇಳುತ್ತಾರೆ. ಚನ್ನರಾಯಪಟ್ಟಣ ತಾಲೂಕು ನೇರಲಕೆರೆ ಗ್ರಾಮದ ಪೌರಾಣಿಕ ನಾಟಕಗಳ ಮಹಿಳಾ ಸಂಗೀತ ನಿರ್ದೇಶಕಿ ಸವಿತಾ ಕುಮಾರ್ ಅವರ ನಿರ್ದೇಶನದಲ್ಲಿ ನಾಟಕ ಪ್ರದರ್ಶನ ನಡೆಯಲಿದೆ.

ಮಾರ್ಚ್ ೧೫ರಂದು ನಮ್ಮ ಗ್ರಾಮದಲ್ಲಿ ಶ್ರೀ ಭೈರವೇಶ್ವರ ಸ್ವಾಮಿಯ ಹಬ್ಬ ಹಾಗೂ ಜಾತ್ರಾ ಮಹೋತ್ಸವ ನಡೆಯಲಿದೆ. ಪ್ರಯುಕ್ತ ಶ್ರೀ ಭೈರವೇಶ್ವರ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ಗ್ರಾಮಸ್ಥರ ಸಹಕಾರದೊಂದಿಗೆ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಎಂಬ ಪೌರಾಣಿಕ ನಾಟಕವನ್ನು ಯುವಕರು ಅದ್ಭುತವಾಗಿ ಪ್ರದರ್ಶನ ಮಾಡಲಿದ್ದು ಕಲಾಭಿಮಾನಿಗಳು ಪಾಲ್ಗೊಂಡು ಪ್ರೋತ್ಸಾಹ ನೀಡಬೇಕು ಎಂದು ದಿಡಗ ಕೃಷಿ ಪತ್ತಿನ ಸಹಕಾರ ಸಂಘದ ಮಾಜಿ ಅಧ್ಯಕ್ಷ ಎಚ್. ಕೆ. ಯೋಗೇಶ್ ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಹುಲ್‌ ಗಾಂಧಿ ನಡೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಜನಪರ ಯೋಜನೆಗಳಲ್ಲಿ ಎಸ್‌. ಬಂಗಾರಪ್ಪ ಜೀವಂತ: ಸಚಿವ ಮಧು ಬಂಗಾರಪ್ಪ