ಸಂವಿಧಾನದಿಂದ ಮಾತ್ರ ಜಾತಿವಾರು ಪ್ರಾತಿನಿಧ್ಯ ಸಿಗಲು ಸಾಧ್ಯ

KannadaprabhaNewsNetwork |  
Published : Mar 15, 2026, 01:30 AM IST
14ಎಂಎನ್‌ಡಿ-3ಮಂಡ್ಯದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಜನಜಾಗೃತಿ ಸಮಾವೇಶದಲ್ಲಿ ಅಂತರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಭಾನುಮುಷ್ತಾಕ್ ಮಾತನಾಡಿದರು. | Kannada Prabha

ಸಾರಾಂಶ

ಪ್ರಸ್ತುತ ಸನ್ನಿವೇಶದಲ್ಲಿ ಐಎಎಸ್ ಸೇರಿದಂತೆ ಉನ್ನತ ಹುದ್ದೆಗಳಲ್ಲಿ ಬಹುತೇಕರು ಮೇಲ್ವರ್ಗದವರೇ ಇದ್ದಾರೆ. ಏಕೆ?, ಇತರೆ ಜಾತಿ ಜನಾಂಗಗಳಲ್ಲಿ ಪ್ರತಿಭಾವಂತರಿಲ್ಲವೇ?, ಇಂತಹ ಜಾಗೃತಿಗಾಗಿಯೇ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅಗತ್ಯ ಮತ್ತು ಮೌಲಿಕತೆಯ ಅರಿವಾಗುತ್ತದೆ. ಸಂವಿಧಾನವನ್ನು ಪಾಲಿಸದಿದ್ದರೆ ಪ್ರಜಾಪ್ರಭುತ್ವ ಉಳಿಯಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಈ ದೇಶದಲ್ಲಿ ಬಿಜೆಪಿ ಬಂದಾಗಲಿಂದಲೂ ಸಂವಿಧಾನ ಬದಲಿಸುತ್ತೇವೆ ಎನ್ನುತ್ತಿದ್ದಾರೆ. ಬದಲಿಸುವ ಅಗತ್ಯವಿಲ್ಲದಿದ್ದರೂ ಪದೇ ಪದೇ ಒತ್ತಿ ಹೇಳುತ್ತಿದ್ದಾರೆ. ಆದರೆ, ಈ ದೇಶದ ಆತ್ಮವಾಗಿರುವ ಸಂವಿಧಾನದಿಂದ ಮಾತ್ರ ಜಾತಿವಾರು ಪ್ರಾತಿನಿಧ್ಯ ಸಿಗಲು ಸಾಧ್ಯ ಎಂದು ಅಂತಾರಾಷ್ಟ್ರೀಯ ಬುಕರ್ ಪ್ರಶಸ್ತಿ ಪುರಸ್ಕೃತ ಸಾಹಿತಿ ಬಾನು ಮುಷ್ತಾಕ್ ಪ್ರತಿಪಾದಿಸಿದರು.

ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕದಸಂಸ ಹಾಗೂ ಡಾ.ಎಂ.ಬಿ.ಶ್ರೀನಿವಾಸ್ ಪ್ರತಿಷ್ಠಾನದಿಂದ ಏರ್ಪಡಿಸಿದ್ದ ಸಂವಿಧಾನ ಮತ್ತು ಪ್ರಜಾಪ್ರಭುತ್ವ ಉಳಿವಿಗಾಗಿ ಜನಜಾಗೃತಿ ಸಮಾವೇಶ ಮತ್ತು ಅಭಿನಂದನಾ ಸಮಾರಂಭ, ಎಂ.ಬಿ. ಶ್ರೀನಿವಾಸ್ ನೆನಪಿನಲ್ಲಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.

ಪ್ರಸ್ತುತ ಸನ್ನಿವೇಶದಲ್ಲಿ ಐಎಎಸ್ ಸೇರಿದಂತೆ ಉನ್ನತ ಹುದ್ದೆಗಳಲ್ಲಿ ಬಹುತೇಕರು ಮೇಲ್ವರ್ಗದವರೇ ಇದ್ದಾರೆ. ಏಕೆ?, ಇತರೆ ಜಾತಿ ಜನಾಂಗಗಳಲ್ಲಿ ಪ್ರತಿಭಾವಂತರಿಲ್ಲವೇ?, ಇಂತಹ ಜಾಗೃತಿಗಾಗಿಯೇ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅಗತ್ಯ ಮತ್ತು ಮೌಲಿಕತೆಯ ಅರಿವಾಗುತ್ತದೆ. ಸಂವಿಧಾನವನ್ನು ಪಾಲಿಸದಿದ್ದರೆ ಪ್ರಜಾಪ್ರಭುತ್ವ ಉಳಿಯಲ್ಲ. ಈಗಿನ ಸನ್ನಿವೇಶ ಎತ್ತ ಸಾಗುತ್ತಿದೆ ಎಂಬುದನ್ನು ಅವಲೋಕಿಸಿದರೆ ಆತಂಕವಾಗುತ್ತದೆ. ಯಾರು ಯಾರನ್ನು ಬೇಕಾದರೂ ಕೊಲ್ಲಬಹುದು, ವಿನಾಕಾರಣ ರಕ್ತಪಾತವಾಗುತ್ತಿದೆ. ಹೀಗಿರುವಾಗ ನಮಗಿರುವ ಒಂದು ಆಶಾಕಿರಣವೆಂದರೆ ಅಂಬೇಡ್ಕರ್ ಎಂದರು.

ಎಲ್ಲೆಲ್ಲೂ ಹಿಂಸೆ, ಯುದ್ಧದ ಭಯಾನಕ ಚಿತ್ರಣ ನಮ್ಮ ಕಣ್ಣಮುಂದೆ ಬರುತ್ತದೆ. ಸಹಬಾಳ್ವೆಯೇ ನಮ್ಮ ಸಂಸ್ಕೃತಿ, ಬಹುಸಂಸ್ಕೃತಿಯಲ್ಲಿ ಭಿನ್ನತೆ ಎಂಬುದು ನಾಶಪಡಿಸುವುದಲ್ಲ. ಜೊತೆಯಾಗಿ ಬದುಕುವುದಾಗಿದೆ. ಸಂವಿಧಾನ ಎಂಬುದು ಕೇವಲ ಪುಸ್ತಕವಲ್ಲ ಅದೊಂದು ನೈತಿಕ ಒಪ್ಪಂದ, ಒಬ್ಬರು ಮತ್ತೊಬ್ಬರನ್ನು ಗೌರವಿಸುವಂತಹ ಒಪ್ಪಂದ ಎಂದು ವಿಶ್ಲೇಷಿಸಿದರು.

ಈಗ ನಮಗಿರುವ ಆತಂಕವೆಂದರೆ, ನಮ್ಮ ಮುಂದಿನ ತಲೆಮಾರಿನವರ ಬದುಕು ಹೇಗೆ? ಅವರ ಕಾಲದ ತಲ್ಲಣಗಳಿಗೆ ಪರಿಹಾರವೇನು ಎಂಬುದನ್ನು ಚಿಂತಿಸಿದರೆ ನಿಜಕ್ಕೂ ಕಳವಳ ಮೂಡುತ್ತದೆ. ಅದಕ್ಕಾಗಿಯೇ ಇಂತಹ ಸಂವಿಧಾನದ ಜಾಗೃತಿ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು. ಮಕ್ಕಳ ಮನೋಪಟಲದಲ್ಲಿ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಅಗತ್ಯದ ಕುರಿತು ಜಾಗೃತಿ ಮೂಡಬೇಕಿರುವುದು ಇಂದಿನ ಅತ್ಯಗತ್ಯ ಎಂದು ಸಲಹೆ ನೀಡಿದರು.

ಹಾಗಾಗಿ ಸಂವಿಧಾನವನ್ನು ಪಾಲಿಸಿದರೆ ಮಾತ್ರ ಪ್ರಜಾಪ್ರಭುತ್ವ ಉಳಿಯುತ್ತದೆ. ನಮ್ಮ ಆತ್ಮಗೌರವ ಉಳಿಯಬೇಕಾದರೆ ಸಂವಿಧಾನ ಇರಲೇಬೇಕು. ಅನ್ಯಾಯ ಮತ್ತು ಮೌನ ಎರಡೂ ಸೇರಿದರೆ ದೇಶಕ್ಕೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.

ಶಾಸಕ ಪಿ.ರವಿಕುಮಾರ್‌ಗೌಡ ಮಾತನಾಡಿ, ಈ ದೇಶದಲ್ಲಿ ಸಂವಿಧಾನ ಉಳಿಸುವಂತೆ ಹೋರಾಡಬೇಕಾಗಿರುವುದು ವಿಷಾಧಕರ ಸಂಗತಿ. ಅದರಲ್ಲೂ ಬಿಜೆಪಿಯ ಕೇಂದ್ರ ಸರ್ಕಾರದ ನಾಯಕರು ಅಕ್ಕಪಕ್ಕದ ರಾಷ್ಟ್ರಗಳೊಂದಿಗೆ ಯಾವುದೇ ರೀತಿಯ ಸೌಹಾರ್ಧತೆಯನ್ನು ಹೊಂದಿಲ್ಲ. ಹಿಂದೂಪರ ಅಂತಾರೆ, ಬಾಂಗ್ಲಾದಲ್ಲಿ ಹಿಂದೂಗಳ ಮಾರಣ ಹೋಮವಾದರೆ ಇವರು ದನಿ ಎತ್ತುವುದಿಲ್ಲ. ಚುನಾವಣೆ ಬಂದಾಗ ಮಾತ್ರ ದೇಶದ ಅಸ್ಮಿತೆಯನ್ನು ಕೊಂಡಾಡುತ್ತಾರೆ. ಸರಿಯಾದ ನೀತಿ, ನಿಲುವು, ಸ್ಪಷ್ಟತೆಯೇ ಇಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.

ದಸಂಸ ಮುಖಂಡ ಎಂ.ವಿ.ಕೃಷ್ಣ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ, ನಗರದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರತಿಮೆ ನಿರ್ಮಾಣ ಮಾಡಬೇಕೆಂದು ಶಾಸಕರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಬಾನು ಮುಷ್ತಾಕ್ ಅವರನ್ನು ಗಣ್ಯರು ಅಭಿನಂದಿಸಿದರು. ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಎಂ.ಬಿ.ಶ್ರೀನಿವಾಸ್ ಪ್ರತಿಷ್ಠಾನದಿಂದ ಬ್ಯಾಗ್‌ಗಳನ್ನು ವಿತರಿಸಲಾಯಿತು. ಬಳಿಕ ಡಾ.ಕೆ.ಪಿ.ಮಹಾಲಿಂಗ ಕಲ್ಕುಂದ ಅವರ ‘ಕಲ್ಯಾಣದ ಬೆಳಕು ಬಸವಣ್ಣ’ ಕೃತಿಯನ್ನು ಬಿಡುಗಡೆಗೊಳಿಸಲಾಯಿತು.

ಕಾರ್ಯಕ್ರದಲ್ಲಿ ಕಸಾಪದ ಮಾಜಿ ಅಧ್ಯಕ್ಷೆ ಮೀರಾ ಶಿವಲಿಂಗಯ್ಯ, ಸಣ್ಣಕೈಗಾರಿಕೆಗಳ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆವಿಜಯಲಕ್ಷ್ಮಿ ರಘುನಂದನ್, ಎಲ್ಲರೊಳಗೊಂದಾಗು ಮಂಕುತಿಮ್ಮ ಟ್ರಸ್ಟ್‌ನ ಅಧ್ಯಕ್ಷ ವಿನಯ್, ಟಿ.ಡಿ.ನಾಗರಾಜು, ಶೋಭಾ ಶ್ರೀನಿವಾಸ್, ಡಿ.ದೆವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಅಧ್ಯಕ್ಷ ಎಲ್.ಸಂದೇಶ್, ಆನಂದ್, ಚಿಕ್ಕಮಂಡ್ಯ ಆನಂದ್, ಕೆ.ಬಿ.ರಾಮು ಮತ್ತಿತರರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರಾಹುಲ್‌ ಗಾಂಧಿ ನಡೆ ಖಂಡಿಸಿ ಬಿಜೆಪಿ ಪ್ರತಿಭಟನೆ
ಜನಪರ ಯೋಜನೆಗಳಲ್ಲಿ ಎಸ್‌. ಬಂಗಾರಪ್ಪ ಜೀವಂತ: ಸಚಿವ ಮಧು ಬಂಗಾರಪ್ಪ