ಇಂದಿನಿಂದ ಪ್ರತಿ ಕ್ಷೇತ್ರಗಳಲ್ಲಿ ಯುವ ಚೌಪಾಲ್ ಅಭಿಯಾನ

KannadaprabhaNewsNetwork | Published : Feb 25, 2024 1:48 AM

ಸಾರಾಂಶ

ಎಲ್ಲಾ ಕ್ಷೇತ್ರಗಳಲ್ಲಿ ಶಾಸಕರು ತಂತಮ್ಮ ಸ್ವಂತ ಗ್ರಾಮಗಳಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. 18ರಿಂದ 25 ವರ್ಷದೊಳಗಿನ ಕನಿಷ್ಠ 50 ಮಂದಿ ಯುವ ಮತದಾರರನ್ನು ಸೇರಿಸಿ, ಅವರಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಮತ್ತು ಸಾಧನೆಗಳ ಬಗ್ಗೆ ಅರಿವು ಮೂಡಿಸಲಾಗುವುದು.

ಕನ್ನಡಪ್ರಭ ವಾರ್ತೆ ಉಡುಪಿಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಸೂಚನೆಯಂತೆ ಫೆ.25ರಿಂದ 10 ದಿನ ಜಿಲ್ಲೆಯ ಎಲ್ಲ 8 ವಿಧಾನಸಭಾ ಕ್ಷೇತ್ರಗಳಲ್ಲಿ ಯುವ ಚೌಪಾಲ್ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಸುದ್ದಿಗೋಷ್ಠಿಯಲ್ಲಿ ಹೇಳಿದರು.ಎಲ್ಲಾ ಕ್ಷೇತ್ರಗಳಲ್ಲಿ ಶಾಸಕರು ತಂತಮ್ಮ ಸ್ವಂತ ಗ್ರಾಮಗಳಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. 18ರಿಂದ 25 ವರ್ಷದೊಳಗಿನ ಕನಿಷ್ಠ 50 ಮಂದಿ ಯುವ ಮತದಾರರನ್ನು ಸೇರಿಸಿ, ಅವರಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜನಪರ ಯೋಜನೆಗಳ ಮತ್ತು ಸಾಧನೆಗಳ ಬಗ್ಗೆ ಅರಿವು ಮೂಡಿಸಲಾಗುವುದು. ನಂತರ ಪ್ರತಿದಿನ 3-4 ಗ್ರಾಮಗಳಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಮಾ.5ರ ವರೆಗೆ ಈ ಅಭಿಯಾನ ನಡೆಯುತ್ತದೆ ಎಂದವರು ಹೇಳಿದರು.ಅಲ್ಲದೇ ಈಗಾಗಲೇ ಇತರ ಸರಣಿ ಅಭಿಯಾನಗಳನ್ನು ನಡೆಸಲಾಗುತ್ತಿದೆ. ಪ್ರತಿ ಗ್ರಾಮಗಳಲ್ಲಿ ಸ್ವಸಹಾಯ ಸಂಘಗಳ ಸದಸ್ಯರಿಗೆ ಕೇಂದ್ರ ಸರ್ಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಶಕ್ತಿ ವಂದನಾ, ಪ್ರತಿಯೊಬ್ಬ ಕಾರ್ಯಕರ್ತನು ಗ್ರಾಮ ವಾಸ್ತವ್ಯ ನಡೆಸಿ ಸರ್ಕಾರದ ಯೋಜನೆಗಳ ಜಾರಿಯಾಗಿರುವ ಬಗ್ಗೆ ವರದಿ ನೀಡುವ ಗ್ರಾಮ ಚಲೋ, ಕೇಂದ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮಾವೇಶ ಲಾಬಾರ್ಥಿ ಸಂಪರ್ಕ ಅಭಿಯಾನಗಳು ನಡೆಯುತ್ತಿವೆ ಎಂದವರು ಹೇಳಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ರೇಶ್ಮಾ ಉದಯ ಶೆಟ್ಟಿ, ರಾಘವೇಂದ್ರ ಕಿಣಿ, ಜಿಲ್ಲಾ ವಕ್ತಾರ ವಿಜಯಕುಮಾರ್ ಉದ್ಯಾವರ, ಮಾಧ್ಯಮ ಸಂಚಾಲಕ ಶ್ರೀನಿಧಿ ಹೆಗ್ಡೆ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಶಿವಕುಮಾರ್ ಅಂಬಲಪಾಡಿ ಉಪಸ್ಥಿತರಿದ್ದರು.ಮಾ.6ರಿಂದ ಅಯೋಧ್ಯೆಗೆ ವಿಶೇಷ ರೈಲುಅಯೋಧ್ಯೆ ರಾಮನ ದರ್ಶನಕ್ಕೆ ತೆರಳಲಿಚ್ಛಿಸುವ ಭಕ್ತರಿಗೆ ಮಾ.6ರಿಂದ ಮಂಗಳೂರಿನಿಂದ ವಿಶೇಷ ರೈಲಿನ ವ್ಯವಸ್ಥೆ ಮಾಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರದಿಂದ ಕನಿಷ್ಟ 80 ಮಂದಿ ತೆರಳಬಹುದಾಗಿದೆ. ಒಬ್ಬರಿಗೆ 3000 ರು. ವೆಚ್ಚವಾಗಲಿದ್ದು, ಅದರಲ್ಲಿ ರೈಲುಯಾನ, ವಸತಿ, ಊಟೋಪಚಾರಗಳೆಲ್ಲವೂ ಸೇರಿದೆ ಎಂದು ಕಿಶೋರ್ ಕುಮಾರ್ ಹೇಳಿದರು.

Share this article