ಕೇಂದ್ರ ಆಯವ್ಯಯ: ರೇಷ್ಮೆನಗರಿಗೆ ಶೂನ್ಯ ಕೊಡುಗೆ

KannadaprabhaNewsNetwork | Published : Jul 24, 2024 12:20 AM

ಸಾರಾಂಶ

ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ನೂತನ ಸಂಸದ ಡಾ. ಮಂಜುನಾಥ್ ಅವರ ಪ್ರಭಾವದಿಂದ ರೇಷ್ಮೆನಗರಿ ರಾಮನಗರ ಜಿಲ್ಲೆಗೆ ಕೇಂದ್ರ ಬಜೆಟ್ ನಲ್ಲಿ ಏನಾದರೂ ಮಹತ್ವದ ಕೊಡುಗೆ ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ. ರಾಮನಗರಕ್ಕೆ ಸಿಕ್ಕ ಕೊಡುಗೆ ಶೂನ್ಯವಾಗಿದೆ.

- ಪ್ರಭಾವ ಬೀರದ ಕುಮಾರಸ್ವಾಮಿ ಮತ್ತು ಡಾ.ಮಂಜುನಾಥ್ - ಮೇಕೆದಾಟು ಅಣೆಕಟ್ಟೆ, ರೈಲ್ವೆ ಯೋಜನೆ, ರೇಷ್ಮೆ ಬೆಳೆ ಪ್ರಸ್ತಾಪವೇ ಇಲ್ಲ

-ಎಂ.ಅಫ್ರೋಜ್ ಖಾನ್

ಕನ್ನಡಪ್ರಭ ವಾರ್ತೆ ರಾಮನಗರ

ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ನೂತನ ಸಂಸದ ಡಾ. ಮಂಜುನಾಥ್ ಅವರ ಪ್ರಭಾವದಿಂದ ರೇಷ್ಮೆನಗರಿ ರಾಮನಗರ ಜಿಲ್ಲೆಗೆ ಕೇಂದ್ರ ಬಜೆಟ್ ನಲ್ಲಿ ಏನಾದರೂ ಮಹತ್ವದ ಕೊಡುಗೆ ಸಿಗಬಹುದೆಂಬ ನಿರೀಕ್ಷೆ ಹುಸಿಯಾಗಿದೆ.

ರಾಜಕೀಯವಾಗಿ ಪುನರ್ ಜನ್ಮ ನೀಡಿದ ಕಾರಣಕ್ಕೆ ರಾಮನಗರ ಜಿಲ್ಲೆಯನ್ನು ಕರ್ಮಭೂಮಿ ಎಂದು ಹೇಳಿಕೊಳ್ಳುವ ಕುಮಾರಸ್ವಾಮಿಯವರು ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ತೊರೆದು ಮಂಡ್ಯ ಸಂಸತ್ ಕ್ಷೇತ್ರದಿಂದ ಗೆದ್ದು ಕೇಂದ್ರದಲ್ಲಿ ಕ್ಯಾಬಿನೇಟ್ ದರ್ಜೆ ಸಚಿವ ಸ್ಥಾನ ಅಲಂಕರಿಸಿದ್ದಾರೆ. ಇವರೊಂದಿಗೆ ಡಾ.ಸಿ.ಎನ್.ಮಂಜುನಾಥ್ ಕೂಡ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಆಯ್ಕೆಯಾಗಿ ಸಂಸತ್ ಪ್ರವೇಶಿಸಿದ್ದಾರೆ. ಇವರಿಬ್ಬರಿದ್ದರೂ ರಾಮನಗರಕ್ಕೆ ಸಿಕ್ಕ ಕೊಡುಗೆ ಶೂನ್ಯವಾಗಿದೆ.

ಜಿಲ್ಲೆಯಲ್ಲಿ ಅತಿ ಜರೂರಾಗಿದ್ದ ಮೇಕೆದಾಟು ಅಣೆಕಟ್ಟೆ, ರೈಲ್ವೆ ಯೋಜನೆಗಳು ಸೇರಿದಂತೆ ಯಾವೊಂದು ಯೋಜನೆಗಳ ಬಗ್ಗೆಯೂ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್ ಪ್ರಸ್ತಾಪವನ್ನೇ ಮಾಡಿಲ್ಲ. ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ರಾಮನಗರ ಜಿಲ್ಲೆಗೆ ಮಹತ್ವದ ಕೊಡುಗೆಗಳೇನು ಸಿಕ್ಕಿಲ್ಲ. ರಾಜ್ಯ ಸರ್ಕಾರ ಹಾಗೂ ಸಂಸದರು ಮೇಕೆದಾಟು, ರೈಲ್ವೆ ಯೋಜನೆಗಳನ್ನು ಸಾಕಾರಗೊಳಿಸುವ ಕುರಿತು ಗಮನ ಸೆಳೆದರೂ ಪ್ರಯೋಜನವಾಗುತ್ತಿಲ್ಲ. ವಿತ್ತ ಸಚಿವರು ಎಂದಿನಂತೆ ಈ ಬಾರಿಯ ಬಜೆಟ್ ನಲ್ಲೂ ನಿರಾಸೆ ಮೂಡಿಸಿದ್ದಾರೆ.

ಬೆಳೆಗಳಿಗೆ ವೈಜ್ಞಾನಿಕ ಬೆಲೆ ನೀಡಬೇಕು. ಅದಕ್ಕಾಗಿ ಎಸ್.ಸ್ವಾಮಿನಾಥನ್ ವರದಿ ಜಾರಿಗೆ ತರಬೇಕು ಎಂಬ ಬೇಡಿಕೆಯನ್ನು ರೈತರು ಕೇಂದ್ರದ ಎದುರಿಡುತ್ತಲೇ ಬಂದಿದ್ದಾರೆ. ಆದರೆ, ಕೇಂದ್ರ ಸರ್ಕಾರ ಇದಕ್ಕೆ ಸೊಪ್ಪು ಹಾಕಿಲ್ಲ. ಸಹಜವಾಗಿಯೇ ಇದು ರೈತ ಸಮುದಾಯದಲ್ಲಿ ಬೇಸರ ಮೂಡಿಸಿದೆ.

ಅನುಮೋದನೆ ದೊರಕದ ರೈಲ್ವೆ ಯೋಜನೆಗಳು :

ಏಷ್ಯಾದಲ್ಲಿಯೇ ಪ್ರಖ್ಯಾತ ರೇಷ್ಮೆ ಮಾರುಕಟ್ಟೆ ಹೊಂದಿರುವ ರಾಮನಗರ ಜಿಲ್ಲೆಯಲ್ಲಿ ಮುಖ್ಯವಾಗಿ ರೈಲ್ವೆ ಸೌಲಭ್ಯದ ವಿಚಾರದಲ್ಲಿಯೇ ಕೊರತೆಗಳು ಹೆಚ್ಚಾಗಿ ಕಾಡುತ್ತಿದೆ. ಆದರೆ, ಈ ಬಗ್ಗೆ ಬಜೆಟ್‌ನಲ್ಲಿ ವಿಷಯ ಪ್ರಸ್ತಾಪವಾಗದಿರುವುದು ಜನರ ಬೇಸರಕ್ಕೆ ಕಾರಣವಾಗಿದೆ.

ಹೆಜ್ಜಾಲ ಮೂಲಕ ಕನಕಪುರ, ಮಳವಳ್ಳಿ, ಕೊಳ್ಳೇಗಾಲ ಮೂಲಕ ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುವ ಹೊಸ ರೈಲ್ವೆ ಮಾರ್ಗ ಕಲ್ಪಿಸಬೇಕೆಂಬುದು ಹತ್ತಾರು ವರ್ಷಗಳ ಬೇಡಿಕೆಯಾಗಿದೆ. ಬಿಡದಿವರೆಗೆ ಸಬ್‌ಅರ್ಬನ್‌ ರೈಲ್ವೆ ಯೋಜನೆ ವಿಸ್ತರಣೆ ಬಗ್ಗೆ ಈ ಬಾರಿಯ ಬಜೆಟ್ ನಲ್ಲಿಯೂ ಯೋಜನೆಗೆ ಅನುಮೋದನೆ ದೊರಕಿಲ್ಲ.

ನಿರಂತರವಾಗಿ ಬರಗಾಲಕ್ಕೆ ತುತ್ತಾಗಿರುವ ರೇಷ್ಮೆನಗರಿಯ ರೈತರು ಗೂಡಿನ ಬೆಲೆಯಿಂದ ಹೈರಾಣಾಗಿದ್ದಾರೆ. ದೇಶಿ ರೇಷ್ಮೆಯ ಬೆಲೆಯಲ್ಲಿ ಹೆಚ್ಚಳ ಕಾಣುತ್ತಲೇ ಇಲ್ಲ. ಆಮದು ರೇಷ್ಮೆಯ ದರಗಳನ್ನು ಹೆಚ್ಚಿಸಿ, ಅಂತಾರಾಷ್ಟ್ರೀಯ ಗುಣಮಟ್ಟದ ರೇಷ್ಮೆಗೆ ಹಾಲಿ ಪದ್ಧತಿಯಲ್ಲಿ ಸುಧಾರಣೆ ತರುವುದು ಅಥವಾ ನೂತನ ಪದ್ಧತಿಯನ್ನು ಜಾರಿಗೆ ತರಬೇಕೆಂಬ ಕೂಗಿಗೆ ಕೇಂದ್ರ ಸರ್ಕಾರ ಸೊಪ್ಪು ಹಾಕದಿರುವುದು ರೈತರ ಕೆಂಗಣ್ಣಿಗೆ ಗುರಿಯಾಗಿದೆ.

ಬೊಂಬೆಗಳ ಉದ್ಯಮಕ್ಕೆ ಸಿಗದ ಚೈತನ್ಯ:

ಚನ್ನಪಟ್ಟಣದ ಕರಕುಶಲ ಉದ್ಯಮ ಸಂಕಷ್ಟಕ್ಕೆ ಸಿಲುಕಿದೆ. ಕೇಂದ್ರ ಸರ್ಕಾರ ದೇಶಿ ಆಟಿಕೆ ಉದ್ಯಮಕ್ಕೆ ಉತ್ತೇಜನ ನೀಡುವುದಾಗಿ ಹೇಳುತ್ತಲೇ ಬಂದಿದೆ. ಚನ್ನಪಟ್ಟಣದಲ್ಲಿ ಕೇಂದ್ರ ಸರ್ಕಾರ ಆಟಿಕೆಗಳ ನಿರ್ಮಾಣದ ಕ್ಲಸ್ಟರ್‌ ತೆರೆದು ಸಾಂಪ್ರದಾಯಿಕ ಬೊಂಬೆಗಳ ಉದ್ಯಮಕ್ಕೆ ಚೈತನ್ಯ ತುಂಬಲಿದೆ ಎಂಬ ನಿರೀಕ್ಷೆಗಳು ಈಡೇರಿಲ್ಲ.

ಬಿಡದಿ ಹಾಗೂ ಹಾರೋಹಳ್ಳಿ ಕೈಗಾರಿಕಾ ಪ್ರದೇಶಗಳ ಮಾದರಿಯಲ್ಲಿ ಜಿಲ್ಲೆಯ ವಿವಿಧೆಡೆ ಕೈಗಾರಿಕಾ ಪ್ರದೇಶಗಳ ಸ್ಥಾಪನೆಗೆ ಆಸಕ್ತಿ ತೋರಿಸಬಹುದಿತ್ತು. ಕೊನೆ ಪಕ್ಷ ಬಿಡದಿ, ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಸಹಸ್ರಾರು ಕಾರ್ಮಿಕರ ಹಿತದೃಷ್ಟಿಯಿಂದ ಜಿಲ್ಲೆಗೆ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ಅತ್ಯವಶ್ಯಕ ವಾಗಿತ್ತು. ಕೇಂದ್ರ ಸರ್ಕಾರ ಈ ಬಜೆಟ್‌ನಲ್ಲಿಯೂ ಸುಸಜ್ಜಿತ ಇಎಸ್‌ಐ ಆಸ್ಪತ್ರೆಗೆ ಅನುಮೋದನೆ ನೀಡಿಲ್ಲ.

ಜಿಲ್ಲೆಯಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಿರುವ ಕಾರಣ ಟ್ರಾಮಾ ಸೆಂಟರ್ ಸ್ಥಾಪನೆ, ಕೃಷಿಗೆ ಪೂರಕವಾಗುವಂತೆ ಉದ್ದಿಮೆಗಳ ಸ್ಥಾಪನೆಗೆ ಪ್ರೋತ್ಸಾಹ ನೀಡುವುದರೊಂದಿಗೆ ಉದ್ಯೋಗಕ್ಕಾಗಿ ವಲಸೆ ಹೋಗುವುದನ್ನು ತಪ್ಪಿಸಿ ರಾಮನಗರ ಜಿಲ್ಲೆಯ ಬೆಳವಣಿಗೆಗೆ ಹೊಸ ರೂಪ ನೀಡಬಹುದಿತ್ತು. ಆದರೆ, ಜನರ ಆಕಾಂಕ್ಷೆಗಳಿಗೆ ಬಜೆಟ್‌ನಲ್ಲಿ ಕವಡೆ ಕಾಸಿನ ಕಿಮ್ಮತ್ತು ಸಿಗದಿರುವುದು ತೀವ್ರ ನಿರಾಸೆ ಉಂಟುಮಾಡಿದೆ.ಮೇಕೆದಾಟು ಅಣೆಕಟ್ಟೆಗೆ ಅನುಮೋದನೆ ಇಲ್ಲ!

ಕಾವೇರಿ ಜಲ ವಿವಾದಕ್ಕೆ ಪರಿಹಾರ ಸೂಚಿಸುವ ನಿಟ್ಟಿನಲ್ಲಿ ಮೇಕೆದಾಟು ಅಣೆಕಟ್ಟೆಗೆ ಕೇಂದ್ರ ಸರ್ಕಾರದಿಂದ ಅನುಮೋದನೆ ದೊರಕಿಸುವುದಕ್ಕೂ ಸಾಧ್ಯವಾಗಿಲ್ಲ. ಪ್ರಸಕ್ತ ವರ್ಷ ಕೆಆರ್‌ಎಸ್ ಜಲಾಶಯ ಭರ್ತಿಯ ಹಂತದಲ್ಲಿದ್ದು ನೀರು ವ್ಯರ್ಥವಾಗಿ ಹರಿದುಹೋಗುತ್ತಿದೆ. ಈ ನೀರನ್ನು ಸಂಗ್ರಹಿಸಿಟ್ಟುಕೊಂಡು ಸಂಕಷ್ಟ ಕಾಲದಲ್ಲಿ ತಮಿಳುನಾಡಿಗೆ ಹರಿಸುವುದಕ್ಕೆ ಮೇಕೆದಾಟು ಯೋಜನೆ ಅನುಕೂಲಕರವಾಗಿದ್ದರೂ, ಅದರ ಬಗ್ಗೆ ಬಜೆಟ್‌ನಲ್ಲಿ ಪ್ರಸ್ತಾಪಿಸದಿರುವುದು ಅಣೆಕಟ್ಟು ಯೋಜನೆ ಮರೀಚಿಕೆಯಾಗಿಯೇ ಉಳಿದಿದೆ. ಕನಿಷ್ಠ ಪಕ್ಷ ವ್ಯರ್ಥವಾಗಿ ಹರಿದುಹೋಗುವ ನೀರನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಜಿಲ್ಲೆಯ ಕಾವೇರಿ ಕಣಿವೆ ಪ್ರದೇಶದಲ್ಲಿ ಏನಾದರೊಂದು ಕಾರ್ಯಯೋಜನೆಯನ್ನು ಕೇಂದ್ರ ಸರ್ಕಾರದಿಂದ ಮಂಜೂರು ಮಾಡಿಸುವಲ್ಲೂ ಕೇಂದ್ರ ಸಚಿವ ಕುಮಾರಸ್ವಾಮಿ ವಿಫಲರಾಗಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಕೇಂದ್ರ ಬಜೆಟ್ ಕೃಷಿ ಕ್ಷೇತ್ರದಲ್ಲಿ ಖಾಸಗಿ ಕಂಪನಿಗಳಿಗೆ ಚುಂಬಿಸಿದೆ. ಸಂಶೋಧನೆ ಹೆಸರಲ್ಲಿ ಬಹು ರಾಷ್ಟ್ರೀಯ ಕಂಪನಿಗಳು ಪಾರುಪತ್ಯ ಮೆರೆಯಲಿವೆ. ಹೊಸ ತಳಿ ಅಭಿವೃದ್ಧಿಪಡಿಸುವುದು ವೈಜ್ಞಾನಿಕವಾಗಿ ಕೃಷಿ ಮಾಡಿ ಉತ್ಪನ್ನ ಹೆಚ್ಚು ಮಾಡುವುದಕ್ಕೆ ಆದ್ಯತೆ ನೀಡಿದೆ. ಆದರೆ ನಿಖರವಾದ ಮಾರುಕಟ್ಟೆ ಸರಪಳಿ ಹಾಗೂ ಉತ್ಪಾದನಾ ವೆಚ್ಚಕ್ಕೆ ಅನುಗುಣವಾಗಿ "ವೈಜ್ಞಾನಿಕ ಬೆಲೆ ಅಥವಾ ಖಾತರಿ ಬೆಲೆ "ಬಗ್ಗೆ ನಿಶ್ಚಿತ ಪ್ರಸ್ತಾಪ ಮಾಡಿಲ್ಲ. ಅವಶ್ಯಕತೆಗೆ ಅನುಗುಣವಾಗಿ ಉತ್ಪತ್ತಿ ಮಾಡಲು ಮತ್ತು ಕಾಲಮಾನಕ್ಕೆ ಹಾಗೂ ಆಯಾಯ ಪ್ರದೇಶವಾರು ಯೋಗ್ಯವಾದ ಆಹಾರ ಸಾಧ್ಯವಾಗಲು ದೂರದೃಷ್ಟಿಯುಳ್ಳ ಬೆಳೆಪದ್ಧತಿಗೆ ಸ್ವಾತಂತ್ರ್ಯ ನಂತರ ಈವರೆಗೆ ಕೇಂದ್ರವಾಗಲಿ, ರಾಜ್ಯವಾಗಲಿ ಯಾವ ಯೋಜನೆಯನ್ನು ರೂಪಿಸಿಲ್ಲ ಬಜೆಟ್ ನಲ್ಲೂ ಪ್ರಸ್ತಾಪ ಮಾಡಿಲ್ಲ. ಹೀಗಾಗಿ ಸ್ವಾತಂತ್ರ್ಯ ನಂತರದ ಎಲ್ಲಾ ಸರ್ಕಾರಗಳು "ಮಾರುಕಟ್ಟೆ ಭದ್ರತೆ " ಒದಗಿಸಲಾರದ ರೈತರ ಬೆಳೆ ಬದುಕು ಹರಾಜು ಮಾಡುವ ದಲ್ಲಾಳಿ ಮತ್ತು ಮಧ್ಯವರ್ತಿಗಳ ರಕ್ಷಕರು.

- ಪುಟ್ಟಸ್ವಾಮಿ, ರೈತ ಮುಖಂಡರು, ಚನ್ನಪಟ್ಟಣ

ಕರ್ನಾಟಕಕ್ಕೆ ಸಿಕ್ಕಿರುವುದು ಚೊಂಬು ಅಷ್ಟೇ: ಡಿ.ಕೆ.ಸುರೇಶ್

ರಾಮನಗರ: ಕೇಂದ್ರ ಸರ್ಕಾರದ ಬಜೆಟ್‌ - 2024 ಬಿಜೆಪಿ ಪಾಲುದಾರರಿಗೆ ಬಜೆಟ್ ಆಗಿದ್ದು, ಕರ್ನಾಟಕಕ್ಕೆ ಸಿಕ್ಕಿರುವುದು ಚೊಂಬು ಅಷ್ಟೇ. ಇದು ಘೋರ ಅನ್ಯಾಯ ಎಂದು ಮಾಜಿ ಸಂಸದ ಡಿಕೆ ಸುರೇಶ್‌ ಕಿಡಿಕಾರಿದ್ದಾರೆ.

ಕೇಂದ್ರ ಬಜೆಟ್‌ ಕುರಿತು ಟ್ವೀಟ್ ಮಾಡುವ ಮೂಲಕ ಡಿ.ಕೆ.ಸುರೇಶ್ ರವರು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಇದು ಬಿಜೆಪಿ ಪಾಲುದಾರರ ಬಜೆಟ್‌ ಆಗಿದೆ. ಕರ್ನಾಟಕಕ್ಕೆ ಘೋರ ಅನ್ಯಾಯವಾಗಿದೆ. ಕರ್ನಾಟಕಕ್ಕೆ ಸಿಕ್ಕಿರುವುದು ಚೊಂಚು ಮಾತ್ರ ಎಂದು ಪೋಸ್ಟರ್‌ ಹಂಚಿಕೊಂಡಿದ್ದಾರೆ.

ಸದಾ ಕರ್ನಾಟಕ ಮತ್ತು ಇತರ ಹಲವಾರು ರಾಜ್ಯಗಳು ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಬೆಳವಣಿಗೆಯತ್ತ ಸಾಗಲು ಪರಸ್ಪರ ಹೋರಾಡುತ್ತಿವೆ. ಆದರೆ, ಕೇಂದ್ರ ಬಜೆಟ್‌ 2024 ರಲ್ಲಿ ತಾರತಮ್ಯ ತೋರಲಾಗಿದೆ. ಕೇವಲ 2 ರಾಜ್ಯಗಳಿಗೆ ಅಗತ್ಯ ನೆರವು ನೀಡಿದಂತಾಗಿದೆ ಎಂದಿದ್ದಾರೆ. ಈ ಮೂಲಕ ಬಜೆಟ್‌ನಲ್ಲಿ ಬಿಹಾರ ಹಾಗೂ ಆಂಧ್ರ ಪ್ರದೇಶ ರಾಜ್ಯಗಳಿಗೆ ಹೆಚ್ಚಿನ ಯೋಜನೆ ನೀಡಲಾಗಿದೆ ಎಂದು ಸುರೇಶ್ ದೂರಿದ್ದಾರೆ.

Share this article