ಚಂದ್ರು ಕೊಂಚಿಗೇರಿ
ಮಲೆನಾಡು ಪ್ರದೇಶದಲ್ಲಿ ಮಳೆ ಇಲ್ಲದೇ ತುಂಗಭದ್ರಾ ನದಿ ಬಹುತೇಕ ಬತ್ತಿ ಹೋಗುತ್ತಿದೆ. ಸಿಂಗಟಾಲೂರು ಬ್ಯಾರೇಜ್ 509 ಅಡಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಸದ್ಯ 507.04 ಅಡಿಗಳಷ್ಟು ಅಂದರೆ 2.2 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಮಳೆ ಇಲ್ಲದ ಸ್ಥಿತಿ ಹೀಗೆ ಇದ್ದರೇ ಈ ನೀರು 2 ತಿಂಗಳಿಗೆ ಮಾತ್ರ ಇರಲಿದೆ. ಶೂನ್ಯ ಒಳ ಹರಿವು ಹಿನ್ನೆಲೆಯಲ್ಲಿ ಆದ್ಯತೆ ಕುಡಿವ ನೀರಿಗೆ ನೀಡಲಾಗಿದೆ. ಯೋಜನೆಯ ಕಾಲುವೆಗಳಿಗೆ ಮತ್ತು ಕೆರೆಗಳಿಗೆ ನೀರು ಹರಿಯುವುದಿಲ್ಲ. ಪ್ರತಿನಿತ್ಯ 5 ಸಾವಿರ ಕ್ಯೂಸೆಕ್ ನೀರು ಒಳ ಹರಿವು ಬಂದರೆ ಮಾತ್ರ ರೈತರ ಜಮೀನುಗಳಿಗೆ ನೀರು ಒದಗಿಸಲು ಸಾಧ್ಯವಾಗುತ್ತದೆ ಎನ್ನುತ್ತಾರೆ ಅಧಿಕಾರಿಗಳು.
ಬ್ಯಾರೇಜ್ ಹೊರಹರಿವು ಕೂಡ ಶೂನ್ಯ ಇರುವ ಕಾರಣ ಹಗರಿಬೊಮ್ಮನಹಳ್ಳಿ, ಕೊಪ್ಪಳ, ಕೊಟ್ಟೂರು ಸೇರಿದಂತೆ ಬ್ಯಾರೇಜ್ ಕೆಳಗಿನ ಪ್ರದೇಶದಲ್ಲಿರುವ ಬಹುಗ್ರಾಮ ಕುಡಿವ ನೀರಿನ ಯೋಜನೆಗಳಿಗೆ ನೀರಿಲ್ಲದೇ ಜನ ತೊಂದರೆ ಅನುಭವಿಸುತ್ತಿದ್ದಾರೆ.ಮಳೆಗಾಲದಲ್ಲಿಯೂ ನದಿ ತೀರದ ಗ್ರಾಮಗಳ ಹೊರತು ಪಡಿಸಿ ಉಳಿದ ಗ್ರಾಮಗಳಲ್ಲಿ, ಕುಡಿವ ನೀರಿನ ಸಮಸ್ಯೆ ಎದುರಾಗಿದೆ. ಗ್ರಾಮೀಣ ಕುಡಿವ ನೀರು, ನೈರ್ಮಲ್ಯ ಇಲಾಖೆಯು ವಿವಿಧ ಕಡೆಗಳಲ್ಲಿನ 7 ರೈತರ ಕೊಳವೆಬಾವಿಗಳ ಬಾಡಿಗೆ ಪಡೆದು ಜನರಿಗೆ ನೀರು ಒದಗಿಸುತ್ತಿದ್ದಾರೆ.
ನೀರು ಪೂರೈಕೆ:ಕುಡಿವ ನೀರಿಗಾಗಿ ₹50 ಲಕ್ಷ ಕ್ರಿಯಾ ಯೋಜನೆ ರೂಪಿಸಿ, 18 ಕಾಮಗಾರಿ ಕೈಗೆತ್ತಿಕೊಂಡಿದ್ದೇವೆ. 7 ರೈತರ ಕೊಳವೆಬಾವಿ ಬಾಡಿಗೆ ಪಡೆದು ನೀರು ಪೂರೈಕೆ ಮಾಡಿದ್ದೇವೆ ಎನ್ನುತ್ತಾರೆ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕೆ.ಪ್ರದೀಪಕುಮಾರ ಎಇಇ.
ಕೊಳವೆಬಾವಿ ನೀರು ನಂಬಿಕೊಂಡು ರೇಷ್ಮೆ ಕೃಷಿ ಮಾಡಿದ್ದೇವೆ. ಮಳೆ ಇಲ್ಲದೇ ಅಂತರ್ಜಲ ಪಾತಾಳಕ್ಕೆ ಹೋಗಿದೆ. ಇದರಿಂದ ಇದ್ದ 2 ಕೊಳವೆಬಾವಿಗಳು ಬತ್ತಿ ಹೋಗಿವೆ. ರೈತನ ಬದುಕು ನಿತ್ಯ ಮುಗಿಲತ್ತ ನೋಡುವಂತಾಗಿದೆ ಎನ್ನುತ್ತಾರೆ ಮಾಗಳ ರೈತ ಡಿ.ಕೋಟೆಪ್ಪ.