ಹನೂರು : ಸರ್ಕಾರ ಕೃಷಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ 5 ಲಕ್ಷ ರು.ವರೆಗೆ ಶೂನ್ಯ ಬಡ್ಡಿಯಲ್ಲಿ ರೈತರಿಗೆ ಸಾಲ ನೀಡಲಾಗುತ್ತಿದೆ. ಪ್ರತಿಯೊಬ್ಬರು ಇದರ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ ಸದೃಢರಾಗಬೇಕು ಎಂದು ಮಾಜಿ ಶಾಸಕ ಆರ್ ನರೇಂದ್ರ ತಿಳಿಸಿದರು.
ಹನೂರು ಪಟ್ಟಣದ ಎಂಸಿಡಿಸಿಸಿ ಬ್ಯಾಂಕ್ ಆವರಣದಲ್ಲಿ ಹನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ರೈತರಿಗೆ ಹಮ್ಮಿಕೊಳ್ಳಲಾಗಿದ್ದ ಸಾಲ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹನೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಪ್ರಾರಂಭವಾದ ದಿನಗಳಲ್ಲಿ ಕೇವಲ 4.75 ಲಕ್ಷ ರು. ಮಾತ್ರ ಸಾಲ ನೀಡಲಾಗುತ್ತಿತ್ತು. ಆದರೆ ಇಂದು ಸಂಘ ಹೆಮ್ಮರವಾಗಿ ಬೆಳೆದು 890 ಜನಕ್ಕೆ 13.5 ಕೋಟಿ ಸಾಲ ವಿತರಣೆ ಮಾಡಿರುವುದು ಶ್ಲಾಘನೀಯ ವಿಚಾರ. ನಮ್ಮ ಕೃಷಿ ಪತ್ತಿನ ಸಂಘದಲ್ಲಿ ರಸಗೊಬ್ಬರ ಪಡಿತರ ವಿತರಣೆ ಸೇರಿದಂತೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಡಲಾಗುತ್ತಿದೆ. ಷೇರುದಾರರಿಗೆ ಯಶಸ್ವಿನಿ ಹಣವನ್ನು ಸಂಘದ ವತಿಯಿಂದ ಭರಿಸಲಾಗುತ್ತಿದೆ ಎಂದು ಹೇಳಿದರು.
ಹನೂರು ತಾಲೂಕು ಕೇಂದ್ರದಲ್ಲಿ ಹೊಸದಾಗಿ ನೂತನ ಕಟ್ಟಡ ನಿರ್ಮಾಣ ಮಾಡಲು ಈಗಾಗಲೇ ಕ್ರಿಯಾಯೋಜನೆ ಮಾಡಿ ಸರ್ಕಾರದ ಅನುಮತಿಗಾಗಿ ಕಳುಹಿಸಿಕೊಡಲಾಗಿದೆ. ಅನುಮತಿ ದೊರೆತ ನಂತರ 1.78 ಕೋಟಿ ರು. ವೆಚ್ಚದಲ್ಲಿ ಹೊಸ ಕಟ್ಟಡ ನಿರ್ಮಾಣ ಮಾಡಲಾಗುವುದು. ನನ್ನನ್ನು ನಿರ್ದೇಶಕನಾಗಿ ಅವಿರೋಧ ಆಯ್ಕೆ ಮಾಡಿದ ಹಿನ್ನೆಲೆ ಋಣವನ್ನು ತೀರಿಸುವ ನಿಟ್ಟಿನಲ್ಲಿ ಅಪೆಕ್ಸ್ ಬ್ಯಾಂಕ್ ನಿರ್ದೇಶಕನಾಗಿದ್ದಾಗ ನಮ್ಮ ಸಂಘಕ್ಕೆ 30 ಲಕ್ಷ ರು. ಕೊಡಿಸಿದ್ದೇನೆ, ಹನೂರು ಭಾಗದ ರೈತರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕೇವಲ ಎರಡು ಲಕ್ಷ ರು. ಪಾವತಿ ಮಾಡಿ 8 ಲಕ್ಷ ರು. ಸಬ್ಸಿಡಿ ಕೊಡಿಸಿ ಟ್ರ್ಯಾಕ್ಟರ್ ಕೊಂಡಿದ್ದು ಅತಿ ಕಡಿಮೆ ಬೆಲೆಯಲ್ಲಿ ಉಳುಮೆ ಕೆಲಸಕ್ಕೆ ಕಳುಹಿಸಲಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹನೂರು ತಾಲೂಕು ಕೇಂದ್ರದಲ್ಲಿರುವ ಪ್ರಾಥಮಿಕ ಕೃಷಿ ಪತ್ತಿನ ಸಂಘವನ್ನು ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಿಬ್ಬಂದಿ ಅಚ್ಚುಕಟ್ಟಾಗಿ ನಿಭಾಯಿಸುತ್ತಿರುವುದರಿಂದ ಎರಡೂವರೆ ಕೋಟಿ ರು. ಬಂಡವಾಳ ಇಡಲಾಗಿದೆ. ಇದರಿಂದ ಯಾವುದೇ ಹೊಸ ಯೋಜನೆಗಳನ್ನು ಜಾರಿಗೆ ತರಬಹುದಾಗಿದೆ. ನಾನು ಎಂಸಿಡಿಸಿಸಿ ಬ್ಯಾಂಕ್‌ನ ಜಿಲ್ಲಾಧ್ಯಕ್ಷನಾಗಿದ್ದಾಗ ಚಾಮರಾಜನಗರ ಜಿಲ್ಲೆಗೆ ಅತಿ ಹೆಚ್ಚು ಸಾಲ ಕೊಡಿಸಿದ್ದು, ರೈತರು ಸಹ ಅದೇ ರೀತಿ ಹಣ ಹಿಂದಿರುಗಿಸಿರುವುದರಿಂದ ಹೆಚ್ಚು ಹೆಚ್ಚು ಸಾಲ ವಿತರಣೆ ಮಾಡಲಾಗುತ್ತಿದೆ ಎಂದರು.
ಸರ್ಕಾರ ಕಳೆದ ವರ್ಷ ಮಾಜಿ ಶಾಸಕ ಆರ್ ನರೇಂದ್ರ ರವರಿಗೆ ಸಹಕಾರ ಪ್ರಶಸ್ತಿ ನೀಡಿದ ಹಿನ್ನೆಲೆ ಹನೂರು ಪ್ರಾಥಮಿಕ ಕೃಷಿ ಪತ್ತಿನ ಆಡಳಿತ ಮಂಡಲ ವತಿಯಿಂದ ಮೈಸೂರು ಪೇಟ ಹಾಕಿ ನೆನಪಿನ ಕಾಣಿಕೆ ನೀಡುವ ಮೂಲಕ ಸನ್ಮಾನಿಸಲಾಯಿತು.
ಪ್ರಾಥಮಿಕ ಕೃಷಿ ಪತ್ತಿನ ಸಂಘದ ಅಧ್ಯಕ್ಷ ನಟರಾಜು, ಉಪಾಧ್ಯಕ್ಷ ಸೈಯದ್ ಬಾಷಾ ನಿರ್ದೇಶಕರಾದ ರಾಚಪ್ಪ, ಲಿಂಗೇಗೌಡ, ಶಂಕರೇಗೌಡ, ಶ್ರೀನಿವಾಸ್, ರಾಜಮ್ಮ, ಗೋವಿಂದ, ಬಸವರಾಜು, ಕಾರ್ಯನಿರ್ವಹಣಾಧಿಕಾರಿ ಬಸವರಾಜು, ಟಿಎಪಿಸಿಎಂಎಸ್ ಅಧ್ಯಕ್ಷ ಗೋವಿಂದರಾಜು, ಪಟ್ಟಣ ಪಂಚಾಯಿತಿ ಸದಸ್ಯ ಗಿರೀಶ್, ಚಾಮುಲ್ ನಿರ್ದೇಶಕ ಶಾಹುಲ್ ಅಹಮದ್, ಎಂಸಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಕುಮಾರಸ್ವಾಮಿ, ನಿವೃತ್ತ ಬ್ಯಾಂಕ್ ವ್ಯವಸ್ಥಾಪಕ ಸೋಮಣ್ಣ, ಸಿಬ್ಬಂದಿ, ಫಲಾನುಭವಿಗಳು ಹಾಜರಿದ್ದರು.