ಶಿರಸಿ: ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆ ಶೂನ್ಯ. ಇದೊಂದು ಶೂನ್ಯ ಸಾಧಕ ಸರ್ಕಾರ. ಗ್ರೇಸ್ ಮಾರ್ಕ್ಸ್ ಕೊಟ್ಟರೂ ಉತ್ತೀರ್ಣವಾಗದ ಸರ್ಕಾರವಿದು. ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ ಅವರ ನೇತೃತ್ವವೇ ಜನರಿಂದ ತಿರಸ್ಕಾರಕ್ಕೊಳಪಡುತ್ತಿದೆ. ಲೋಕಸಭಾ ಚುನಾವಣೆಯ ಫಲಿತಾಂಶದಲ್ಲೂ ಅದು ಕಾಣುತ್ತದೆ ಎಂದು ಮಾಜಿ ಸ್ಪೀಕರ್ ಹಾಗೂ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದರು.
ರಾಜ್ಯದಲ್ಲಿ ಜೀವಕ್ಕೇ ಗ್ಯಾರಂಟಿ ಇಲ್ಲದಮೇಲೆ ಇನ್ಯಾವ ಗ್ಯಾರಂಟಿ ಕೊಟ್ಟೂ ಪ್ರಯೋಜನವಿಲ್ಲ. ನಮ್ಮ ಜಿಲ್ಲೆಯಲ್ಲೂ ಅಂತಹ ಪರಿಸ್ಥಿತಿ ಕಂಡುಬರುತ್ತಿದೆ. ಇತ್ತೀಚೆಗೆ ಉದ್ಯಮಿ ಪ್ರೀತಂ ಪಾಲನಕರ್ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಏಕೆ ಬಂತು? ಸಿದ್ದಾಪುರದಲ್ಲಿ ವ್ಯಕ್ತಿಯೊಬ್ಬನನ್ನು ಬೈಕ್ ಜತೆಯೇ ಸುಟ್ಟುಹಾಕಿದ ಪ್ರಕರಣ ನಡೆಯಿತು. ಕಾನಗೋಡಿನಲ್ಲಿ ಸೈನಿಕನೊಬ್ಬನ ಮನೆಗೆ ಹೋಗಿ ಹಲ್ಲೆ ಮಾಡಲಾಯಿತು. ಈ ಎಲ್ಲ ಪ್ರಕರಣಗಳಲ್ಲಿ ಇವತ್ತಿಗೂ ಕ್ರಮಗಳಾಗಲಿಲ್ಲ. ಇದರಿಂದಾಗಿ ಹಳ್ಳಿ ಹಳ್ಳಿಯಲ್ಲಿಯೂ ಅಪರಾಧಿಗಳು ವಿಜೃಂಭಿಸುತ್ತಿದ್ದಾರೆ. ನ್ಯಾಯಕ್ಕೆ, ಜೀವಕ್ಕೆ ಬೆಲೆ ಇಲ್ಲದಂತಾಗಿರುವುದು ರಾಜ್ಯ ಸರ್ಕಾರದ ವೈಫಲ್ಯವಾಗಿದೆ ಎಂದರು.ಈ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಇಲಾಖೆಯನ್ನು ಹದಗೆಡಿಸಲಾಗಿದೆ. ಈಗ ನೀಡುತ್ತಿರುವ ಶಿಕ್ಷಣ ನೋಡಿದರೆ, ಮುಂದಿನ ಯುವ ಪೀಳಿಗೆ ಎಷ್ಟು ನಿರಾಶಾದಾಯಕವಾಗಿರುತ್ತದೆ ಎಂದು ಬೇಸರವಾಗುತ್ತದೆ. ಒಂದೇ ವರ್ಷದಲ್ಲಿ ೨೦ ಗ್ರೇಸ್ ಮಾರ್ಕ್ಸ್ ಕೊಡುವ ಪರಿಸ್ಥಿತಿ ಬಂದಿದೆಯೆಂದರೆ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ, ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಏನು ಮಾಡುತ್ತಿದ್ದಾರೆ? ಮಧು ಬಂಗಾರಪ್ಪ ಬಗ್ಗೆ ಹೇಳುವುದೇ ತಪ್ಪು. ಅವರನ್ನು ಶಿಕ್ಷಣ ಮಂತ್ರಿ ಮಾಡಿದ್ದೇ ತಪ್ಪು. ಅಸಮರ್ಪಕ ನಿರ್ವಹಣೆಯ ಕಾರಣದಿಂದ ಶಿಕ್ಷಣ ಮಂತ್ರಿ ಮಧು ಬಂಗಾರಪ್ಪ ಅವರನ್ನು ಮುಖ್ಯಮಂತ್ರಿಗಳು ಉಚ್ಚಾಟಿಸಬೇಕು ಎಂದು ಆಗ್ರಹಿಸಿದರು. ಪ್ರತಿಪಕ್ಷವಾಗಿ ನಮ್ಮ ಜವಾಬ್ದಾರಿ ಇದೆ. ರಾಜ್ಯ ಸರ್ಕಾರದ ವೈಫಲ್ಯದ ವಿರುದ್ಧ ಮುಂದಿನ ದಿನಗಳಲ್ಲಿ ಸಂಘಟಿತ ಹೋರಾಟ ಮಾಡುತ್ತೇವೆ ಎಂದರು.
ಅನಂತಕುಮಾರ ಹೆಗಡೆ ಬರಬೇಕಿತ್ತು: ಕಾಗೇರಿಅನಂತಕುಮಾರ ಹೆಗಡೆ ಆರು ಬಾರಿ ಸಂಸದರಾದವರು, ಮಂತ್ರಿಯಾದವರು. ಮೋದಿಯವರು ಬಂದಾಗ ಬರಬೇಕಿತ್ತು ಎಂಬ ಅಭಿಪ್ರಾಯ ನಮ್ಮದೂ ಆಗಿತ್ತು. ಇನ್ನು ಶಿವರಾಮ ಹೆಬ್ಬಾರರಿಗೆ ಬಿಜೆಪಿ ಸರಿಹೊಂದುತ್ತಿಲ್ಲ ಎಂದು ಆಗಿದೆ. ಇಂಥ ಸಂದರ್ಭದಲ್ಲಿ ಅವರು ರಾಜೀನಾಮೆ ಕೊಡಬೇಕು. ಮುಂದೆ ಚುನಾವಣೆ ಎದುರಿಸಬೇಕು ಎಂದು ವಿಶ್ವೇಶ್ವರ ಹೆಗಡೆ ಕಾಗೇರಿ ಒತ್ತಾಯಿಸಿದರು.