ಕನಕಪುರ: ತಾಲೂಕಿನ ಸಾತನೂರು ಗ್ರಾಮ ಪಂಚಾಯಿತಿ ಕಚೇರಿ ಮುಂಭಾಗದ ರಸ್ತೆ ಪಕ್ಕದಲ್ಲಿ ರಾಶಿ ರಾಶಿ ಕಸ ಸುರಿದು ತಿಪ್ಪೆ ಗುಂಡಿಯಾಗಿ ಪರಿವರ್ತನೆಗೊಂಡಿದ್ದರು ಗ್ರಾಪಂ ಅಧಿಕಾರಿಗಳು ಗಮನಹರಿಸುತ್ತಿಲ್ಲವೆಂದು ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಾತನೂರು ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನ, ಅದರಲ್ಲೂ ಪಂಚಾಯಿತಿ ಕಚೇರಿ ಮುಂದೆಯೇ ಸ್ವಚ್ಛತೆ ಇಲ್ಲದೆ ತಿಪ್ಪೆಗುಂಡಿಯಾಗಿದೆ. ಕಸ ಸುರಿದು ಹೋಗುತ್ತಿದ್ದರೂ ಗ್ರಾಮ ಪಂಚಾಯತಿ ಅಧಿಕಾರಿಗಳು ಸಾರ್ವಜನಿಕರಿಗೆ ಅರಿವು ಮೂಡಿಸಿ ಸ್ವಚ್ಛತೆ ಕಾಪಾಡುವ ಗೋಜಿಗೆ ಹೋಗಿಲ್ಲ.
ಸಾತನೂರಿನಿಂದ ಪ್ರವಾಸಿ ತಾಣ ಮುತ್ತತ್ತಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಸ್ಥಳೀಯ ಅಂಗಡಿ ಮಳಿಗೆಗಳಲ್ಲಿ ಮತ್ತು ಮನೆಗಳಲ್ಲಿ ಉತ್ಪತ್ತಿಯಾಗುವ ಪ್ಲಾಸ್ಟಿಕ್ ಮತ್ತು ಹಸಿ ಕಸವನ್ನು ಸಾರ್ವಜನಿಕರು ರಸ್ತೆ ಪಕ್ಕದಲ್ಲೆ ಸುರಿಯುತ್ತಿದ್ದಾರೆ. ಇದರಿಂದ ಪಂಚಾಯಿತಿ ಕಚೇರಿ ಮುಂದೆ ರಸ್ತೆ ಬದಿ ಕಸದ ತೊಟ್ಟಿಯಂತಾಗಿ ಪರಿವರ್ತನೆಗೊಂಡಿರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.ಪ್ರವಾಸಿ ತಾಣ ಮುತ್ತತ್ತಿ ಹಾಗೂ ಭೂಹಳ್ಳಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಪಕ್ಕದಲ್ಲಿ ಸುರಿದಿರುವ ಕಸದ ರಾಶಿ ಕೊಳೆತು ಗಬ್ಬೆದ್ದು ನಾರುತ್ತಿದೆ. ಕಸದ ದುರ್ವಾಸನೆಗೆ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ.
ರಸ್ತೆ ಪಕ್ಕದಲ್ಲಿ ಇರುವ ಕೆರೆ ಸುತ್ತಲೂ ಲಕ್ಷಾಂತರ ರು. ಖರ್ಚು ಮಾಡಿ ವಾಯು ವಿಹಾರಿಗಳಿಗೆ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಪ್ರತಿನಿತ್ಯ ಮುಂಜಾನೆ ಉದ್ಯಾನವನದಲ್ಲಿ ವಾಯುವಿಹಾರ ಮಾಡಲು ಬರುವ ಸಾರ್ವಜನಿಕರು ಕಸದ ದುರ್ವಾಸನೆ ತಡೆಯಲಾಗದೆ, ಬರುವುದನ್ನೇ ಬಿಟ್ಟಿದ್ದಾರೆ.ರಸ್ತೆ ಪಕ್ಕದಲ್ಲಿ ಹಾಕಿರುವ ಕಸದ ರಾಸಿಯಿಂದ ಬೀದಿ ನಾಯಿಗಳ ಹಾವಳಿ ಕೂಡ ಹೆಚ್ಚಾಗಿದೆ. ಬೀದಿ ನಾಯಿಗಳು ಆಹಾರ ಹುಡುಕಲು ಕಸವನ್ನು ರಸ್ತೆಯಲ್ಲಿ ಎಳೆದಾಡಿ ಚೆಲ್ಲಾಪಿಲ್ಲಿ ಮಾಡುತ್ತಿವೆ. ಕಸದ ರಾಶಿ ಪಕ್ಕದಲ್ಲಿ ಜನ ವಸತಿ ಪ್ರದೇಶವಿದ್ದು ಹಲವಾರು ಕುಟುಂಬಗಳು ವಾಸ ಮಾಡುತ್ತಿವೆ. ಪಕ್ಕದಲ್ಲೇ ಇರುವ ಕಸದ ರಾಶಿಯಿಂದ ಸೊಳ್ಳೆಗಳ ಕಾಟವೂ ಹೆಚ್ಚಾಗಿದ್ದು ಸಾಂಕ್ರಾಮಿಕ ರೋಗ ಹರಡುವ ಭೀತಿಯಲ್ಲಿ ಇಲ್ಲಿನ ನಿವಾಸಿಗಳು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಗ್ರಾಮ ಪಂಚಾಯತಿ ಅಧಿಕಾರಿಗಳು ಎಚ್ಚೆತ್ತುಕೊಂಡು ಕ್ರಮ ಕೈಗೊಳ್ಳಬೇಕಿದೆ. ಕೋಟ್.........
ಗ್ರಾಮ ಪಂಚಾಯ್ತಿ ಕಚೇರಿ ಎದುರಿನಲ್ಲೆ ಕಸ ರಾಶಿರಾಶಿ ಸುರಿದಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ. ಕಸದ ರಾಶಿ ಕೊಳೆತು ನಾರುತ್ತಿದೆ. ನಿದ್ರೆಯಲ್ಲಿರುವ ಗ್ರಾಪಂ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ಕಸ ತೆರವುಗೊಳಿಸಿ ಸ್ವಚ್ಛತೆ ಕಾಪಾಡಬೇಕು.-ನಲ್ಲಹಳ್ಳಿ ಶ್ರೀನಿವಾಸ್, ರೈತ ಮುಖಂಡ ಕೆ ಕೆ ಪಿ ಸುದ್ದಿ 01:
ಸಾತನೂತು ಗ್ರಾಮ ಪಂಚಾಯಿತಿ ಕಚೇರಿ ಮುಂದಿನ ರಸ್ತೆ ಪಕ್ಕದಲ್ಲಿ ಸುರಿದಿರುವ ಕಸದ ರಾಶಿ.