ಸಾಲ ಮಂಜೂರಾತಿ ಅರ್ಜಿ ಶೀಘ್ರ ಇತ್ಯರ್ಥಗೊಳಿಸಲು ಜಿಲ್ಲಾ ಪಂಚಾಯಿತಿ ಸಿಇಒ ಸೂಚನೆ

KannadaprabhaNewsNetwork |  
Published : Jan 25, 2025, 01:02 AM IST
ನಬಾರ್ಡ್ ವತಿಯಿಂದ ಪೋಟೆನ್ಸಿಯಲ್ ಕ್ರೆಡಿಟ್ ಲಿಂಕ್ಡ್ ಪ್ಲಾನ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. | Kannada Prabha

ಸಾರಾಂಶ

ಕರ್ನಾಟಕ ಬ್ಯಾಂಕ್ ವತಿಯಿಂದ ಪಿಎಂ ಸ್ವನಿಧಿ ಯೋಜನೆಯಲ್ಲಿ 36 ಫಲಾನುಭವಿಗಳಿಗೆ ಮಂಜೂರಾದ ಸಾಲವನ್ನು ವಿತರಣೆ ಮಾಡದೇ ವಿಳಂಬ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ವಾರದೊಳಗೆ ಎಲ್ಲ ಫಲಾನುಭವಿಗಳಿಗೆ ಸಾಲದ ಮೊತ್ತವನ್ನು ಪಾವತಿಸುವಂತೆ ಜಿಪಂ ಸಿಇಒ ಈಶ್ವರ ಕಾಂದೂ ಸೂಚಿಸಿದರು.

ಕಾರವಾರ: ಸರ್ಕಾರದ ವಿವಿಧ ಯೋಜನೆಗಳಾದ ಪಿಎಂ ಸ್ವನಿಧಿ, ಪಿಎಂ ಉದ್ಯೋಗ ಸೃಜನಾ ಯೋಜನೆ(ಪಿಎಂ ಇಜಿಪಿ), ಪಿಎಂಎಫ್‌ಎಂಇ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಬ್ಯಾಂಕ್‌ಗಳಲ್ಲಿ ಸಾಲ ಮಂಜೂರಾತಿಗಾಗಿ ಬಾಕಿ ಉಳಿದಿರುವ ಎಲ್ಲ ಅರ್ಜಿಗಳನ್ನು ಶೀಘ್ರದಲ್ಲಿ ಇತ್ಯರ್ಥಗೊಳಿಸಬೇಕು ಎಂದು ಬ್ಯಾಂಕ್ ಅಧಿಕಾರಿಗಳಿಗೆ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಈಶ್ವರಕುಮಾರ ಕಾಂದೂ ನಿರ್ದೇಶನ ನೀಡಿದರು.

ಇಲ್ಲಿನ ಜಿಪಂ ಸಭಾಂಗಣದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್ ವತಿಯಿಂದ ಗುರುವಾರ ಆಯೋಜಿಸಿದ್ದ ಬ್ಯಾಂಕ್‌ಗಳ ಜಿಲ್ಲಾ ಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸರ್ಕಾರದ ಯೋಜನೆಗಳ ಸಾಲಸೌಲಭ್ಯ ಮುಂಜೂರಾತಿಗೆ ಬಾಕಿ ಉಳಿದಿರುವ ಅರ್ಜಿಗಳಿಗೆ ಸಂಬಂಧಿಸಿದಂತೆ ಆಯಾ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಅರ್ಜಿಗಳನ್ನು ವಿಲೇವಾರಿ ಮಾಡುವಂತೆ ತಿಳಿಸಿದ ಅವರು, ಕರ್ನಾಟಕ ಬ್ಯಾಂಕ್ ವತಿಯಿಂದ ಪಿಎಂ ಸ್ವನಿಧಿ ಯೋಜನೆಯಲ್ಲಿ 36 ಫಲಾನುಭವಿಗಳಿಗೆ ಮಂಜೂರಾದ ಸಾಲವನ್ನು ವಿತರಣೆ ಮಾಡದೇ ವಿಳಂಬ ಮಾಡುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ವಾರದೊಳಗೆ ಎಲ್ಲ ಫಲಾನುಭವಿಗಳಿಗೆ ಸಾಲದ ಮೊತ್ತವನ್ನು ಪಾವತಿಸುವಂತೆ ಸೂಚಿಸಿದರು.ಜಿಲ್ಲಾ ಲೀಡ್ ಬ್ಯಾಂಕ್ ವ್ಯವಸ್ಥಾಪಕಿ ಭಾರತಿ ವಸಂತ ಮಾತನಾಡಿ, 2024ರ ನವೆಂಬರ್ ಅಂತ್ಯದವರೆಗೆ ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಜೀವನ ಜ್ಯೋತಿ ಬಿಮಾ ಯೋಜನೆಯಡಿ 2,43,026 ಜನರನ್ನು ನೋಂದಣಿ ಮಾಡಲಾಗಿದೆ. ಪ್ರಧಾನಮಂತ್ರಿ ಬಿಮಾ ಸುರಕ್ಷಾ ಯೋಜನೆಯಡಿ 6,22,180 ಹಾಗೂ ಅಟಲ್ ಪಿಂಚಣಿ ಯೋಜನೆಯಡಿ 98,414 ಜನರನ್ನು ನೋಂದಣಿ ಮಾಡಲಾಗಿದೆ. ಕಳೆದ ಸೆಪ್ಟೆಂಬರ್ ಅಂತ್ಯಕ್ಕೆ ಜಿಲ್ಲೆಯಲ್ಲಿ ₹ 22,974 ಕೋಟಿ ಠೇವಣಿ ಸಂಗ್ರಹಿಸಿ, ₹10,643 ಕೋಟಿ ಸಾಲ ವಿತರಿಸಲಾಗಿದ್ದು, ಸಾಲ ಮತ್ತು ಠೇವಣಿ ಅನುಪಾತ ಶೇ. 46.33ರಷ್ಟಿದ್ದು, ಕಳೆದ ಬಾರಿಗಿಂತ ಶೇ. 2.11ರಷ್ಟು ಹೆಚ್ಚಾಗಿದೆ ಎಂದರು.

ನಬಾರ್ಡ್ ಡಿಡಿಎಂ ಸುಶೀಲ್ ನಾಯ್ಕ ಮಾತನಾಡಿದರು. ಇದೇ ಸಂದರ್ಭದಲ್ಲಿ ನಬಾರ್ಡ್ ವತಿಯಿಂದ ಪೋಟೆನ್ಸಿಯಲ್ ಕ್ರೆಡಿಟ್ ಲಿಂಕ್ಡ್ ಪ್ಲಾನ್ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಜಿಪಂ ಮುಖ್ಯ ಯೋಜನಾಧಿಕಾರಿ ಸೋಮಶೇಖರ ಮೇಸ್ತಾ, ಯೋಜನಾ ನಿರ್ದೇಶಕ ಕರೀಂ ಅಸದಿ, ಮುಖ್ಯ ಲೆಕ್ಕಾಧಿಕಾರಿ ಆನಂದಸಾ ಹಬೀಬ್, ಕೆನರಾ ಬ್ಯಾಂಕ್‌ನ ಪ್ರಾದೇಶಿಕ ವ್ಯವಸ್ಥಾಪಕಿ ಬಿ.ಎಸ್. ಶುಭ ಇದ್ದರು.ಅನಾರೋಗ್ಯದಿಂದ ನೊಂದು ಮಹಿಳೆ ಆತ್ಮಹತ್ಯೆ

ಮುಂಡಗೋಡ: ಅನಾರೋಗ್ಯ ತಾಳಲಾರದೆ ಮಹಿಳೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಹಿರೇಹಳ್ಳಿ ಗ್ರಾಮದಲ್ಲಿ ನಡೆದಿದೆ. ಆಶಾಬಿ ಕರೆಡಳ್ಳಿ(೩೮) ನೇಣಿಗೆ ಶರಣಾದ ಮಹಿಳೆ. ಅನಾರೋಗ್ಯದಿಂದ ಆಶಾಬಿ ಕೊರಗುತ್ತಿದ್ದರು. ಗುರುವಾರ ಮಧ್ಯರಾತ್ರಿ ಮನೆ ಚಾವಣಿಯ ಜಂತಿಗೆ ನೇಣು ಬಿಗಿದುಕೊಂಡು ಸಾವಿಗೀಡಾಗಿದ್ದಾರೆ ಎನ್ನಲಾಗಿದೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ದೀರ್ಘಾವಧಿ ಸಿಎಂ ಸಂಭ್ರಮಕ್ಕೆ ಗೃಹಲಕ್ಷ್ಮಿ ಹಣ ನೀಡಿದ ಮಹಿಳೆ!
4 ಜಿಲ್ಲೆಗಳಲ್ಲಿ 13 ಸಾವಿರ ಕೇಸ್‌ ಬಾಕಿ : ಸಚಿವ ತರಾಟೆ