ಕನ್ನಡಪ್ರಭ ವಾರ್ತೆ ಭಾಲ್ಕಿ
ಬೆಳಗ್ಗೆಯ ನಡೆ-ಹಳ್ಳಿ ಕಡೆ ಅಭಿಯಾನದ ಅಂಗವಾಗಿ ಶುಕ್ರವಾರ ತಾಲ್ಲೂಕಿನ ಖಟಕಚಿಂಚೋಳಿ, ಏಣಕೂರ, ಕುರುಬಖೇಳಗಿ, ತಳವಾಡ (ಕೆ), ಧನ್ನೂರ, ಹಲಬರ್ಗಾ ಹಾಗೂ ಮಳಚಾಪೂರ ಈ ಗ್ರಾಪಂ/ಗ್ರಾಮಗಳಲ್ಲಿ ಗ್ರಾಮ ಸಂಚಾರ ಕೈಗೊಂಡ ಸಿಇಒ ಅವರು, ಗ್ರಾಮದ ಪ್ರತಿಯೊಂದು ಓಣಿಯಲ್ಲಿ ಸಂಚರಿಸಿ ಕುಡಿಯುವ ನೀರು ಹಾಗೂ ದಿನನಿತ್ಯ ಗೃಹ ಬಳಕೆಗಾಗಿ ಬಳಸುವ ನೀರಿನ ಸಮಸ್ಯೆಯನ್ನು ಪರಿಶೀಲಿಸಿದರು.
ಖಟಕಚಿಂಚೋಳಿ ಗ್ರಾಮದಲ್ಲಿ ಜೆಜೆಎಂ ಕಾಮಗಾರಿಯನ್ನು ಪರಿಶೀಲಿಸಿದ ಅವರು ಗ್ರಾಮದಲ್ಲಿ ಪೋಲಾಗುತ್ತಿರುವ ನೀರಿನ ತಡೆಗಾಗಿ ಸೂಚಿಸಿದರು. ಗ್ರಾಮದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಔಷಧಿ ದಾಸ್ತಾನು ಪರಿಶೀಲಿಸಿದರು. ಬಾಣಂತಿಯರ ಆರೋಗ್ಯ, ಯೋಗಕ್ಷೇಮ ವಿಚಾರಿಸಿದರು.2018-19ನೇ ಸಾಲಿನಲ್ಲಿ ಕೆಕೆಆರ್ಡಿಬಿ ಅನುದಾನದಲ್ಲಿ ನಿರ್ಮಾಣಗೊಂಡ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಹಳೆಯ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸ್ಥಳಾಂತರಿಸುವಂತೆ ಫೋನ್ ಕರೆ ಮೂಲಕ ಜಿಲ್ಲಾ ಆರೋಗ್ಯ ಅಧಿಕಾರಿಗೆ ಸಿಇಒ ಸೂಚಿಸಿದರು. ಖಟಕಚಿಂಚೋಳಿ ಹಾಗೂ ಏಣಕೂರ ಗ್ರಾಮದಲ್ಲಿ ಬಸ್ ನಿಲ್ದಾಣ ನಿರ್ಮಿಸಲಾಗುವುದು ಎಂದರು.
ತಾಪಂ ಇಒ ಬೀರೇಂದ್ರ ಸಿಂಗ್ ಠಾಕೂರ್, ಗ್ರಾಮೀಣ ಕುಡಿಯುವ ನೀರು ಇಲಾಖೆ ಅಭಿಯಂತರ ದತ್ತಾತ್ರೆಯ ಮೇಧಾ, ಎಇಇ ಮಾಣಿಕರಾವ ಕೆರೂರ, ಜೆಇ ಖಾಜಾ ಆಯಾಜುದ್ದಿನ, ಏಣಕೂರ ಗ್ರಾಪಂ ಪಿಡಿಒ ಆನಂದ್ ಬೇಲೂರೆ, ಕುರುಬಖೇಳಗಿ ಗ್ರಾಪಂ ಪಿಡಿಒ ಶ್ರೀಕಾಂತ್, ಮಳಚಾಪೂರ ಗ್ರಾಪಂ ಪಿಡಿಒ ವಿಶ್ವಶಾಲಾ, ತಾಂತ್ರಿಕ ಸಂಯೋಜಕ ಅಮರನಾಥ ಪಾಟೀಲ್, ಐಇಸಿ ಸಂಯೋಜಕ ಗಣಪತಿ ಹರಕೂಡೆ, ಟಿಎಇ ಮುಕೇಶ ಪಾಟೀಲ್, ರವಿ ಹಾಗೂ ಇತರರು ಇದ್ದರು.