ಮನರೇಗಾ ಕಾಮಗಾರಿ ಪರಿಶೀಲಿಸಿದ ಜಿಪಂ ಸಿಇಒ ಶಿಂಧೆ

KannadaprabhaNewsNetwork | Published : Mar 21, 2025 12:33 AM

ಸಾರಾಂಶ

ರಾಮದುರ್ಗ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯ ಕಾಮಗಾರಿಗಳ ಸ್ಥಳಗಳಿಗೆ ಮಂಗಳವಾರ ಭೇಟಿ ನೀಡಿದ ಜಿಪಂ ಸಿಇಒ ರಾಹುಲ್ ಶಿಂಧೆ ಪರಿಶೀಲಿಸಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ರಾಮದುರ್ಗ ತಾಲೂಕಿನ ವಿವಿಧ ಗ್ರಾಮ ಪಂಚಾಯತಿಗಳ ವ್ಯಾಪ್ತಿಯಲ್ಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿಯ ಕಾಮಗಾರಿಗಳ ಸ್ಥಳಗಳಿಗೆ ಮಂಗಳವಾರ ಭೇಟಿ ನೀಡಿದ ಜಿಪಂ ಸಿಇಒ ರಾಹುಲ್ ಶಿಂಧೆ ಪರಿಶೀಲಿಸಿದರು.

ರಾಮದುರ್ಗ ತಾಲೂಕಿನ ಹಿರೇಕೊಪ್ಪ ಕೆ.ಎಸ್.ಗ್ರಾಪಂಗೆ ಭೇಟಿ ನೀಡಿ ಅವರು ಮನರೇಗಾ ಯೋಜನೆಯಡಿ ಕೈಗೊಂಡಿದ್ದ ಕಾಲುವೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಕೆಲಸ ಮಾಡುತ್ತಿದ್ದ ಕೂಲಿಕಾರರನ್ನು ಭೇಟಿ ಮಾಡಿ ಕೂಲಿ ಜಮೆ ಹಾಗೂ ಇತರೆ ಕುಂದು ಕೊರತೆಗಳನ್ನು ಆಲಿಸಿದರು. ಬಳಿಕ ಗ್ರಾಪಂ ಸದಸ್ಯರೊಂದಿಗೆ ಸಭೆ ನಡೆಸಿದರು. ಗ್ರಾಮ ಪಂಚಾಯತಿ ಸಿಬ್ಬಂದಿಯ ಹಾಜರಾತಿ, ಇ ಸ್ವತ್ತು ಹಾಗೂ ತೆರಿಗೆ ವಸೂಲಾತಿ ಅಲ್ಲದೇ ವಿವಿಧ ಯೋಜನೆಗಳ ಕುರಿತು ಪ್ರಗತಿ ಪರಿಶೀಲಿಸಿದರು

ಕೆ.ಚಂದರಗಿ ಗ್ರಾಪಂ ವ್ಯಾಪ್ತಿಯ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿದ ಜಿಪಂ ಸಿಇಒ ಅವರು ಮಕ್ಕಳಿಗೆ ವಿತರಿಸುವ ಪೌಷ್ಟಿಕ ಆಹಾರ ಮಕ್ಕಳ ಸಂಖ್ಯೆ ಹಾಗೂ ಅಡುಗೆ ಮನೆ ಕುರಿತು ಪರಿಶೀಲನೆ ನಡೆಸಿದರು. ಅದೇ ರೀತಿ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಮಕ್ಕಳ ಬಿಸಿ ಊಟ ಮಾಡುತ್ತಿರುವುದನ್ನು ಪರಿಶೀಲನೆ ಮಾಡಿದರು. ತದನಂತರ ಘನ ತ್ಯಾಜ್ಯ ವಿಲೇವಾರಿ ಘಟಕ ವೀಕ್ಷಿಸಿದರು.

ಸುನ್ನಾಳ, ಹಿರೇಕೊಪ್ಪ ಕೆ.ಎಸ್. ಹಾಗೂ ಕಟಕೋಳ ಗ್ರಾಪಂ ವ್ಯಾಪ್ತಿಯಡಿ ನಿರ್ಮಿಸಿರುವ ಯು.ಎಚ್.ಟಿ. ನೀರಿನ್ ಟ್ಯಾಂಕ್ ಮತ್ತು ಜಾಕ್ವಾಲ್ ಪರಿಶೀಲಿಸಿದರು.

ನಂತರ ರಾಮದುರ್ಗ ತಾಲೂಕ ಪಂಚಾಯಿತಿಯಲ್ಲಿ ತಾಲೂಕಿನ ಎಲ್ಲಾ ಇಲಾಖೆ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಪ್ರಗತಿ ಪರಿಶೀಲಿನೆ ನಡೆಸಿ ಬೇಸಿಗೆ ಅವಧಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಮುಂಜಾಗ್ರತ ಕ್ರಮ ತೆಗೆದುಕೊಳ್ಳಲು ಸೂಚನೆ ನೀಡಿದರು

ಇಇ ಎಸ್ ಬಿ ಕೊಳಿ, ತಾಪಂ ಇಒ ಬಸವರಾಜ್ ಐನಾಪುರ್, ಎಇಇ ನಿಜಾಮ್ ಸುರಪುರ, ಸಿ.ಡಿಪಿ.ಒ ಶಂಕರ ಕುಂಬಾರ, ಸಹಾಯಕ ನಿರ್ದೇಶಕರಾದ ಶೇಖರ್ ಹಿರೇಸೋಮಣ್ಣವರ, ಅಪ್ಪಯಪ್ಪ ಕುಂಬಾರ ಹಾಗೂ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.

ಪತ್ರಕರ್ತರನ್ನು ಸಭೆಯಿಂದ ಹೊರಹಾಕಿದ ಸಿಇಒ

ಕನ್ನಡಪ್ರಭ ವಾರ್ತೆ ರಾಮದುರ್ಗ

ಸರ್ಕಾರದ ನಿರ್ದೇಶನದಂತೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳುವ ದೃಷ್ಟಿಯಿಂದ ಜರುಗಿದ ಪ್ರಗತಿ ಪರಿಶೀಲನಾ ಸಭೆಯಿಂದ ಜಿಪಂ ಸಿಇಒ ರಾಹುಲ್ ಶಿಂದೆ ಪತ್ರಕರ್ತರನ್ನು ಹೊರಗೆ ಹಾಕಿ ನಡೆಸಿದರು.

ಇಲ್ಲಿನ ತಾಲೂಕು ಪಂಚಾಯತಿ ಸಭಾಭವನದಲ್ಲಿ ಬೆಳಗಾವಿ ಜಿಲ್ಲಾ ಪಂಚಾಯತಿ ಕಾರ್ಯದರ್ಶಿ ರಾಹುಲ್‌ ಶಿಂಧೆ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯ ಆರಂಭಕ್ಕೂ ಮುನ್ನ ಇದು ಅಧಿಕಾರಿಗಳ ಸಭೆ, ಪತ್ರಕರ್ತರು, ಸಾರ್ವಜನಿಕರಿಗೆ ಪ್ರವೇಶ ಇಲ್ಲ. ಸಭೆಯ ಎಲ್ಲ ನಡುವಳಿಗಳನ್ನು ಪತ್ರಿಕೆಗಳಿಗೆ ನಂತರ ತಿಳಿಸಲಾಗುವುದು ಎಂದು ಅಧಿಕಾರ ದುರ್ಬಳಕೆ ಮಾಡಿಕೊಂಡ ಸಿಇಒ ಪತ್ರಕರ್ತರನ್ನು ಹೊರಗೆ ಹಾಕಿದರು.

ರಾಮದುರ್ಗ ತಾಲೂಕಿನಲ್ಲಿ ಸುಮಾರು 11 ಗ್ರಾಮಗಳಲ್ಲಿ ಬೇಸಿಗೆ ಕಾಲದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಶಾಸಕರ ಅಧ್ಯಕ್ಷತೆಯಲ್ಲಿ ಕಳೆದ ತಿಂಗಳು ನಡೆದ ಕೆಡಿಪಿ ಸಭೆಯಲ್ಲಿ ಕುಡಿಯುವ ನೀರು ಮತ್ತು ನೈರ್ಮಲ್ಯ ಅಧಿಕಾರಿ ಮಾಹಿತಿ ನೀಡದ್ದರು. ಇದರ ಮುಂಜಾಗೃತಾ ಕ್ರಮವಾಗಿ ಅಧಿಕಾರಿಗಳು ಯಾವ ಕ್ರಮಗಳನ್ನು ಕೈಗೊಂಡಿದ್ದಾರೆ. ಎಲ್ಲೆಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸುವ ಸಭೆಗೆ ಪತ್ರಕರ್ತರನ್ನು ಸೇರಿಸದೇ ಇರುವುದು ಬಹುತೇಕ ಅಧಿಕಾರಿಗಳಿಗೂ ಬೇಸರ ತಂದಿತು.

ಕುಡಿಯುವ ನೀರು ಮತ್ತು ಬೇಸಿಗೆ ನಿರ್ವಹಣೆ ವಿಷಯದಲ್ಲಿ ಕೆಲ ಅಧಿಕಾರಿಗಳು ತಪ್ಪು ಎಸಗಿರುತ್ತಾರೆ. ಅವರನ್ನು ನಿಂದಿಸುವುದು ಸಾಮಾನ್ಯ. ಇಂಥ ವಿಷಯಗಳು ಪತ್ರಿಕೆಗಳಲ್ಲಿ ಬರುವುದು ಸೂಕ್ತವಲ್ಲ. ಮಾಧ್ಯಮದವರು ಸಭೆಯಿಂದ ಹೊರಗೆ ಹೋಗುವಂತೆ ಸೂಚನೆ ನೀಡಿದರು. ನಂತರ ಬಾಗಿಲು ಹಾಕಿಕೊಂಡು ಸಭೆ ನಡೆಸಿದರು.

ಮಧ್ಯಾಹ್ನ 3ಕ್ಕೆ ನಿಗದಿಯಾಗಿದ್ದ ಸಭೆಗೆ ಬೆಳಗಾವಿ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯದರ್ಶಿ ರಾಹುಲ್ ಶಿಂಧೆ ಒಂದು ಗಂಟೆ ತಡವಾಗಿ ಆಗಮಿಸಿದರು. ಸಭೆಗೆ ಬಂದಿದ್ದ ಪತ್ರಕರ್ತರನ್ನು ಹೊರ ಹೋಗಲು ಸೂಚಿಸಿದ ಸಿಇಒ ಅವರ ನಡೆಗೆ ತಾಲೂಕಿನ ಪತ್ರಕರ್ತರ ಸಂಘ ಖಂಡಿಸಿದೆ. ಈ ಕುರಿತಂತೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲು ಸಿದ್ಧತೆ ನಡೆದಿದೆ. ಪ್ರಗತಿ ಪರಿಶೀಲನಾ ಸಭೆಯಲ್ಲಿ ತಾಪಂ ಇಒ ಬಸವರಾಜ ಐನಾಪೂರ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.

Share this article