ಜಿಪಂ ಉಪ ಕಾರ್ಯದರ್ಶಿಯಿಂದ ಮಹಿಳಾ ನೌಕರರಿಗೆ ಬೆದರಿಕೆ

KannadaprabhaNewsNetwork |  
Published : May 31, 2025, 12:24 AM IST
೩೦ಕೆಎಂಎನ್‌ಡಿ-೧ಮಂಡ್ಯದ ತಾಲೂಕು ಪಂಚಾಯಿತಿ ಕಚೇರಿಗೆ ಉಪ ಲೋಕಾಯುಕ್ತ ಬಿ.ವೀರಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದ ಸಂದರ್ಭದ ದೃಶ್ಯ. | Kannada Prabha

ಸಾರಾಂಶ

ತಾಪಂ ವ್ಯವಸ್ಥಾಪಕ ವಿ.ಎಸ್.ಭೈರೇಶ್ ಕಚೇರಿಗೆ ಸರಿಯಾಗಿ ಹಾಜರಾಗದಿರುವುದು, ಇತರೆ ನೌಕರರ ವಿರುದ್ಧ ಬರುವ ದೂರುಗಳನ್ನು ತಮ್ಮ ವ್ಯಾಪ್ತಿಗೆ ಬರದಿದ್ದರೂ ಅವುಗಳನ್ನು ನೋಡುವುದು, ದೂರುಗಳ ಬಗ್ಗೆ ಸಿಇಒ ಅವರ ಗಮನಕ್ಕೆ ತಾರದೆ ಅವುಗಳನ್ನಿಟ್ಟುಕೊಂಡು ಜಿಲ್ಲೆಯ ಎಲ್ಲಾ ಪಂಚಾಯಿತಿ ನೌಕರರನ್ನು ಹೆದರಿಸುತ್ತಾರೆಂದು ತಿಳಿದುಬಂದಿದೆ. ವಿನಃ ಕಾರಣ ಜಿಲ್ಲಾ ಪಂಚಾಯಿತಿಗೆ ಹೋಗಿಬರುವ ಕಾರಣ ಅವರ ಚಲನ-ವಲನದ ಬಗ್ಗೆ ಸಿಸಿಟೀವಿ ಫೂಟೇಜ್ ನೀಡುವಂತೆ ತಾಪಂ ಇಒ ಅವರಿಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಪಂ ಉಪ ಕಾರ್ಯದರ್ಶಿ (ಆಡಳಿತ) ಹಾಗೂ ತಾಪಂ ಆಡಳಿತಾಧಿಕಾರಿ ಎಂ.ಬಾಬು ಅವರು ಮಹಿಳಾ ನೌಕರರನ್ನು ಹೆದರಿಸುವುದು, ಸಂಬಳಕ್ಕಿಂತ ಹೆಚ್ಚಿನ ಹಣದ ವಹಿವಾಟನ್ನು ಫೋನ್-ಪೇ ಮೂಲಕ ನಡೆಸಿರುವುದು ಹಾಗೂ ಪಂಚಾಯಿತಿ ನೌಕರರ ಶಿಸ್ತು ಪ್ರಾಧಿಕಾರದ ಉಸ್ತುವಾರಿಯನ್ನು ದುರುಪಯೋಗಪಡಿಸಿಕೊಂಡು ನೌಕರರಿಗೆ ತೊಂದರೆ ಕೊಡುತ್ತಿರುವುದು ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ನಡೆಸಿದ ಪರಿಶೀಲನೆ ವೇಳೆ ಕಂಡುಬಂದಿದೆ.

ತಾಲೂಕು ಪಂಚಾಯಿತಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ತಾಪಂ ಆಡಳಿತಾಧಿಕಾರಿಯೂ ಆಗಿರುವ ಎಂ.ಬಾಬು ಮೊಬೈಲ್ ಫೋನ್- ಪೇ ಪರಿಶೀಲಿಸಲಾಗಿ ತಮ್ಮ ಸಂಬಳಕ್ಕಿಂತ ಹೆಚ್ಚಿನ ಹಣದ ವಹಿವಾಟು ನಡೆಸಿರುವುದು ಕಂಡುಬಂತು. ವಹಿವಾಟಿನ ಮೊದಲು ಅಥವಾ ನಂತರ ತನ್ನ ಮೇಲಧಿಕಾರಿಗಳಿಂದ ಯಾವುದೇ ಅನುಮತಿ ಪಡೆದಿಲ್ಲ. ಈ ವಿಷಯವಾಗಿ ತನ್ನ ಆಸ್ತಿ ಮತ್ತು ದಾಯಿತ್ವ ಪಟ್ಟಿಯಲ್ಲಿ ನಮೂದಿಸಿರುವುದಿಲ್ಲವೆಂದು ಸ್ವತಃ ಬಾಬು ಅವರೇ ಒಪ್ಪಿಕೊಂಡಿದ್ದಾರೆಂದು ತಿಳಿಸಲಾಗಿದೆ.

ಮಹಿಳಾ ನೌಕರರನ್ನು ಹೆದರಿಸುವುದು, ಪಂಚಾಯಿತಿ ನೌಕರರ ಶಿಸ್ತು ಪ್ರಾಧಿಕಾರದ ಉಸ್ತುವಾರಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ತೊಂದರೆ ನೀಡುತ್ತಿದ್ದಾರೆ ಎಂದು ಅಲ್ಲಿದ್ದ ನೌಕರರು ಮೌಖಿಕವಾಗಿ ಉಪ ಲೋಕಾಯುಕ್ತರಿಗೆ ತಿಳಿಸಿರುವುದನ್ನು ವರದಿಯಲ್ಲಿ ದಾಖಲಿಸಿದ್ದಾರೆ.

ತಾಯಿ ಖಾತೆಯಿಂದ ಲಕ್ಷ ಲಕ್ಷ ವಹಿವಾಟು:

ವಿ.ಎಸ್.ಭೈರೇಶ್ ಅವರು ಮಾಸಿಕ ೯೦ ಸಾವಿರ ರು. ವೇತನ ಪಡೆಯುತ್ತಿದ್ದು, ಲಕ್ಷ ಲಕ್ಷಗಟ್ಟಲೆ ಹಣವನ್ನು ತಾಯಿಯ ಖಾತೆಯಿಂದ ತಮ್ಮ ಖಾತೆಗೆ ವರ್ಗಾವಣೆಯಾಗಿರುವುದು ಅವರ ಮೊಬೈಲ್‌ನ ಫೋನ್-ಪೇ ಪರಿಶೀಲನೆಯಿಂದ ಕಂಡುಬಂದಿದೆ. ಅವರು ತಮ್ಮ ವೇತನಕ್ಕಿಂತ ಹೆಚ್ಚಿನ ವಹಿವಾಟು ನಡೆಸಿರುವ ಬಗ್ಗೆ ಮೇಲಧಿಕಾರಿಗಳಿಂದ ಅನುಮತಿ ಪಡೆದಿಲ್ಲ. ಆಸ್ತಿ ಮತ್ತು ದಾಯಿತ್ವ ಪಟ್ಟಿಯಲ್ಲೂ ನಮೂದಿಸಿಲ್ಲವೆಂದು ಭೈರೇಶ್‌ರವರೇ ಉಪ ಲೋಕಾಯುಕ್ತರ ಎದುರು ಒಪ್ಪಿಕೊಂಡಿದ್ದಾರೆ.

ಪಂಚಾಯಿತಿ ನೌಕರರಿಗೆ ಬೆದರಿಕೆ:

ತಾಪಂ ವ್ಯವಸ್ಥಾಪಕ ವಿ.ಎಸ್.ಭೈರೇಶ್ ಕಚೇರಿಗೆ ಸರಿಯಾಗಿ ಹಾಜರಾಗದಿರುವುದು, ಇತರೆ ನೌಕರರ ವಿರುದ್ಧ ಬರುವ ದೂರುಗಳನ್ನು ತಮ್ಮ ವ್ಯಾಪ್ತಿಗೆ ಬರದಿದ್ದರೂ ಅವುಗಳನ್ನು ನೋಡುವುದು, ದೂರುಗಳ ಬಗ್ಗೆ ಸಿಇಒ ಅವರ ಗಮನಕ್ಕೆ ತಾರದೆ ಅವುಗಳನ್ನಿಟ್ಟುಕೊಂಡು ಜಿಲ್ಲೆಯ ಎಲ್ಲಾ ಪಂಚಾಯಿತಿ ನೌಕರರನ್ನು ಹೆದರಿಸುತ್ತಾರೆಂದು ತಿಳಿದುಬಂದಿದೆ. ವಿನಃ ಕಾರಣ ಜಿಲ್ಲಾ ಪಂಚಾಯಿತಿಗೆ ಹೋಗಿಬರುವ ಕಾರಣ ಅವರ ಚಲನ-ವಲನದ ಬಗ್ಗೆ ಸಿಸಿಟೀವಿ ಫೂಟೇಜ್ ನೀಡುವಂತೆ ತಾಪಂ ಇಒ ಅವರಿಗೆ ಸೂಚಿಸಿದರು.

ನಾಲ್ವರು ಸಿಬ್ಬಂದಿಗೆ ಎಚ್‌ಆರ್‌ಎ ಕಡಿತವಿಲ್ಲ:

ತಾಪಂನಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗೆ ೧೧ ವಸತಿ ಗೃಹಗಳನ್ನು ಹಂಚಿಕೆ ಮಾಡಲಾಗಿದೆ. ಇದರಲ್ಲಿ ದಿವ್ಯಶ್ರೀ, ದಿವಾಕರ್, ಅರವಿಂದ, ಜೋಸೆಫ್ ಅವರಿಗೆ ವಸತಿ ನಿಲಯ ಹಂಚಿದ್ದರೂ ಅವರ ವೇತನದಿಂದ ಯಾವುದೇ ಎಚ್‌ಆರ್‌ಎ ಕಡಿತಗೊಳಿಸಿರುವುದಿಲ್ಲ. ಇವರಿಗೆ ಹಂಚಿಕೆ ಮಾಡಿರುವ ಆದೇಶಪತ್ರ, ಇತರೆ ದಾಖಲೆಗಳನ್ನು ಹಾಜರುಪಡಿಸುವಂತೆ ತಿಳಿಸಿದ್ದರೂ ಅವುಗಳನ್ನು ಒದಗಿಸಿಲ್ಲ. ಎಚ್‌ಆರ್‌ಎ ವಸೂಲಾತಿಗೂ ಕ್ರಮ ವಹಿಸದಿರುವುದು ಕಂಡುಬಂದಿತು.

ಉಪ ಲೋಕಾಯುಕ್ತರು ಜಿಲ್ಲೆಗೆ ಭೇಟಿ ನೀಡುವುದಾಗಿ, ಕಚೇರಿಯಲ್ಲಿ ಎಲ್ಲಾ ಸಿಬ್ಬಂದಿ ಹಾಜರಿರಬೇಕೆಂದು ತಿಳಿಸಿದ್ದರೂ ತಾಪಂ ಕಚೇರಿಯಲ್ಲಿ ಪಿಡಿಇಒಗಳಾದ ಗೌರಮ್ಮ, ಬಿ.ಎನ್.ನಂದೀಶ್, ವಾಹನ ಚಾಲಕ ಕೆ.ಶ್ರೀನಿವಾಸ್, ಗ್ರೂಪ್-ಡಿ ನೌಕರರಾದ ಸಿ.ಬಸವರಾಜು, ಮರಿಮಾನು, ರಾಮಯ್ಯ ಅವರು ಕಚೇರಿಯಲ್ಲಿ ಹಾಜರಿರಲಿಲ್ಲ. ಕಚೇರಿಯಿಂದ ಹೊರಗೆ ಹೋಗಿರುವ ಬಗ್ಗೆಯೂ ಚಲನ-ವಲನ ವಹಿಯಲ್ಲಿ ನಮೂದಿಸಿಲ್ಲದಿವುದು ಗಮನಕ್ಕೆ ಬಂದಿತು. ಅಧಿಕಾರಿಗಳ ನಿರ್ಲಕ್ಷ್ಯತೆ, ನ್ಯೂನತೆಗಳ ಬಗ್ಗೆ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವುದಾಗಿ ಉಪ ಲೋಕಾಯುಕ್ತರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಪ್ರಾರ್ಥನೆ ಮಾತಿನ ಬೆನ್ನಲ್ಲೇ ಡಿಕೆಶಿ ಇಂದು ದಿಲ್ಲಿ ಭೇಟಿ ಕುತೂಹಲ
ಧಮ್ಕಿ ರಾಜೀವ್‌ಗೌಡ ವಿರುದ್ಧ 2 ಕೇಸ್‌, ಬೆನ್ನಲ್ಲೇ ನಾಪತ್ತೆ