ಜಿಪಂ, ತಾಪಂ ಚುನಾವಣೆ: ಹಳ್ಳಿಗಳಲ್ಲಿ ರಾಜಕೀಯ ಚುರುಕು

KannadaprabhaNewsNetwork |  
Published : Oct 13, 2026, 02:15 AM IST
ಚುನಾವಣೆ | Kannada Prabha

ಸಾರಾಂಶ

ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಮೀಸಲಾತಿ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ಆಹ್ವಾನಿಸುತ್ತಿದ್ದಂತೆ ಕೊಪ್ಪಳ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಜಿಲ್ಲಾ ಪಂಚಾಯಿತಿ ಹಾಗೂ ತಾಲೂಕು ಪಂಚಾಯಿತಿ ಚುನಾವಣೆಗಳ ಮೀಸಲಾತಿ ಪ್ರಕಟಿಸಿ, ಆಕ್ಷೇಪಣೆ ಸಲ್ಲಿಸಲು ಅವಕಾಶ ಆಹ್ವಾನಿಸುತ್ತಿದ್ದಂತೆ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿವೆ. ಪ್ರಕಟಿಸಿರುವ ಮೀಸಲಾತಿಯೇ ಅಂತಿಮವಾಗಬಹುದು ಎಂಬ ಲೆಕ್ಕಾಚಾರದಲ್ಲಿ ಚುನಾವಣಾ ಆಕಾಂಕ್ಷಿಗಳು ಟಿಕೆಟ್‌ಗಾಗಿ ತಮ್ಮ ತಮ್ಮ ಪಕ್ಷಗಳ ನಾಯಕರ ಬೆನ್ನು ಬಿದ್ದಿದ್ದಾರೆ. ಹಳ್ಳಿಗಳಲ್ಲಿ ರಾಜಕೀಯ ಚರ್ಚೆ, ಸಭೆ, ಔತಣಕೂಟ ಹಾಗೂ ಮನೆ ಮನೆ ಭೇಟಿ ಚಟುವಟಿಕೆ ಚುರುಕುಗೊಂಡಿವೆ.

ಜಿಲ್ಲೆಯಲ್ಲಿ 30 ಜಿಪಂ ಹಾಗೂ 104 ತಾಪಂ ಕ್ಷೇತ್ರಗಳಿದ್ದು, ಕಾಂಗ್ರೆಸ್‌, ಬಿಜೆಪಿ ಮತ್ತು ಜೆಡಿಎಸ್‌ಗಳಲ್ಲಿ ಟಿಕೆಟ್‌ಗಾಗಿ ತೆರೆಮರೆಯ ಕಸರತ್ತು ಆರಂಭವಾಗಿದೆ. ಮೀಸಲಾತಿ ಪ್ರಕಟವಾಗುತ್ತಿದ್ದಂತೆ ಆಯಾ ಕ್ಷೇತ್ರಗಳ ಆಕಾಂಕ್ಷಿಗಳು ತಮ್ಮ ರಾಜಕೀಯ ಸಂಪರ್ಕಗಳನ್ನು ಬಳಸಿಕೊಂಡು ಟಿಕೆಟ್‌ ಗಿಟ್ಟಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈಗಿನ ಮೀಸಲಾತಿಯ ಆಧಾರದಲ್ಲಿಯೇ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿರುವ ಹಲವರಿಗೆ, ಒಂದು ವೇಳೆ ಮೀಸಲಾತಿ ಬದಲಾದರೆ ತಮ್ಮ ಲೆಕ್ಕಾಚಾರ ತಲೆಕೆಳಗಾಗಬಹುದು ಎಂಬ ಆತಂಕವೂ ಇದೆ.

ಹಳ್ಳಿಗಳಲ್ಲಿ ಔತಣಕೂಟಗಳ ರಾಜಕೀಯ: ಟಿಕೆಟ್‌ ಪಡೆಯುವ ಪ್ರಯತ್ನದ ಜತೆಗೆ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಬೆಂಬಲ ಗಳಿಸುವ ಕಸರತ್ತೂ ನಡೆಯುತ್ತಿದೆ. ಗ್ರಾಮಗಳ ಹೊರವಲಯದ ತೋಟಗಳಲ್ಲಿ ಔತಣಕೂಟಗಳನ್ನು ಆಯೋಜಿಸಿ, ಎರಡನೇ ಹಂತದ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ತಾಪಂ ಹಾಗೂ ಜಿಪಂ ಚುನಾವಣೆಗಳು ಒಟ್ಟಿಗೆ ನಡೆಯುವ ನಿರೀಕ್ಷೆಯಿಂದ ಎರಡೂ ಹಂತಗಳಲ್ಲಿ ಸ್ಪರ್ಧಿಸಲು ಬಯಸಿರುವ ಆಕಾಂಕ್ಷಿಗಳು ಪ್ರತ್ಯೇಕ ಸಭೆ ನಡೆಸಿ, ತಮ್ಮ ಬೆಂಬಲಿಗರನ್ನು ಸಂಘಟಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರದ ಅಬ್ಬರ: ಸಾಮಾಜಿಕ ಜಾಲತಾಣಗಳು ಚುನಾವಣಾ ಆಕಾಂಕ್ಷಿಗಳ ಪ್ರಚಾರದ ವೇದಿಕೆಗಳಾಗಿವೆ. ‘ನಾನು ಈ ಕ್ಷೇತ್ರದಿಂದ ಸ್ಪರ್ಧಿಸಲು ಬಯಸಿದ್ದೇನೆ, ನಿಮ್ಮ ಬೆಂಬಲ ಇರಲಿ’ ಎಂಬ ಮನವಿಯೊಂದಿಗೆ ಫೇಸ್‌ಬುಕ್‌, ವಾಟ್ಸ್‌ಆ್ಯಪ್‌ ಸೇರಿದಂತೆ ವಿವಿಧ ವೇದಿಕೆಗಳಲ್ಲಿ ಪೋಸ್ಟ್‌ಗಳು ಹರಿದಾಡುತ್ತಿವೆ. ಕೆಲವರು ತಮ್ಮ ಕ್ಷೇತ್ರದ ಜನರನ್ನು ನೇರವಾಗಿ ಭೇಟಿ ಮಾಡಿ ಬೆಂಬಲ ಕೋರುತ್ತಿದ್ದರೆ, ಇನ್ನು ಕೆಲವರು ಗ್ರಾಪಂ ಮಟ್ಟದ ಮುಖಂಡರು ಹಾಗೂ ಕಾರ್ಯಕರ್ತರನ್ನು ಸಂಪರ್ಕಿಸಿ ತಮ್ಮ ಪರವಾಗಿ ಜನರನ್ನು ಸಂಘಟಿಸುವಂತೆ ಮನವಿ ಮಾಡುತ್ತಿದ್ದಾರೆ.

ನಾಯಕರಿಗೆ ಆಕಾಂಕ್ಷಿಗಳದ್ದೇ ತಲೆನೋವು: ಒಂದೇ ಕ್ಷೇತ್ರದಲ್ಲಿ ಹಲವು ಆಕಾಂಕ್ಷಿಗಳು ಬಹಿರಂಗವಾಗಿ ಸ್ಪರ್ಧೆಯ ಇಂಗಿತ ವ್ಯಕ್ತಪಡಿಸುತ್ತಿರುವುದು ಪಕ್ಷದ ನಾಯಕರಿಗೆ ಹೊಸ ತಲೆನೋವಾಗಿದೆ. ಟಿಕೆಟ್‌ ಭರವಸೆ ಪಡೆದಿದ್ದೇವೆ ಎನ್ನುವವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಆರಂಭಿಸಿರುವುದರಿಂದ, ಇತರ ಆಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಎಲ್ಲರನ್ನೂ ಸಮಾಧಾನಪಡಿಸಿ ಪಕ್ಷದೊಳಗಿನ ಭಿನ್ನಾಭಿಪ್ರಾಯ ತಡೆಯುವುದು ನಾಯಕರಿಗೆ ಸವಾಲಾಗಿದೆ.

ಮದ್ಯ ಮಾರಾಟದ ಮೇಲೂ ನಿಗಾ: ಚುನಾವಣಾ ಚಟುವಟಿಕೆ ಹಿನ್ನೆಲೆಯಲ್ಲಿ ಮದ್ಯದ ಅಕ್ರಮ ಮಾರಾಟ ಹಾಗೂ ಹಂಚಿಕೆ ಹೆಚ್ಚಾಗದಂತೆ ಪೊಲೀಸ್ ಇಲಾಖೆ ಜಿಲ್ಲಾದ್ಯಂತ ನಿಗಾ ವಹಿಸಿದೆ. ಅಕ್ರಮ ಮದ್ಯ ಮಾರಾಟದ ವಿರುದ್ಧ ಪರಿಶೀಲನೆ ಮತ್ತು ದಾಳಿ ನಡೆಸಲಾಗುತ್ತಿದೆ. ಒಟ್ಟಿನಲ್ಲಿ, ಅಧಿಕೃತ ಚುನಾವಣಾ ವೇಳಾಪಟ್ಟಿ ಪ್ರಕಟವಾಗುವ ಮುನ್ನವೇ ಗ್ರಾಮೀಣ ಭಾಗದಲ್ಲಿ ರಾಜಕೀಯ ಚಟುವಟಿಕೆ ವೇಗ ಪಡೆದುಕೊಂಡಿದ್ದು, ಟಿಕೆಟ್‌ ಯಾರ ಪಾಲಾಗಲಿದೆ ಎಂಬ ಕುತೂಹಲ ಹೆಚ್ಚಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕೈಗಾರಿಕಾ ವಸಾಹತು ಸ್ಥಾಪನೆಯಿಂದ ನಿರುದ್ಯೋಗ ಸಮಸ್ಯೆ ನಿವಾರಣೆ
ಪೌಷ್ಟಿಕ ಆಹಾರವೇ ಮನುಷ್ಯನ ಆರೋಗ್ಯಕ್ಕೆ ಮನೆ ಮದ್ದು; ಲಲಿತಾ