ಮಂಡ್ಯ ಜಿಲ್ಲೆಯೊಳಗೆ ಅಡಗಿದ ‘ಜೆಡಿಎಸ್ ದನಿ’..!

KannadaprabhaNewsNetwork | Updated : Mar 05 2024, 02:37 PM IST

ಸಾರಾಂಶ

ಜೆಡಿಎಸ್ ಭದ್ರಕೋಟೆ ಎಂದೇ ಹೆಸರಾಗಿದ್ದ ಮಂಡ್ಯ ಜಿಲ್ಲೆಯೊಳಗೆ ಈಗ ದಳಪತಿಗಳ ದನಿ ಅಡಗಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದರೂ ಪಕ್ಷದೊಳಗೆ ಯಾವುದೇ ಸಿದ್ಧತೆ ಆರಂಭಗೊಂಡಿಲ್ಲ. ಬಿಜೆಪಿ-ಜೆಡಿಎಸ್ ಚುನಾವಣಾ ಮೈತ್ರಿಯಿಂದ ಮಂಡ್ಯ ಕ್ಷೇತ್ರ ದಳಪತಿಗಳ ಕೈತಪ್ಪಿಹೋಗಬಹುದೆಂಬ ಆತಂಕ ಅವರಲ್ಲಿದೆ.

ಮಂಡ್ಯ ಮಂಜುನಾಥ

ಕನ್ನಡಪ್ರಭ ವಾರ್ತೆ ಮಂಡ್ಯ

ಜೆಡಿಎಸ್ ಭದ್ರಕೋಟೆ ಎಂದೇ ಹೆಸರಾಗಿದ್ದ ಮಂಡ್ಯ ಜಿಲ್ಲೆಯೊಳಗೆ ಈಗ ದಳಪತಿಗಳ ದನಿ ಅಡಗಿದೆ. ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದರೂ ಪಕ್ಷದೊಳಗೆ ಯಾವುದೇ ಸಿದ್ಧತೆ ಆರಂಭಗೊಂಡಿಲ್ಲ. ಬಿಜೆಪಿ-ಜೆಡಿಎಸ್ ಚುನಾವಣಾ ಮೈತ್ರಿಯಿಂದ ಮಂಡ್ಯ ಕ್ಷೇತ್ರ ದಳಪತಿಗಳ ಕೈತಪ್ಪಿಹೋಗಬಹುದೆಂಬ ಆತಂಕ ಅವರಲ್ಲಿದೆ.

ಚುನಾವಣೆಗೆ ಇನ್ನು ಎರಡೇ ತಿಂಗಳು ಬಾಕಿ ಉಳಿದಿದ್ದರೂ ಬಿಜೆಪಿ-ಜೆಡಿಎಸ್ ನಡುವೆ ಸೀಟು ಹಂಚಿಕೆ ನಡೆದಿಲ್ಲ. ಅಭ್ಯರ್ಥಿ ಆಯ್ಕೆಯೂ ಅಂತಿಮವಾಗಿಲ್ಲ. ಬಿಜೆಪಿ ವರಿಷ್ಠರು ಸೀಟು ಹಂಚಿಕೆ ಸಂಬಂಧ ಮಾತುಕತೆ ಮುಂದೂಡುತ್ತಲೇ ಇರುವುದರಿಂದ ಜಿಲ್ಲಾ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಗೊಂದಲದಲ್ಲಿ ಮುಳುಗಿದ್ದಾರೆ.

ಕ್ಷೇತ್ರದೊಳಗೆ ಚುರುಕಾದ ಸುಮಲತಾ: ೨೦೧೯ರ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದ್ದ ಸುಮಲತಾ ಕಳೆದ ವಿಧಾನಸಭಾ ಚುನಾವಣೆಯಿಂದ ಬಿಜೆಪಿಗೆ ಬೆಂಬಲ ಘೋಷಿಸಿ ಆ ಪಕ್ಷದೊಳಗೆ ಗುರುತಿಸಿಕೊಳ್ಳುತ್ತಿದ್ದಾರೆ. 

ಇನ್ನೂ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗದಿದ್ದರೂ ಬಿಜೆಪಿ-ಜೆಡಿಎಸ್ ಮೈತ್ರಿ ಟಿಕೆಟ್ ನನಗೆ ಸಿಗುವುದು ಖಚಿತ ಎಂಬ ಆತ್ಮವಿಶ್ವಾಸದಲ್ಲಿದ್ದಾರೆ. ಜಿಲ್ಲೆಯೊಳಗೆ ಬಿರುಸಿನಿಂದ ಸಂಚರಿಸುತ್ತಿರುವ ಸುಮಲತಾ, ಚುನಾವಣಾ ಪೂರ್ವ ಸಿದ್ಧತೆ ಚುರುಕುಗೊಳಿಸಿದ್ದಾರೆ. 

ಮಂಡ್ಯ ಲೋಕಸಭಾ ಕ್ಷೇತ್ರದ ಎಲ್ಲಾ ತಾಲೂಕುಗಳಿಗೆ ತೆರಳಿ ಮುಖಂಡರು, ಕಾರ್ಯಕರ್ತರನ್ನು ಭೇಟಿಯಾಗಲು ಪ್ರವಾಸಕ್ಕೆ ರೆಡಿಯಾಗುತ್ತಿದ್ದಾರೆ.

ಸರ್ಕಾರಿ, ಖಾಸಗಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಾ ದಿನದಿಂದ ದಿನಕ್ಕೆ ಮಂಡ್ಯ ಕ್ಷೇತ್ರ ರಾಜಕೀಯದೊಳಗೆ ಸಕ್ರಿಯರಾಗುತ್ತಿರುವ ಸುಮಲತಾ, ಕೇವಲ ಹದಿನೈದು ದಿನದಲ್ಲಿ ಆರು ಬಾರಿ ಮಂಡ್ಯ ಕ್ಷೇತ್ರದೊಳಗೆ ಪ್ರವಾಸ ಕೈಗೊಂಡಿದ್ದಾರೆ. 

ಆದಿಚುಂಚನಗಿರಿ ಮಠಕ್ಕೆ ತೆರಳಿ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರ ಆಶೀರ್ವಾದ ಪಡೆದಿದ್ದರೆ, ಮತ್ತೊಂದೆಡೆ ಚುನಾವಣೆಗೆ ಪೂರ್ವದಲ್ಲೇ ಶ್ರೀರಂಗಪಟ್ಟಣದ ಶ್ರೀನಿಮಿಷಾಂಬ ದೇವಿಯ ಬಲಭಾಗದಿಂದ ಹೂ ಪಡೆದಿರುವ ಶುಭಸೂಚನೆಯೊಂದಿಗೆ ಮತ್ತಷ್ಟು ಬಿರುಸಾಗಿ ಸಂಚರಿಸಲಾರಂಭಿಸಿದ್ದಾರೆ.

ಸಂಘಟನೆ ಮರೆತ ದೇವೇಗೌಡ, ನಿಖಿಲ್: ಜೆಡಿಎಸ್ ಪಕ್ಷವನ್ನು ಸಂಘಟಿಸುವ ಉದ್ದೇಶದಿಂದ ಜಿಲ್ಲಾ ಪ್ರವಾಸ ಕೈಗೊಳ್ಳುವುದಕ್ಕೆ ಮುಂದಾಗಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹಾಗೂ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಅವರು ಪಕ್ಷ ಸಂಘಟನೆ ಮರೆತು ರಾಜಧಾನಿ ಸೇರಿಕೊಂಡಿದ್ದಾರೆ.

ಮಂಡ್ಯ ಕ್ಷೇತ್ರ ಜೆಡಿಎಸ್ ಕೈತಪ್ಪಬಹುದೆಂಬ ಭೀತಿಯಿಂದಲೇ ದೇವೇಗೌಡರು ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಜಿಲ್ಲಾ ಪ್ರವಾಸದಿಂದ ದೂರ ಉಳಿದಿದ್ದಾರೆ ಎಂಬ ಮಾತುಗಳು ಜೆಡಿಎಸ್ ವಲಯದಲ್ಲಿ ಕೇಳಿಬರುತ್ತಿವೆ. 

ಫೆಬ್ರವರಿಯಲ್ಲೇ ದೇವೇಗೌಡರು ಮತ್ತು ನಿಖಿಲ್ ಪ್ರವಾಸ ಹಮ್ಮಿಕೊಳ್ಳುವ ಸಂಬಂಧ ಬೆಂಗಳೂರಿನಲ್ಲಿ ಜಿಲ್ಲಾ ನಾಯಕರೊಂದಿಗೆ ಸಭೆ ನಡೆಸಿದ್ದರು. ಪ್ರವಾಸದ ರೂಪು-ರೇಷೆಗಳನ್ನು ತಯಾರಿಸುವ ಪ್ರಕ್ರಿಯೆಯೂ ನಡೆದಿತ್ತು. ದಿನಕ್ಕೆ ಒಂದು ವಿಧಾನಸಭಾ ಕ್ಷೇತ್ರದಂತೆ ೮ ದಿನ ಗೌಡರು ಪ್ರವಾಸ ಹಮ್ಮಿಕೊಳ್ಳುವುದಾಗಿ ನಿರ್ಧರಿಸಿದ್ದರು. ಸದ್ಯ ಕ್ಷೇತ್ರ ಹಂಚಿಕೆ ಗೊಂದಲದಿಂದ ಪ್ರವಾಸದಿಂದಲೂ ದೂರ ಉಳಿದಿದ್ದಾರೆ.

ಕಾರ್ಯಕರ್ತರಲ್ಲಿ ಅತೃಪ್ತಿ, ಅಸಮಾಧಾನ, ಅಸಹಾಯಕತೆ: ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದರೂ ಜೆಡಿಎಸ್ ವರಿಷ್ಠರು ಜಿಲ್ಲೆಯಿಂದ ದೂರ ಉಳಿದಿರುವುದು. ಜಿಲ್ಲಾ ನಾಯಕರೊಂದಿಗೆ ಚುನಾವಣಾ ತಯಾರಿ ಕುರಿತು ಯಾವುದೇ ಮಾತುಕತೆ, ಚರ್ಚೆ, ಸಲಹೆ, ಸೂಚನೆ ನೀಡದಿರುವುದರಿಂದ ಸ್ಥಳೀಯ ನಾಯಕರು ಗೊಂದಲದಲ್ಲಿ ಮುಳುಗಿದ್ದಾರೆ. 

ವರಿಷ್ಠರು ಮತ್ತು ಜಿಲ್ಲಾ ನಾಯಕರ ನಡವಳಿಕೆಯಿಂದ ಕಾರ್ಯಕರ್ತರು ಬೇಸರಗೊಂಡಿದ್ದಾರೆ. ಅತೃಪ್ತಿ, ಅಸಮಾಧಾನ, ಅಸಹಾಯಕತೆ, ಮೌನ ಅವರನ್ನು ಆವರಿಸಿದೆ.

ಸದ್ಯ ಜಿಲ್ಲೆಯೊಳಗೆ ಬಿಜೆಪಿಗಿಂತ ಜೆಡಿಎಸ್ ಹೆಚ್ಚು ಪ್ರಾಬಲ್ಯವನ್ನು ಹೊಂದಿದ್ದರೂ ಉಭಯ ಪಕ್ಷಗಳೊಳಗಿನ ಮೈತ್ರಿ ದಳಪತಿಗಳ ಬಾಯನ್ನು ಕಟ್ಟಿಹಾಕಿದೆ. ಜೆಡಿಎಸ್ ಸೂತ್ರದ ದಾರವನ್ನು ಬಿಜೆಪಿ ತನ್ನ ಕೈಯ್ಯಲ್ಲಿ ಹಿಡಿದುಕೊಂಡಿದೆ. 

ಮಂಡ್ಯ ಕ್ಷೇತ್ರವನ್ನು ಬಿಟ್ಟುಕೊಡಲು ಬಿಜೆಪಿ ವರಿಷ್ಠರು ಮನಸ್ಸು ಮಾಡದಿರುವುದರಿಂದ ದಳಪತಿಗಳು ಮಂಡ್ಯ ಲೋಕಸಭಾ ಕ್ಷೇತ್ರದ ಬಗ್ಗೆ ಆಸಕ್ತಿಯನ್ನೇ ಕಳೆದುಕೊಳ್ಳುವಂತೆ ಮಾಡಿದೆ. ಕೊನೆಗೆ ಸುಮಲತಾ ಅವರಿಗೇ ಕ್ಷೇತ್ರ ಬಿಟ್ಟುಕೊಟ್ಟರೂ ಆಶ್ಚರ್ಯವಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಕಾಂಗ್ರೆಸ್ ಅಭ್ಯರ್ಥಿಯೂ ಸಕ್ರಿಯ: ಕಾಂಗ್ರೆಸ್ ಲೋಕಸಭಾ ಚುನಾವಣೆಗೆ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿದ್ದು, ಅಧಿಕೃತ ಪ್ರಕಟಣೆಯಷ್ಟೇ ಬಾಕಿ ಇದೆ. ನಾಗಮಂಗಲ ತಾಲೂಕು ಕನ್ನಘಟ್ಟ ಗ್ರಾಮದ ವೆಂಕಟರಮಣೇಗೌಡ (ಸ್ಟಾರ್‌ ಚಂದ್ರು) ಅವರನ್ನು ಅಖಾಡಕ್ಕಿಳಿಸಲಿದೆ. 

ಸಚಿವ ಎನ್.ಚಲುವರಾಯಸ್ವಾಮಿ ಅವರು ಈಗಾಗಲೇ ಎಲ್ಲೆಡೆ ವೆಂಕಟರಮಣೇಗೌಡರನ್ನು ಕರೆದುಕೊಂಡು ಹೋಗುತ್ತಾ ಚುನಾವಣಾ ಕಾರ್ಯಚಟುವಟಿಕೆಯಲ್ಲಿ ಸಕ್ರಿಯಗೊಳಿಸುತ್ತಿದ್ದಾರೆ.

ನಿತ್ಯ ಕ್ಷೇತ್ರದೊಳಗೆ ಒಂದಲ್ಲಾ ಒಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾ ಶಾಸಕರು, ಮುಖಂಡರು, ಕಾರ್ಯಕರ್ತರೊಂದಿಗೆ ಓಡಾಡುತ್ತಿದ್ದಾರೆ. ಪಕ್ಷದವರೆಲ್ಲರೂ ಒಮ್ಮತದೊಂದಿಗೆ ವೆಂಕಟರಮಣೇಗೌಡರ ಬೆಂಬಲಕ್ಕೆ ನಿಂತು ಅವರನ್ನು ಜನರಿಗೆ ಪರಿಚಯಿಸುವ ಕಾರ್ಯವನ್ನು ಬಹಳ ವ್ಯವಸ್ಥಿತವಾಗಿ ಮಾಡುತ್ತಿದ್ದಾರೆ. ಇದರೊಂದಿಗೆ ಕಾಂಗ್ರೆಸ್ ಕೂಡ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಮುನ್ನುಗ್ಗಲಾರಂಭಿಸಿದೆ.

ಒಂದೆಡೆ ಸುಮಲತಾ ಲೋಕಸಭೆ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿ ನಾನೇ ಎಂದು ಗಟ್ಟಿಯಾಗಿ ಕೂಗಿ ಹೇಳುತ್ತಿದ್ದಾರೆ. 

ಜೊತೆಗೆ ತಮ್ಮ ರಾಜಕೀಯ ಕಾರ್ಯಚಟುವಟಿಕೆಗಳು, ಚುನಾವಣಾ ಸಿದ್ಧತೆ ಚುರುಕಾಗಿ ನಡೆಸುತ್ತಿದ್ದಾರೆ. ಮತ್ತೊಂದೆಡೆ ಕಾಂಗ್ರೆಸ್ ಕೂಡ ತನ್ನ ಅಭ್ಯರ್ಥಿಯನ್ನು ಈಗಾಗಲೇ ಕ್ಷೇತ್ರದೊಳಗೆ ಸಕ್ರಿಯಗೊಳಿಸಿದೆ. 

ಇದರ ನಡುವೆ ಚುನಾವಣೆಗೆ ಸಂಬಂಧಿಸಿದಂತೆ ಯಾವುದೇ ಕಾರ್ಯಚಟುವಟಿಕೆಯಿಲ್ಲದೆ ನಿಷ್ಕ್ರೀಯವಾಗಿರುವ ಪಕ್ಷವೆಂದರೆ ಅದು ಜೆಡಿಎಸ್ ಮಾತ್ರ. ದಳಪತಿಗಳ ಮೌನ ಮಂಡ್ಯ ಕ್ಷೇತ್ರ ಕೈತಪ್ಪಿಹೋಗುತ್ತಿರುವುದರ ಮುನ್ಸೂಚನೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

Share this article