ಕನ್ನಡಪ್ರಭ ವಾರ್ತೆ ಬೆಂಗಳೂರು
ಇತ್ತೀಚಿಗೆ ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಕೂಗಿದ ಪ್ರಕರಣ ಸಂಬಂಧ ವಿಧಿ ವಿಜ್ಞಾನ ಪ್ರಯೋಗಾಲಯದ (ಎಫ್‌ಎಸ್‌ಎಲ್) ವರದಿಯನ್ನು ಬಹಿರಂಗಪಡಿಸುವಂತೆ ಒತ್ತಾಯಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಬೆಂಗಳೂರು ನಗರ ಬಿಜೆಪಿ ಶಾಸಕರ ನಿಯೋಗವು ಮನವಿ ಸಲ್ಲಿಸಿದೆ.
ಸೋಮವಾರ ನಗರದ ನೃಪತುಂಗ ರಸ್ತೆಯಲ್ಲಿರುವ ರಾಜ್ಯ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಡಿಜಿಪಿ ಅಲೋಕ್ ಮೋಹನ್ ಅವರನ್ನು ಭೇಟಿಯಾಗಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದವರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಶಾಸಕರು ಆಗ್ರಹಿಸಿದರು.
ಕಳೆದ ಫೆ.27ರಂದು ವಿಧಾನಸೌಧದ ಕಾರಿಡಾರ್‌ನಲ್ಲಿ ರಾಜ್ಯಸಭಾ ಸದಸ್ಯ ಡಾ। ಸೈಯದ್ ನಾಸೀರ್ ಹುಸೇನ್ ಅವರ ಬೆಂಬಲಿಗರು ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದರು.
ಅನಂತರ ಗೃಹ ಸಚಿವ ಡಾ। ಪರಮೇಶ್ವರ್ ಅವರು ಘಟನೆ ಕುರಿತು ಎಫ್‍ಎಸ್‍ಎಲ್ ವರದಿಯನ್ನು ಶೀಘ್ರವೇ ಬಹಿರಂಗ ಮಾಡುವ ಭರವಸೆ ನೀಡಿದ್ದರು. ಆದರೆ ಘಟನೆ ನಡೆದು ಒಂದು ವಾರ ಕಳೆದರೂ ಎಫ್‍ಎಸ್‍ಎಲ್ ವರದಿಯ ಮಾಹಿತಿ ಇಲ್ಲವೇಕೆ ಎಂದು ಶಾಸಕರು ಪ್ರಶ್ನಿಸಿದರು.
ಸತ್ಯ ತಿಳಿಸಲು ವಿಳಂಬವೇಕೆ? ವಾಸ್ತವ ಸಂಗತಿ ಮರೆಮಾಚಲು ಮತ್ತು ತನಿಖೆಯ ದಿಕ್ಕನ್ನು ಹಳಿ ತಪ್ಪಿಸಲು ನಿಮ್ಮ ಮೇಲೆ ಯಾವುದಾದರೂ ಒತ್ತಡವಿದೆಯೇ? ಎಂದು ನಿಯೋಗ ಪ್ರಶ್ನಿಸಿತು.
ಎಫ್‍ಎಸ್‍ಎಲ್ ವರದಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಅನೇಕ ಪೋಸ್ಟ್‌ಗಳಿವೆ. ಆದ್ದರಿಂದ ಈ ತನಿಖೆಯ ವಾಸ್ತವಾಂಶವನ್ನು ತಿಳಿಯಲು ಬಯಸುತ್ತೇವೆ.
ರಾಜ್ಯದ ಜವಾಬ್ದಾರಿಯುತ ವಿಪಕ್ಷವಾಗಿ, ನಾವು ಈ ಪತ್ರಕ್ಕೆ ನಿಮ್ಮಿಂದ ಪ್ರಾಮಾಣಿಕ ಮತ್ತು ತ್ವರಿತ ಪ್ರತ್ಯುತ್ತರದ ನಿರೀಕ್ಷೆಯಲ್ಲಿದ್ದೇವೆ ಎಂದು ಹೇಳಿದರು.
ನಿಯೋಗದಲ್ಲಿ ಶಾಸಕರಾದ ಎಲ್.ಎ.ರವಿಸುಬ್ರಹ್ಮಣ್ಯ, ಸಿ.ಕೆ.ರಾಮಮೂರ್ತಿ, ಉದಯ.ಬಿ.ಗರುಡಾಚಾರ್ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಂದೀಶ್ ರೆಡ್ಡಿ ಇದ್ದರು.
ವಿಳಂಬದಿಂದ ಮುಂದೆ ಸಹ ಈ ರೀತಿ ದೇಶವಿರೋಧಿ ಮತ್ತು ಸಮಾಜಘಾತುಕ ಕೆಲಸ ಮಾಡುವ ಜನರಿಗೆ ಮತ್ತಷ್ಟು ಬಲ ಬಂದಂತಾಗುತ್ತದೆ. -ಬಿಜೆಪಿ ನಿಯೋಗ