ದಿಲ್ಲೀಲಿ ಅತಿಕ್ರಮಣ ಮಾಡಿ ನಿರ್ಮಿಸಿದ ಆಪ್‌ ಕಚೇರಿ ತೆರವಿಗೆ ಜೂ.15ರ ಗಡುವು

KannadaprabhaNewsNetwork | Published : Mar 5, 2024 1:33 AM

ಸಾರಾಂಶ

ದಿಲ್ಲಿಯ ಆಡಳಿತಾರೂಢ ಆಮ್‌ ಆದ್ಮಿ ಪಕ್ಷದ ಕಚೇರಿಯನ್ನು ದಿಲ್ಲಿ ಹೈಕೋರ್ಟ್‌ಗೆ ಸೇರಿದ ಜಾಗ ಅತಿಕ್ರಮಣ ಮಾಡಿ ನಿರ್ಮಿಸಲಾಗಿದೆ. ಹೀಗಾಗಿ ಆಪ್‌, ತನ್ನ ಕಚೇರಿಯನ್ನು ಜೂ.15ರ ಒಳಗೆ ತೆರವು ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ನವದೆಹಲಿ: ದಿಲ್ಲಿಯ ಆಡಳಿತಾರೂಢ ಆಮ್‌ ಆದ್ಮಿ ಪಕ್ಷದ ಕಚೇರಿಯನ್ನು ದಿಲ್ಲಿ ಹೈಕೋರ್ಟ್‌ಗೆ ಸೇರಿದ ಜಾಗ ಅತಿಕ್ರಮಣ ಮಾಡಿ ನಿರ್ಮಿಸಲಾಗಿದೆ. ಹೀಗಾಗಿ ಆಪ್‌, ತನ್ನ ಕಚೇರಿಯನ್ನು ಜೂ.15ರ ಒಳಗೆ ತೆರವು ಮಾಡಬೇಕು ಎಂದು ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಆದರೆ ಆಪ್‌ ರಾಷ್ಟ್ರೀಯ ಪಕ್ಷ ಆಗಿರುವ ಕಾರಣ ಕಚೇರಿಯನ್ನು ಹೊಂದಲು ಅಧಿಕಾರವಿದೆ. ಹೀಗಾಗಿ ಆಪ್‌ಗೆ ಬೇರೆ ಸ್ಥಳದಲ್ಲಿ ಹೊಸ ಕಚೇರಿಗೆ ಜಮೀನು ಒದಗಿಸಲು ಭೂ ಅಭಿವೃದ್ಧಿ ಇಲಾಖೆಗೆ ಸೂಚಿಸಿದೆ. ನ್ಯಾಯಾಂಗಕ್ಕೆ ಸಂಬಂಧಿಸಿದ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಜಾರಿ ಮಾಡುವಾಗ ದಿಲ್ಲಿ ಹೈಕೋರ್ಟ್‌ ಸ್ಥಳವನ್ನು ಅತಿಕ್ರಮಿಸಿಕೊಂಡು ಆಪ್‌ ತನ್ನ ಕಚೇರಿ ನಿರ್ಮಿಸಿಕೊಂಡಿದೆ ಎಂದು ಬೆಳಕಿಗೆ ಬಂದಿತ್ತು. ‘ರೋಸ್‌ ಅವೆನ್ಯೂ ಪ್ರದೇಶದಲ್ಲಿರುವ ಆಪ್‌ ಕಚೇರಿಯನ್ನು ದಿಲ್ಲಿ ಹೈಕೋರ್ಟ್ ವಿಸ್ತರಣೆಗೆ ಒದಗಿಸಲಾಗಿದೆ. ಹೀಗಾಗಿ ಆ ಸ್ಥಳವನ್ನು ಆಪ್‌ ತೆರವು ಮಾಡಬೇಕು. ಆದರೆ ಆಪ್‌ ರಾಷ್ಟ್ರೀಯ ಪಕ್ಷ ಆಗಿರುವ ಕಾರಣ ಲೋಕಸಭೆ ಚುನಾವಣೆ ನಿಮಿತ್ತ ಈಗಲೇ ತೆರವು ಮಾಡುವಂತೆ ನಾವು ಸೂಚಿಸುವುದಿಲ್ಲ. ಜೂ.15ರವರೆಗೆ ತೆರವಿಗೆ ಅವಕಾಶ ನೀಡುತ್ತೇವೆ’ ಎಂದು ನ್ಯಾ। ಡಿ.ವೈ. ಚಂದ್ರಚೂಡ್‌ ಅವರಿದ್ದ ಪೀಠ ಹೇಳಿತು.

8ನೇ ಸಮನ್ಸ್‌ಗೂ ಕೇಜ್ರಿ ಗೈರು: ಮಾ.12ರ ಬಳಿಕ ವರ್ಚ್ಯುವಲ್‌ ಹಾಜರಿ ಆಫರ್ನವದೆಹಲಿ: ಅಬಕಾರಿ ಹಗರಣದ ಹಣ ಅಕ್ರಮ ವರ್ಗಾವಣೆಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಇ.ಡಿ) ಹೊರಡಿಸಿದ್ದ ಸಮನ್ಸ್‌ಗೆ ಸೋಮವಾರ ಎಂಟನೇ ಬಾರಿಯೂ ದೆಹಲಿ ಸಿಎಂ ಅರವಿಂದ್‌ ಕೇಜ್ರಿವಾಲ್‌ ಗೈರಾದರು. ಆದರೆ ಮಾ.12ರ ನಂತರ ವಿಡಿಯೋ ಕಾನ್ಫರೆನ್ಸ್‌ ಮೂಲಕ ಇ.ಡಿ ವಿಚಾರಣೆಗೆ ಹಾಜರಾಗಲು ಸಿದ್ಧವಾಗಿರುವುದಾಗಿ ಹೇಳಿದ್ದಾರೆ ಎಂದು ದೆಹಲಿ ಸರ್ಕಾರದ ಮೂಲಗಳು ಹೇಳಿವೆ.ವಿಡಿಯೋ ಕಾನ್ಫರೆನ್ಸ್‌ ಅನ್ನು ನೇರ ಪ್ರಸಾರ ಮಾಡಲಾಗುವುದು ಎಂದು ಆಮ್‌ ಆದ್ಮಿ ಪಕ್ಷ (ಎಎಪಿ) ಹೇಳಿದೆ. ಕೇಜ್ರಿವಾಲ್‌ ಪ್ರತಿಕ್ರಿಯೆಯನ್ನು ಪರಿಶೀಲಿಸುತ್ತಿರುವುದಾಗಿ ಇ.ಡಿ ಹೇಳಿದೆ. ವರ್ಚುವಲ್‌ ವಿಚಾರಣೆಗೆ ಕೇಜ್ರಿವಾಲ್‌ ಸಲ್ಲಿಸಿರುವ ಮನವಿಯನ್ನು ಇ.ಡಿ ನಿರಾಕರಿಸಿ ಒಂಬತ್ತನೇ ಬಾರಿ ಸಮನ್ಸ್‌ ನೀಡುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ಏಪ್ರಿಲ್‌ ಅಥವಾ ಮೇನಲ್ಲಿ ಲೋಕಸಭೆ ಚುನಾವಣೆ ದಿನಾಂಕ ಪ್ರಕಟವಾಗುವ ಸಾಧ್ಯತೆ ಇದ್ದು ಚುನಾವಣೆಗೂ ಮುನ್ನ ಕೇಜ್ರಿವಾಲ್‌ರನ್ನು ಬಂಧಿಸಲು ಇ.ಡಿ ಉದ್ದೇಶಿಸಿದೆ ಎಂದು ಎಎಪಿ ಆರೋಪಿಸಿದೆ. ಪ್ರಕರಣದಲ್ಲಿ ತಮ್ಮನ್ನು ಪ್ರಶ್ನೆ ಮಾಡುವ ಸಂಬಂಧ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವುದರಿಂದ ಇ.ಡಿ ಸಮನ್ಸ್‌ ನೀಡುವುದು ಕಾನೂನುಬಾಹಿರ ಎಂದು ಕರೆದಿರುವ ಕೇಜ್ರಿವಾಲ್‌ ವಿಚಾರಣೆಗೆ ಗೈರಾಗುತ್ತಿದ್ದಾರೆ.

Share this article