- ನಾಳೆ ವಿಮಾನದಲ್ಲಿ ಒಯ್ದು ವರಿಷ್ಠರಿಗೆ ಹಸ್ತಾಂತರ- 24ಕ್ಕೆ ರಾಮಲೀಲಾ ಮೈದಾನದಲ್ಲಿ ಸಮಾವೇಶ- ಜಂಟಿ ಸುದ್ದಿಗೋಷ್ಠಿಯಲ್ಲಿ ಸಿದ್ದು, ಡಿಕೆಶಿ ಮಾಹಿತಿ
ಕಳೆದ ಲೋಕಸಭಾ ಚುನಾವಣೆ ವೇಳೆ ಹಲವು ರಾಜ್ಯಗಳಲ್ಲಿ ಮತಗಳವು ನಡೆದಿದ್ದಾಗಿ ಆರೋಪಿಸಿದ್ದ ಕಾಂಗ್ರೆಸ್
ಕರ್ನಾಟಕದ ಮಹದೇವಪುರ, ಆಳಂದ ಕ್ಷೇತ್ರದ ಮತಚೋರಿ ಬಗ್ಗೆ ಸಾಕ್ಷ್ಯ ಬಿಡುಗಡೆ ಮಾಡಿದ್ದ ರಾಹುಲ್ ಗಾಂಧಿಅದರ ಬೆನ್ನಲ್ಲೇ ಮತಗಳವು ಕುರಿತು ಜನರಲ್ಲಿ ಅರಿವು ಮೂಡಿಸಲು ದೇಶವ್ಯಾಪಿ ಸಹಿಸಂಗ್ರಹ ಅಭಿಯಾನ ಶುರು
---ಕನ್ನಡಪ್ರಭ ವಾರ್ತೆ ಬೆಂಗಳೂರು
ಕೆಪಿಸಿಸಿ ಕಚೇರಿಯಲ್ಲಿ ಶನಿವಾರ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಿದ್ದರಾಮಯ್ಯ, ಮತದಾನವು ಪ್ರಜಾಪ್ರಭುತ್ವದ ಬುನಾದಿಯಾಗಿದೆ. ಸಂವಿಧಾನವು ಒಬ್ಬರಿಗೆ ಒಂದು ಮತದ ಹಕ್ಕನ್ನು ನೀಡಿದೆ. ಚುನಾವಣಾ ಆಯೋಗವು ಸ್ವತಂತ್ರ ಸಂಸ್ಥೆಯಾಗಿದ್ದರೂ, ಬಿಜೆಪಿಯ ಕೈಗೊಂಬೆಯಂತೆ ಕೆಲಸ ಮಾಡುತ್ತಿರುವ ಅನುಮಾನವಿದೆ. ಬಿಜೆಪಿ ಕೂಡ ಮತಗಳ್ಳತನ ಮಾಡುವಲ್ಲಿ ನಿಸ್ಸೀಮವಾಗಿದ್ದು, ಹಲವು ರಾಜ್ಯಗಳಲ್ಲಿ ಮತಗಳ್ಳತನದ ಮೂಲಕವೇ ಅಧಿಕಾರಕ್ಕೆ ಬಂದಿದೆ ಎಂದರು.
ಡಿ.ಕೆ. ಶಿವಕುಮಾರ್ ಮಾತನಾಡಿ, ರಾಜ್ಯದಲ್ಲಿ ಮಹದೇವಪುರ, ಆಳಂದ ಸೇರಿದಂತೆ ಇನ್ನಿತರ ವಿಧಾನಸಭಾ ಕ್ಷೇತ್ರಗಳಲ್ಲಿ ಸುಮಾರು 15 ಲಕ್ಷ ಮತಗಳ್ಳತನ ಆಗಿರುವ ಅನುಮಾನವಿದೆ. ಈ ಬಗ್ಗೆ ನನಗೆ ಸಂಪೂರ್ಣ ಮಾಹಿತಿಯಿದೆ. ಆಳಂದದಲ್ಲಿ ಮುಂಜಾನೆ 4 ಗಂಟೆಗೆ ಮತದಾರರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಇದು ಎಸ್‌ಐಟಿ ತನಿಖೆಯಲ್ಲೂ ಬಯಲಾಗುವ ಸಾಧ್ಯತೆಗಳಿವೆ. ಅಲ್ಲದೆ, ಬಿಜೆಪಿ ಪರಾಜಿತ ಅಭ್ಯರ್ಥಿಯೇ ಈ ಕೆಲಸ ಮಾಡಿದ್ದು ಎಂಬ ಬಗ್ಗೆ ದಾಖಲೆಗಳು ಲಭ್ಯವಾಗಿವೆ ಎಂಬ ಮಾಹಿತಿಯಿದೆ. ಈ ಮತಗಳ್ಳತನದ ವಿರುದ್ಧ ನಿರಂತರ ಅಭಿಯಾನ ನಡೆಸಲಾಗುವುದು. ಸಹಿ ಸಂಗ್ರಹವಷ್ಟೇ ಅಲ್ಲದೇ ರಾಜ್ಯದಲ್ಲಿ ಮತ್ತಿತರ ಕಾರ್ಯಕ್ರಮ ನಡೆಸಲಾಗುವುದು ಎಂದರು.
ನ. 25ಕ್ಕೆ ದೆಹಲಿಯಲ್ಲಿ ಸಮಾವೇಶ
---
ಮತಗಳ್ಳತನ ತಡೆಗೆ ಸರ್ಕಾರದಿಂದೇನು ಕ್ರಮ ಎಂಬ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಮತಗಳ್ಳತನ ತಡೆಯುವುದು ಚುನಾವಣಾ ಆಯೋಗದ ಕರ್ತವ್ಯ. ಅದನ್ನು ತೋರಿಸುವುದಷ್ಟೇ ನಮ್ಮ ಕೆಲಸ. ಇನ್ನು, ನಮ್ಮ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತಗಳ್ಳತನ ನಡೆಯದಂತೆ ತಡೆಯಲೆಂದೇ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲು ನಿರ್ಧರಿಸಲಾಗಿದೆ. ಮುಂದಿನ ಗ್ರೇಟರ್ ಬೆಂಗಳೂರು ಪ್ರಾಧಿಕಾರದ 5 ನಗರ ಪಾಲಿಕೆಗಳ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಸಲಾಗುತ್ತದೆ ಎಂದು ಹೇಳಿದರು.
ಸಚಿವ ಸತೀಶ್ ಜಾರಕಿಹೊಳಿ, ವಿಧಾನಪರಿಷತ್ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹಮದ್, ಶಾಸಕರಾದ ಶಿವಣ್ಣ, ಎ.ಸಿ. ಶ್ರೀನಿವಾಸ್, ಎಐಸಿಸಿ ಕಾರ್ಯದರ್ಶಿ ಮನ್ಸೂರ್ ಅಲಿಖಾನ್, ಕೆಪಿಸಿಸಿ ಕಾರ್ಯಾಧ್ಯಕ್ಷ ಜಿ.ಸಿ. ಚಂದ್ರಶೇಖರ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಇತರರಿದ್ದರು.---
ವಾರದಲ್ಲಿ ನಿಗಮ ಮಂಡಳಿ ಸದಸ್ಯರ ನೇಮಕಕಾರ್ಯಕರ್ತರಿಗೆ ನಿಗಮ-ಮಂಡಳಿ ಸದಸ್ಯರ ಸ್ಥಾನ ನೀಡುವ ಕುರಿತ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದ ನಂತರದಿಂದ ಈಗಾಗಲೇ 3 ಸಾವಿರ ಕಾರ್ಯಕರ್ತರಿಗೆ ಅಧಿಕಾರ ನೀಡಲಾಗಿದೆ. ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಕನಿಷ್ಠ 60 ಜನರಿಗೆ ಅಧಿಕಾರ ಸಿಕ್ಕಿದೆ. ಇನ್ನು, ರಾಜ್ಯ ಮಟ್ಟದಲ್ಲಿ ನಿಗಮ-ಮಂಡಳಿಗಳಲ್ಲಿ 600 ಸ್ಥಾನಗಳನ್ನು ಭರ್ತಿ ಮಾಡಬೇಕಿದ್ದು, ಇನ್ನೊಂದು ವಾರದಲ್ಲಿ ನಿಗಮ-ಮಂಡಳಿ ಸದಸ್ಯರ ಹೆಸರು ಪ್ರಕಟಿಸಲಾಗುವುದು ಎಂದರು.