ಕನ್ನಡಪ್ರಭ ವಾರ್ತೆ ಬೆಂಗಳೂರು
ರವೀಂದ್ರ ಕಲಾಕ್ಷೇತ್ರದಲ್ಲಿ ಶನಿವಾರ ಆಯೋಜಿಸಿದ್ದ ಸಂತಶ್ರೇಷ್ಠ ಕನಕದಾಸ ಜಯಂತಿ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಮಾನತೆ ನಿರ್ಮಾಣಕ್ಕಾಗಿ ಭಾಗ್ಯಗಳನ್ನು ಜಾರಿಗೆ ತಂದಿದ್ದೆ. ಈಗ ಗ್ಯಾರಂಟಿ ಯೋಜನೆಗಳ ಮೂಲಕ ಸಮಸಮಾಜ ನಿರ್ಮಾಣಕ್ಕೆ ಪ್ರಯತ್ನಿಸಲಾಗುತ್ತಿದೆ. ಜನರು ವೈಚಾರಿಕ, ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ಅಭಿವೃದ್ಧಿ ಹೊಂದಬೇಕು ಎಂದು ಕರೆ ನೀಡಿದರು.ಸಮಾಜದಲ್ಲಿನ ಅಸಮಾನತೆ ವಿರುದ್ಧ ಬುದ್ಧ, ಬಸವ, ಗಾಂಧಿ, ಅಂಬೇಡ್ಕರ್, ಕನಕದಾಸರು ಧ್ವನಿ ಎತ್ತಿದ್ದಾರೆ. ಆದರೂ ನಮ್ಮದು ಚಲನಶೀಲವಲ್ಲದ ಜಡ್ಡುಗಟ್ಟಿದ ಜಾತಿ ವ್ಯವಸ್ಥೆಯಾಗಿದೆ.ಎರಡೂವರೆ ಸಾವಿರ ವರ್ಷಗಳಿಂದಲೂ ಜಾತಿ ವ್ಯವಸ್ಥೆ ಹೋಗಲಾಡಿಸಲು ಅನೇಕ ಮಹನೀಯರು ಶ್ರಮಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿಷಾದಿಸಿದರು.
ಸಚಿವ ಶಿವರಾಜ ತಂಗಡಗಿ ಮಾತನಾಡಿ, ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು, ಮುಂದುವರಿದ ಜಾತಿಗಳಲ್ಲಿನ ಬಡವರ ಸ್ಥಿತಿಗತಿ ತಿಳಿದುಕೊಳ್ಳಲು ಸರ್ಕಾರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಕೈಗೊಳ್ಳಲು ಮುಂದಾದಾಗ ಬಹಳಷ್ಟು ವಿರೋಧ ವ್ಯಕ್ತವಾದರೂ ಸಿದ್ದರಾಮಯ್ಯ ಅವರ ಪ್ರಯತ್ನದಿಂದಾಗಿ ಸಮೀಕ್ಷೆ ನಡೆಯಿತು ಎಂದರು.
ಸರ್ಕಾರದ ಪ್ರಶಸ್ತಿಗಳು ಅರ್ಹರನ್ನು ತಲುಪುತ್ತಿಲ್ಲ. ಮಾನದಂಡಗಳನ್ನು ಸರಿಯಾಗಿ ಅನುಸರಿಸುತ್ತಿಲ್ಲ ಎಂದು ಕನಕಶ್ರೀ ಪ್ರಶಸ್ತಿಗೆ ಭಾಜನರಾದ ವಿಜಯಪುರದ ಚಂದ್ರಕಾಂತ ಬಿಜ್ಜರಗಿ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದ ಯಾವುದಾದರೊಂದು ಉತ್ತಮ ವಿಶ್ವವಿದ್ಯಾನಿಲಯಕ್ಕೆ ಕನಕದಾಸರ ಹೆಸರನ್ನು ನಾಮಕರಣ ಮಾಡಬೇಕು. ಕುರುಬರ ಸಾಂಸ್ಕೃತಿಕ ಕಲೆಗಳು ನಾಶವಾಗುತ್ತಿದ್ದು ಪುನರುಜ್ಜೀವನಕ್ಕಾಗಿ ಅಕಾಡೆಮಿ ಸ್ಥಾಪಿಸಬೇಕು ಎಂದು ತಿಂಥಿಣಿ ಮಠದ ಸಿದ್ದರಾಮಾನಂದ ಸ್ವಾಮೀಜಿ ಮನವಿ ಮಾಡಿದರು.