;Resize=(412,232))
ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಬುಧವಾರ ಪ್ರಮಾಣವಚನ ಸ್ವೀಕರಿಸಿದ ಒಟ್ಟು 14 ಮಂತ್ರಿಗಳ ಖಾತೆಗಳನ್ನು ಸರ್ಕಾರ ಅಂತಿಮಗೊಳಿಸಿದ್ದು, ಅದಕ್ಕೆ ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರ ಅಂಕಿತ ಬಿದ್ದಿದೆ. ತೀವ್ರ ಪೈಪೋಟಿಗೆ ಕಾರಣವಾಗಿದ್ದ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೃಷ್ಣ ಬೈರೇಗೌಡ ಅವರ ಪಾಲಾಗಿದ್ದರೆ, ಆ ಖಾತೆಯ ಮೇಲೆ ಕಣ್ಣಿಟ್ಟಿದ್ದ ಹಿರಿಯ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಜಲಸಂಪನ್ಮೂಲ ಖಾತೆ ದೊರೆತಿದೆ.
ತೀವ್ರ ಸಮಾಲೋಚನೆಯ ಬಳಿಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಗುರುವಾರ ಸಂಜೆ ಲೋಕಭವನಕ್ಕೆ ಖಾತೆಗಳ ಪಟ್ಟಿಯನ್ನು ರವಾನಿಸಿದ್ದರು. ಆದರೆ ರಾಜ್ಯಪಾಲರು ಗುರುವಾರ ಮಧ್ಯಾಹ್ನವೇ ತಮ್ಮ ತವರು ರಾಜ್ಯ ಮಧ್ಯಪ್ರದೇಶದ ಇಂದೋರ್‌ಗೆ ತೆರಳಿದ್ದರು. ಅವರು ಶನಿವಾರ ವಾಪಸಾಗುವ ಕಾರಣ ಅಂದು ಪಟ್ಟಿಗೆ ಅಂಕಿತ ಬೀಳಬಹುದು ಎಂಬ ನಿರೀಕ್ಷೆ ಇತ್ತು. ಆದರೆ ಗುರುವಾರ ರಾತ್ರಿಯೇ ರಾಜ್ಯಪಾಲರು ಖಾತೆ ಪಟ್ಟಿಗೆ ಸಹಿ ಹಾಕಿದ್ದಾರೆ. ಈ ಕುರಿತು ರಾಜ್ಯ ಸರ್ಕಾರ ರಾಜ್ಯಪತ್ರ ಪ್ರಕಟಿಸಿದೆ.
ಸಿದ್ದರಾಮಯ್ಯ ಸರ್ಕಾರದಲ್ಲಿ ಆಹಾರ ಸಚಿವರಾಗಿದ್ದ ಮುನಿಯಪ್ಪ, ಕೈಗಾರಿಕಾ ಸಚಿವರಾಗಿದ್ದ ಎಂ.ಬಿ.ಪಾಟೀಲ್, ಲೋಕೋಪಯೋಗಿ ಸಚಿವರಾಗಿದ್ದ ಸತೀಶ್ ಜಾರಕಿಹೊಳಿ, ವೈದ್ಯಕೀಯ ಶಿಕ್ಷಣ ಖಾತೆ ಸಚಿವರಾಗಿದ್ದ ಶರಣಪ್ರಕಾಶ್ ಪಾಟೀಲ್ ಅವರಿಗೆ ಈಗಲೂ ಅದೇ ಖಾತೆ ಸಿಕ್ಕಿವೆ. ಕೆ.ಜೆ. ಜಾರ್ಜ್ ಅವರಿಗೆ ಹಿಂದೆ ಇದ್ದ ಇಂಧನ ಖಾತೆ ಜತೆಗೆ, ಈ ಹಿಂದೆ ಎಚ್.ಕೆ. ಪಾಟೀಲ್ ಅವರು ನಿರ್ವಹಿಸುತ್ತಿದ್ದ ಪ್ರವಾಸೋದ್ಯಮ ಖಾತೆಯನ್ನು ಹಂಚಿಕೆ ಮಾಡಲಾಗಿದೆ.
ಕೃಷ್ಣ ಬೈರೇಗೌಡ ಅವರ ಕಂದಾಯ ಖಾತೆ ಉಪಮುಖ್ಯಮಂತ್ರಿ ಪರಮೇಶ್ವರ್ ಅವರ ಪಾಲಾಗಿದೆ. ಪ್ರಿಯಾಂಕ್ ಖರ್ಗೆ ಅವರು ಸಿದ್ದರಾಮಯ್ಯ ಸರ್ಕಾರದಲ್ಲಿ ಹೊಂದಿದ್ದ ಗ್ರಾಮೀಣಾಭಿವೃದ್ಧಿ ಇಲಾಖೆ ಈಶ್ವರ ಖಂಡ್ರೆ ಪಾಲಾಗಿದೆ. ಆದರೆ ಐಟಿ- ಬಿಟಿ ಖಾತೆಗೆ ಜತೆಗೆ ಇ-ಆಡಳಿತವನ್ನು ಖರ್ಗೆ ಉಳಿಸಿಕೊಂಡಿದ್ದಾರೆ. ಜತೆಗೆ ಬಂಪರ್ ಗೃಹ ಖಾತೆ ಸಿಕ್ಕಿದೆ. ಈ ಖಾತೆ ಈ ಹಿಂದೆ ಪರಮೇಶ್ವರ್ ಅವರ ಬಳಿ ಇತ್ತು.
ಬೈರತಿ ಸುರೇಶ್ ಅವರು ಹೊಂದಿದ್ದ ನಗರಾಭಿವೃದ್ಧಿ ಖಾತೆ ಯತೀಂದ್ರ ಸಿದ್ದರಾಮಯ್ಯ ಅವರಿಗೆ ಸಿಕ್ಕಿದ್ದರೆ, ಬೈರತಿ ಅವರು ಸಾರಿಗೆ ಖಾತೆಯನ್ನು ಪಡೆದಿದ್ದಾರೆ. ಸ್ಪೀಕರ್ ಆಗಿದ್ದ ಯು.ಟಿ. ಖಾದರ್ ಅವರಿಗೆ ಆರೋಗ್ಯ ಖಾತೆ ಸಿಕ್ಕಿದೆ. ಸಿದ್ದರಾಮಯ್ಯ ಮೊದಲ ಅವಧಿಯ ಸರ್ಕಾರದಲ್ಲೂ ಅವರು ಆರೋಗ್ಯ ಇಲಾಖೆ ನಿಭಾಯಿಸಿದ್ದರು.
ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ನಗರಾಭಿವೃದ್ಧಿ ವಹಿಸಿದ್ದು, ಗ್ರೇಟರ್ ಬೆಂಗಳೂರು ಪ್ರಾಧಿಕಾರ, ಪಂಚ ಪಾಲಿಕೆಗಳು, ಬೆಂಗಳೂರು ಜಲಮಂಡಳಿ, ಬೆಂಗಳೂರು ಮೆಟ್ರೋ ರೈಲು ನಿಗಮದ ಹೊಣೆ ವಹಿಸಲಾಗಿದೆ. ಆದರೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಬಗ್ಗೆ ಪ್ರಸ್ತಾಪ ಮಾಡಿಲ್ಲ. ಇದನ್ನು ಮುಖ್ಯಮಂತ್ರಿಗಳ ಖಾತೆ ಪಟ್ಟಿಯಲ್ಲೂ ಪ್ರಸ್ತಾಪಿಸಿಲ್ಲದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸಚಿವರಿಗೆ ಯಾವ್ಯಾವ ಖಾತೆಗಳು ಸಿಗಲಿವೆ ಎಂಬುದರ ಬಗ್ಗೆ ‘ಕನ್ನಡಪ್ರಭ’ ಮಾತ್ರ ನಿನ್ನೆಯೇ ವರದಿ ಪ್ರಕಟಿಸಿತ್ತು. ಆ ಪಟ್ಟಿ ಈಗ 100% ನಿಜವಾಗಿದೆ.
ಲೋಕಭವನಕ್ಕೆ ಕಳುಹಿಸಿರುವ ಸಚಿವರ ಖಾತೆಗಳ ವಿವರ
ಡಿ.ಕೆ. ಶಿವಕುಮಾರ್- ಹಣಕಾಸು, ಸಂಸದೀಯ ವ್ಯವಹಾರ, ಡಿಪಿಎಆರ್, ಗುಪ್ತಚರ. ಹಂಚಿಕೆಯಾಗದ ಇತರೆ ಎಲ್ಲ ಖಾತೆಗಳು
ಡಾ.ಜಿ.ಪರಮೇಶ್ವರ್- ಕಂದಾಯ, ಕ್ರೀಡೆ
ಕೆ.ಎಚ್.ಮುನಿಯಪ್ಪ- ಆಹಾರ ಮತ್ತು ನಾಗರಿಕ ಸರಬರಾಜು
ಕೆ.ಜೆ.ಜಾರ್ಜ್- ಇಂಧನ, ಪ್ರವಾಸೋದ್ಯಮ
ಎಂ.ಬಿ.ಪಾಟೀಲ್- ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ
ರಾಮಲಿಂಗಾರೆಡ್ಡಿ - ಬೃಹತ್ ಮತ್ತು ಮಧ್ಯಮ ನೀರಾವರಿ
ಸತೀಶ್ ಜಾರಕಿಹೊಳಿ- ಲೋಕೋಪಯೋಗಿ
ಕೃಷ್ಣ ಬೈರೇಗೌಡ- ಬೆಂಗಳೂರು ನಗರಾಭಿವೃದ್ಧಿ
ಪ್ರಿಯಾಂಕ್ ಖರ್ಗೆ- ಗೃಹ (ಗುಪ್ತಚರ ಹೊರತುಪಡಿಸಿ), ಐಟಿ-ಬಿಟಿ ಮತ್ತು ಇ-ಆಡಳಿತ
ಯು.ಟಿ.ಖಾದರ್- ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಈಶ್ವರ್ ಖಂಡ್ರೆ- ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್
ಯತೀಂದ್ರ ಸಿದ್ದರಾಮಯ್ಯ- ನಗರಾಭಿವೃದ್ಧಿ (ಬೆಂಗಳೂರು ಹೊರತುಪಡಿಸಿ)
ಬೈರತಿ ಸುರೇಶ್-ಸಾರಿಗೆ
ಡಾ.ಶರಣಪ್ರಕಾಶ್ ಪಾಟೀಲ್- ವೈದ್ಯಕೀಯ ಶಿಕ್ಷಣ ಇಲಾಖೆ, ಕೌಶಲ್ಯಾಭಿವೃದ್ಧಿ