;Resize=(412,232))
ಸಂಪತ್ ತರೀಕೆರೆ
ಬೆಂಗಳೂರು : ಒಂದೆಡೆ ನಿಗಮ-ಮಂಡಳಿಗಳಿಗೆ ಹೊಸಬರ ನೇಮಕಾತಿಗೆ ಹೈಕಮಾಂಡ್ ಅನುಮತಿಗಾಗಿ ಕಾಯುತ್ತಿರುವ ಸರ್ಕಾರ, ಮತ್ತೊಂದೆಡೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಬರುವ 14 ಅಕಾಡೆಮಿ ಮತ್ತು ಮೂರು ಪ್ರಾಧಿಕಾರಗಳಿಗೂ ಹೊಸ ಪದಾಧಿಕಾರಿಗಳನ್ನು ನೇಮಿಸಲು ಸಜ್ಜಾಗಿದೆ.
ಅವಧಿ ಮುಕ್ತಾಯಕ್ಕೂ (3 ವರ್ಷ) ಮುನ್ನವೇ ಹೊಸಬರಿಗೆ ಅವಕಾಶ ಮಾಡಿಕೊಡಲು, ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರು, ಪದಾಧಿಕಾರಿಗಳೆಲ್ಲರೂ ಪದತ್ಯಾಗ ಮಾಡುವಂತೆ ಸೂಚನೆ ನೀಡಲಾಗಿದೆ. ನಾಡಹಬ್ಬ ದಸರಾ ಹಬ್ಬ ಮುಗಿಯುತ್ತಿದ್ದಂತೆ ಅಕ್ಟೋಬರ್ ಅಂತ್ಯದೊಳಗೆ ಇಲ್ಲವೇ ನವೆಂಬರ್ ಮೊದಲ ವಾರದಲ್ಲಿ ಹೊಸ ಅಧ್ಯಕ್ಷರು ನೇಮಕಗೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
ಸಚಿವಾಲಯ ವ್ಯಾಪ್ತಿಗೆ ಬರುವ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಒಳಗೊಂಡಂತೆ ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ಮತ್ತು ಕರ್ನಾಟಕ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಸಂಗೀತ ನೃತ್ಯ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ, ಬಯಲಾಟ, ಯಕ್ಷಗಾನ ಅಕಾಡೆಮಿ, ತುಳು, ಕೊಡವ, ಕೊಂಕಣಿ, ಬ್ಯಾರಿ ಸಾಹಿತ್ಯ ಅಕಾಡೆಮಿಗಳು ಸೇರಿ 14 ಅಕಾಡೆಮಿಗಳ ಅಧ್ಯಕ್ಷರನ್ನು ರಾಜ್ಯ ಸರ್ಕಾರ 2024 ಮಾರ್ಚ್ 16ರಂದು ನೇಮಕ ಮಾಡಿ ಆದೇಶಿಸಿತ್ತು .
ಬೈಲಾ ಪ್ರಕಾರವಾಗಿ ಅಕಾಡೆಮಿಗಳ ಅಧ್ಯಕ್ಷರ ಅಧಿಕಾರಾವಧಿ 3 ವರ್ಷಗಳಾಗಿವೆ. ಆದರೆ, ಹಾಲಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಅಕ್ಟೋಬರ್ ಅಂತ್ಯಕ್ಕೆ 2 ವರ್ಷ 8 ತಿಂಗಳು ಮಾತ್ರ ಪೂರ್ಣಗೊಳ್ಳಲಿದೆ. ಅಂದರೆ ಇನ್ನೂ ನಾಲ್ಕು ತಿಂಗಳು ಬಾಕಿ ಇರುವಂತೆಯೇ ಪದತ್ಯಾಗಕ್ಕೆ ಮೌಖಿಕವಾಗಿ ಸೂಚನೆ ನೀಡಲಾಗಿದೆ. ಈ ಪೈಕಿ ಕೆಲ ಅಕಾಡೆಮಿಗಳ ಅಧ್ಯಕ್ಷರು, ನಾಡಹಬ್ಬ ದಸರಾ ಮುಕ್ತಾಯದ ನಂತರ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಇನ್ನು ಕೆಲ ಅಕಾಡೆಮಿಗಳ ಅಧ್ಯಕ್ಷರು ಅದಕ್ಕೂ ಮುನ್ನವೇ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿದೆ.
ವಾರದ ಹಿಂದಷ್ಟೇ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಎಲ್ಲ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಸಭೆ ಕರೆದಿದ್ದರು. ಆದರೆ, ಸಭೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. ಕೆಲ ಪದಾಧಿಕಾರಿಗಳ ಪ್ರಕಾರ, ಸಭೆಗೆ ನಿಗದಿತ ಯಾವುದೇ ಅಜೆಂಡಾ ಇರಲಿಲ್ಲ. ಔಪಚಾರಿಕವಾಗಿ ಸಭೆ ಕರೆಯಲಾಗಿತ್ತು. ಬಹುಶಃ ಎಲ್ಲರಿಗೂ ಧನ್ಯವಾದ ಹೇಳಿ, ಮೌಖಿಕ ಸೂಚನೆ ನೀಡುವ ಉದ್ದೇಶವಿತ್ತೇನೋ? ಆದರೆ, ಸಭೆ ಮುಂದೂಡಿದ್ದರಿಂದ ಸಭೆ ಕರೆದದ್ದು ಏಕೆ, ಮುಂದೂಡಿದ್ದು ಏಕೆ ಎನ್ನುವುದು ಗೊತ್ತಾಗಲಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಅ.23ರಂದು ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಅ.27ರಂದು ಫಲಿತಾಂಶ ಪ್ರಕಟವಾಗಲಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಈ ಅವಧಿಯಲ್ಲಿ ಅಕಾಡೆಮಿ, ಪ್ರಾಧಿಕಾರಗಳಿಗೆ ಹೊಸಬರ ನೇಮಕಾತಿಗೆ ನೀತಿ ಸಂಹಿತೆ ಅಡ್ಡಿಯಾಗಲಿದೆ. ಜತೆಗೆ ಮೈಸೂರು ದಸರಾ ಹಬ್ಬದಲ್ಲಿ ಪುಸ್ತಕ ಪ್ರದರ್ಶನ, ಜನಪದ ಕಲಾ ಮೇಳ ಸೇರಿ ಕಾರ್ಯಕ್ರಮಗಳನ್ನು ವಿವಿಧ ಅಕಾಡೆಮಿಗಳಿಂದ ಆಯೋಜಿಸಲಾಗಿರುತ್ತದೆ. ಈ ವೇಳೆ ಅಕಾಡೆಮಿಗಳಲ್ಲಿ ಬದಲಾವಣೆ ತಂದರೆ ಕಾರ್ಯಕ್ರಮಕ್ಕೆ ಅಡ್ಡಿಯಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಅಕ್ಟೋಬರ್ ಅಂತ್ಯದೊಳಗೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳಿಂದ ರಾಜೀನಾಮೆ ಪಡೆದು ನವೆಂಬರ್‌ನಲ್ಲಿ ಹೊಸಬರ ನೇಮಿಸುವ ಇರಾದೆ ಸರ್ಕಾರದ್ದು ಎಂದು ಮೂಲಗಳು ಮಾಹಿತಿ ನೀಡಿವೆ.
ಆದೇಶ ಬಂದಿಲ್ಲ
ಕಳೆದ ವಾರ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಸಭೆ ಕರೆದಿದ್ದು ನಿಜ. ಆದರೆ, ಸಭೆ ನಡೆಯಲಿಲ್ಲ, ಅದನ್ನು ಮುಂದೂಡಿರುವುದಾಗಿ ತಿಳಿಸಿದರು. ಯಾವ ವಿಚಾರಕ್ಕೆ ಸಭೆ ಕರೆದಿದ್ದರು ಎಂಬುದು ನನಗೆ ಗೊತ್ತಿಲ್ಲ. ಸರ್ಕಾರದಿಂದ ನಮಗೆ ಈವರೆಗೂ ರಾಜೀನಾಮೆ ನೀಡುವಂತೆ ಯಾವುದೇ ಆದೇಶ, ಸೂಚನೆ ಬಂದಿಲ್ಲ.
- ಕೆ.ವಿ.ನಾಗರಾಜಮೂರ್ತಿ, ಅಧ್ಯಕ್ಷರು, ಕರ್ನಾಟಕ ನಾಟಕ ಅಕಾಡೆಮಿ.
ಯಾರಿಗೆ ಸೂಚನೆ?
- ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಪುಸ್ತಕ ಪ್ರಾಧಿಕಾರ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ
ಕರ್ನಾಟಕ ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಸಂಗೀತ ನೃತ್ಯ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ, ಬಯಲಾಟ, ಯಕ್ಷಗಾನ ಅಕಾಡೆಮಿ, ತುಳು, ಕೊಡವ, ಕೊಂಕಣಿ, ಬ್ಯಾರಿ ಸಾಹಿತ್ಯ ಅಕಾಡೆಮಿಗಳು ಸೇರಿ 14 ಅಕಾಡೆಮಿ