ಮಂಡ್ಯ : ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ 2800 ರೈತರು ಆತ್ಮ*ತ್ಯೆ ಮಾಡಿಕೊಂಡಿದ್ದಾರೆ. ಅದರ ಬಗ್ಗೆ ಯಾರೂ ಗಮನ ಹರಿಸುತ್ತಿಲ್ಲ. ರಾಜ್ಯ ಸರ್ಕಾರ ಗ್ಯಾರಂಟಿ ಕೊಟ್ಟು ರೈತರ ಪರಿಸ್ಥಿತಿಯನ್ನು ಎಲ್ಲಿಗೆ ತಂದಿಟ್ಟಿದೆ ಎಂದು ಕೇಂದ್ರ ಉಕ್ಕು ಮತ್ತು ಬೃಹತ್ ಕೈಗಾರಿಕೆ ಸಚಿವ ಎಚ್.ಡಿ.ಕುಮಾರಸ್ವಾಮಿ ಕಿಡಿಕಾರಿದರು.
ಸಹಕಾರಿ ಬ್ಯಾಂಕ್‌ಗಳಲ್ಲಿ 32 ಲಕ್ಷ ಕುಟುಂಬಕ್ಕೆ 22 ಕೋಟಿ ಸಾಲ ಕೊಡುತ್ತೇವೆ ಎಂದಿದ್ದ ಸರ್ಕಾರ ಈವರೆಗೂ ಕೊಟ್ಟಿಲ್ಲ, ಹೊಸದಾಗಿ ಸಾಲ ಕೊಟ್ಟಿಲ್ಲ. ಹೀಗಾದರೇ ರೈತರ ಪರಿಸ್ಥಿತಿ ಏನಾಗಬೇಕು ನನ್ನ ಚಿಂತನೆಯಾಗಿದೆ ಎಂದು ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.
ರಾಜ್ಯ ಸರ್ಕಾರ ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತಿದೆಯೋ ಇಲ್ಲವೋ ಎಂಬುದು ಜನರಿಗೆ ಗೊತ್ತಿದೆ. ಗೃಹಲಕ್ಷ್ಮೀ ಹಣವನ್ನು ಮಹಿಳೆಯರಿಗೆ ಕೊಡುತ್ತಿದ್ದಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಆ ಹಣವನ್ನು ಒಟ್ಟಿಗೆ ಚುನಾವಣೆ ಬಂದಾಗ ಕೊಡಬಹುದು ಅಂತ ಕಾಣುತ್ತೆ. ಒಟ್ಟಿಗೆ ಕೊಟ್ಟಾಗ ಮಾತ್ರ ಜನ ಈ ಸರ್ಕಾರವನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆಂತ ಭಾವಿಸಿರಬಹುದು ಎಂದು ಜರಿದರು.
ಅಭಿವೃದ್ಧಿ ವಿಚಾರದ ಬಗ್ಗೆ ಗೃಹ ಸಚಿವ ಪರಮೇಶ್ವರ್ ಲಘುವಾಗಿ ಮಾತನಾಡಿರುವ ಬಗ್ಗೆ ಪ್ರತಿಕ್ರಿಯಿಸಿ, ಈ ಸರ್ಕಾರಕ್ಕೆ ಅಭಿವೃದ್ಧಿ ಎಂದರೆ ಏನೂಂತಾನೇ ಗೊತ್ತಿಲ್ಲ. ಲೂಟಿ ಮಾಡುವುದೇ ಅಭಿವೃದ್ಧಿ ಎಂಬುದಾಗಿ ಸರ್ಕಾರ ತಿಳಿದುಕೊಂಡಿದೆ. ಇವರಿಗೆ ನಾಡಿನ ಜನತೆಯ ತೆರಿಗೆ ಹಣ ಮಾತ್ರ ಗೊತ್ತು. ದ್ವೇಷ ಭಾಷಣ, ವಿಧೇಯಕ ಮಂಡನೆ ವಿಚಾರವನ್ನು ರಾಜ್ಯ ಸರ್ಕಾರ ಕೈಬಿಟ್ಟು ವೋಟ್ ಚೋರಿ ಪ್ರತಿಭಟನೆ ವೇಳೆ ಪ್ರಧಾನ ಮಂತ್ರಿಗಳ ಸಾವಿನ ಬಗ್ಗೆ ಕಾಂಗ್ರೆಸ್ ಕಾರ್ಯಕರ್ತರು ಕೂಗಿರುವ ಘೋಷಣೆ ಬಗ್ಗೆ ಮೊದಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಮಂತ್ರಿ ಸ್ಥಾನ ನೀಡಿ ನನಗೆ ಜವಾಬ್ದಾರಿ ಕೊಟ್ಟಿದ್ದಾರೆ. ನನ್ನ ಮೇಲೆ ನಂಬಿಕೆ ಇಟ್ಟ ವರ್ಗವೊಂದಾದರೆ ಟೀಕೆ ಮಾಡುವ ವರ್ಗವೂ ಇದೆ. ಆ ಟೀಕೆಗಳಿಗೆ ಸೊಪ್ಪು ಹಾಕದೇ ನಾಡಿನ ಜನತೆಯ ನೀರಿಕ್ಷೆಗೆ ತಕ್ಕಂತೆ ಕೆಲಸ ಮಾಡುತ್ತೇನೆ. ರಾಜ್ಯಕ್ಕೆ ಆಗಬೇಕಾದ ಕೆಲಸಗಳಿಗೆ ನಾನು ತಕ್ಕ ನ್ಯಾಯ ಒದಗಿಸುತ್ತೇನೆ ಎಂದು ಭರವಸೆ ನೀಡಿದರು.
ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಮಾಜಿ ಶಾಸಕ ಕೆ.ಸುರೇಶ್‌ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ಜೆಡಿಎಸ್ ಮುಖಂಡ ಬಿ.ಆರ್.ರಾಮಚಂದ್ರ, ಮುದಗಂದೂರು ಗ್ರಾಪಂ ಮಾಜಿ ಅಧ್ಯಕ್ಷ ಶಂಕರೇಗೌಡ ಇತರರಿದ್ದರು.