ಬೆಂಗಳೂರು : ನಗರಕ್ಕೆ 2ನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣಕ್ಕೆ ನಿಗದಿ ಮಾಡಲಾಗಿರುವ ಸ್ಥಳಗಳ ಪರಿಶೀಲನೆಗಾಗಿ ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರದ (ಎಎಐ) ಬಹುಶಿಸ್ತೀಯ ತಂಡ ಏ.7ರಿಂದ 9ರೊಳಗೆ ರಾಜ್ಯಕ್ಕೆ ಆಗಮಿಸಲಿದೆ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ.ಪಾಟೀಲ್ ತಿಳಿಸಿದರು.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿಗೆ 2ನೇ ಅಂತಾರಾಷ್ಟ್ರೀಯ ವಿಮಾನನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕನಕಪುರ ರಸ್ತೆಯಲ್ಲಿ ಎರಡು ಮತ್ತು ನೆಲಮಂಗಲ-ಕುಣಿಗಲ್ ರಸ್ತೆಯಲ್ಲಿ ಒಂದು ಜಾಗ ಗುರುತಿಸಲಾಗಿದೆ. ಅವುಗಳ ಪೂರ್ವ ಕಾರ್ಯ ಸಾಧ್ಯತಾ ಅಧ್ಯಯನಕ್ಕೆ ಎಎಐ ಬಹುಶಿಸ್ತೀಯ ತಂಡವು ಏ.7ರಿಂದ 9ರೊಳಗೆ ರಾಜ್ಯಕ್ಕಾಗಮಿಸಲಿದೆ. ಅದಕ್ಕೆ ಸಂಬಂಧಿಸಿದಂತೆ ಈಗಾಗಲೇ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮವು ಎಎಐಗೆ ₹1.21 ಕೋಟಿ ಶುಲ್ಕ ಪಾವತಿಸಿದೆ ಎಂದು ವಿವರಿಸಿದರು.
ಉದ್ದೇಶಿತ ವಿಮಾನನಿಲ್ದಾಣ ನಿರ್ಮಾಣಕ್ಕೆ ಅಂತಿಮಪಡಿಸಿರುವ ಸ್ಥಳಗಳನ್ನು ಪರಿಶೀಲಿಸುವಂತೆ ಭಾರತೀಯ ವಿಮಾನನಿಲ್ದಾಣ ಪ್ರಾಧಿಕಾರಕ್ಕೆ ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯಿಂದ ಮಾ.5ರಂದು ಪತ್ರ ಬರೆಯಲಾಗಿತ್ತು. ಅದರಂತೆ ಎಎಐನ ತಂಡವು ರಾಜ್ಯಕ್ಕೆ ಬರುತ್ತಿದೆ. ಪರಿಶೀಲನಾ ತಂಡದ ಸೂಚನೆಯಂತೆ ಮೂರು ಸ್ಥಳಗಳ ಕಂದಾಯ ನಕ್ಷೆ, 10 ವರ್ಷಗಳ ಹವಾಮಾನ ವರದಿ, ಜಾಗಗಳ ಜಾಮಿತೀಯ ಲಕ್ಷಣಗಳನ್ನು ವಿವರಿಸುವ ಚಿತ್ರ, ಭಾರತೀಯ ಸರ್ವೇ ಇಲಾಖೆ ನಕ್ಷೆ, ಉದ್ದೇಶಿತ ವಿಮಾನ ನಿಲ್ದಾಣದಲ್ಲಿನ ಕಾರ್ಯಾಚರಣೆ ಸ್ವರೂಪದ ವರದಿ ಸಿದ್ಧಪಡಿಸಿಕೊಳ್ಳಲಾಗಿದೆ ಎಂದರು.
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಕರ ಒತ್ತಡ ಹೆಚ್ಚಿದೆ. ಅಲ್ಲದೆ, 2033ಕ್ಕೆ 150 ಕಿ.ಮೀ. ವ್ಯಾಪ್ತಿಯಲ್ಲಿ ಮತ್ತೊಂದು ವಿಮಾನ ನಿಲ್ದಾಣ ಹೊಂದುವಂತಿಲ್ಲ ಎನ್ನುವ ಷರತ್ತು ಕೊನೆಗೊಳ್ಳಲಿದೆ. ಇವೆಲ್ಲವನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಲಾಗುತ್ತಿದ್ದು, 2033ರ ವೇಳೆಗೆ ನೂತನ ವಿಮಾನ ನಿಲ್ದಾಣ ಬಳಕೆಗೆ ಸಿದ್ಧಗೊಳ್ಳಲಿದೆ ಎಂದು ಹೇಳಿದರು.