ಮೇಲ್ಮನೆ 7 ಸ್ಥಾನಕ್ಕೆ ಕಾಂಗ್ರೆಸ್‌ನಲ್ಲಿ 100 ಅಲ್ಲ, 300 ಆಕಾಂಕ್ಷಿ!

KannadaprabhaNewsNetwork | Updated : May 30 2024, 04:39 AM IST

ಸಾರಾಂಶ

ವಿಧಾನಪರಿಷತ್‌ ಚುನಾವಣೆ ಟಿಕೆಟ್‌ಗೆ ಕಾಂಗ್ರೆಸ್‌ ಪಕ್ಷದಲ್ಲಿ 300ಕ್ಕೂ ಹೆಚ್ಚಿನ ಆಕಾಂಕ್ಷಿಗಳಿದ್ದು, ಟಿಕೆಟ್‌ ಹಂಚಿಕೆ ವಿಚಾರವಾಗಿ ಹೈಕಮಾಂಡ್‌ ನಾಯಕರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. 

 ಬೆಂಗಳೂರು/ನವದೆಹಲಿ :  ವಿಧಾನಪರಿಷತ್‌ ಚುನಾವಣೆ ಟಿಕೆಟ್‌ಗೆ ಕಾಂಗ್ರೆಸ್‌ ಪಕ್ಷದಲ್ಲಿ 300ಕ್ಕೂ ಹೆಚ್ಚಿನ ಆಕಾಂಕ್ಷಿಗಳಿದ್ದು, ಟಿಕೆಟ್‌ ಹಂಚಿಕೆ ವಿಚಾರವಾಗಿ ಹೈಕಮಾಂಡ್‌ ನಾಯಕರು ತೀರ್ಮಾನ ತೆಗೆದುಕೊಳ್ಳಲಿದ್ದಾರೆ. ಈಗಾಗಲೇ ಪಕ್ಷಕ್ಕೆ ದುಡಿದ ಅರ್ಹರ ಪಟ್ಟಿಯನ್ನು ಹೈಕಮಾಂಡ್‌ಗೆ ಸಲ್ಲಿಸಿದ್ದು, ಒಂದು ಸುತ್ತಿನ ಸಭೆ ಆಗಿದೆ. ಈ ಬಾರಿ ಎಲ್ಲ ವರ್ಗದವರಿಗೂ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಸದಾಶಿವನಗರದ ತಮ್ಮ ನಿವಾಸದ ಬಳಿ ಹಾಗೂ ದೆಹಲಿಯಲ್ಲಿ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸುರ್ಜೇವಾಲಾ ಅವರನ್ನು ಭೇಟಿಯಾದ ನಂತರ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್‌ ಚುನಾವಣೆ ಟಿಕೆಟ್ ಆಕಾಂಕ್ಷಿಗಳ ಸಂಖ್ಯೆ ನಿರೀಕ್ಷೆಗೂ ಮೀರಿ ಹೆಚ್ಚಾಗಿದೆ. 300ಕ್ಕೂ ಹೆಚ್ಚಿನ ಜನ ಆಕಾಂಕ್ಷಿಗಳಿದ್ದಾರೆ. ಟಿಕೆಟ್‌ ನೀಡುವ ಮಾನದಂಡ ಏನಾಗಿರಬೇಕು? ಯಾರಿಗೆ ಟಿಕೆಟ್‌ ನೀಡಬೇಕು ಎಂಬ ಬಗ್ಗೆ ಹೈಕಮಾಂಡ್‌ ನಾಯಕರು ನಿರ್ಧರಿಸುತ್ತಾರೆ. ಎಲ್ಲ ವರ್ಗದಿಂದಲೂ ಟಿಕೆಟ್‌ಗಾಗಿ ಬೇಡಿಕೆಯಿದೆ. ಆದರೆ, ಈ ಬಾರಿ ಎಲ್ಲ ವರ್ಗದವರಿಗೂ ಅವಕಾಶ ಕಲ್ಪಿಸಲು ಸಾಧ್ಯವಿಲ್ಲ, ಮುಂದಿನ ಬಾರಿ ಅವಕಾಶ ಮಾಡಿಕೊಡುತ್ತೇವೆ ಎಂದರು. ಟಿಕೆಟ್‌ಗೆ ಕಾಂಗ್ರೆಸ್‌ನಲ್ಲಿ 100 ಆಕಾಂಕ್ಷಿಗಳಿದ್ದಾರೆ ಎಂದು ವರದಿಯಾಗಿತ್ತು. ಆದರೆ ಆಕಾಂಕ್ಷಿಗಳ ಸಂಖ್ಯೆ 300 ಎಂದು ಡಿಕೆಶಿ ಹೇಳಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಟಿಕೆಟ್ ಆಕಾಂಕ್ಷಿಗಳೆಲ್ಲರೂ ಬ್ಲಾಕ್‌, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಪಕ್ಷಕ್ಕೆ ದುಡಿದಿದ್ದಾರೆ. ಕರಾವಳಿ ಕರ್ನಾಟಕ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೇ ಮೈಸೂರು ಭಾಗ ಸೇರಿ ಎಲ್ಲರಿಗೂ ಅವಕಾಶ ನೀಡಬೇಕು ಎಂಬ ಬೇಡಿಕೆಯಿಂದೆ. ಕೆಲ ಸ್ಥಾನಗಳಲ್ಲಿ ಹಾಲಿ ಸದಸ್ಯರಿದ್ದಾರೆ. ಹೀಗಾಗಿ ಈ ಬಾರಿ ಟಿಕೆಟ್‌ ಹಂಚಿಕೆಯಲ್ಲಿ ಕಷ್ಟಕರ ಪರಿಸ್ಥಿತಿ ಎದುರಾಗುವಂತಾಗಿದೆ. ಹೈಕಮಾಂಡ್‌ ನಾಯಕರು ಯಾವ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂಬುದನ್ನು ನೋಡಬೇಕು ಎಂದು ಹೇಳಿದರು.

ಎಲ್ಲರ ಅಭಿಪ್ರಾಯ ಸಂಗ್ರಹಿಸಿ ನಿರ್ಧಾರವಿಧಾನಪರಿಷತ್‌ ಟಿಕೆಟ್‌ ಹಂಚಿಕೆ ವಿಚಾರದಲ್ಲಿ ಮುಖ್ಯಮಂತ್ರಿಗಳು ಮತ್ತು ಉಪಮುಖ್ಯಮಂತ್ರಿಗಳೇ ಎಲ್ಲ ತೀರ್ಮಾನ ತೆಗೆದುಕೊಳ್ಳಬಾರದು ಎಂದು ಡಾ.ಪರಮೇಶ್ವರ್‌ ಹೇಳಿಕೆಗೆ ಪ್ರತಿಕ್ರಿಯಿಸಿ, ಖಂಡಿತ, ಪರಮೇಶ್ವರ್‌ ಅಭಿಪ್ರಾಯವನ್ನೂ ತೆಗೆದುಕೊಳ್ಳಲಾಗುವುದು. ಯಾವುದನ್ನೂ ನಾವೇ ತೀರ್ಮಾನಿಸುವುದಿಲ್ಲ. ಎಲ್ಲರ ಅಭಿಪ್ರಾಯ ಪಡೆದೇ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಹಲವು ನಾಯಕರು ಟಿಕೆಟ್‌ ಕೇಳುತ್ತಿದ್ದಾರೆ. ಪ್ರಾಥಮಿಕವಾಗಿ ಒಂದಷ್ಟು ಹೆಸರನ್ನು ನಾವು ಸೂಚಿಸಿದ್ದೇವೆ. ಜೊತೆಗೆ ಸಚಿವರು, ಎಐಸಿಸಿ ಕಾರ್ಯದರ್ಶಿಗಳೂ ತಮ್ಮ ಆಯ್ಕೆಗಳನ್ನು ಶಿಫಾರಸು ಮಾಡಿದ್ದಾರೆ. ವರಿಷ್ಠರ ಜತೆಗೆ ಒಂದು ಸುತ್ತಿನ ಸಭೆ ಆಗಿದೆ. ಎಐಸಿಸಿ ಅಧ್ಯಕ್ಷರು, ಬೇರೆ ನಾಯಕರ ಜತೆ ಮಾತುಕತೆ ನಡೆಸಬೇಕಿದೆ. ಪಕ್ಷ ಏನು ಹೇಳುತ್ತದೆ ಅದರಂತೆ ನಾವು ಕೇಳಬೇಕು. ಎಐಸಿಸಿ ಕಾರ್ಯದರ್ಶಿಗಳ ಜತೆಗೂ ಪಟ್ಟಿ ತೆಗೆದುಕೊಳ್ಳಲಿದ್ದಾರೆ. ಯಾರ್‍ಯಾರು ಪಕ್ಷದ ಪರ ಕೆಲಸ ಮಾಡಿದ್ದಾರೆ, ತ್ಯಾಗ ಮಾಡಿದ್ದಾರೆ. ಚುನಾವಣೆಯಲ್ಲಿ ಪಕ್ಷದ ಪರ ಅವರ ಸಾಧನೆ ಏನು? ಅವರ ಹಿನ್ನೆಲೆ ಏನು? ಎಂಬುದನ್ನು ನೋಡಿಕೊಂಡು ಹೈಕಮಾಂಡ್‌ಗೆ ಪಟ್ಟಿ ನೀಡಲಾಗುತ್ತದೆ. ನಂತರ ಹೈಕಮಾಂಡ್‌ ಯುವಕರು, ಹಿರಿಯರು ಸೇರಿದ ಸಮತೋಲನದ ಪಟ್ಟಿಯನ್ನು ಹೈಕಮಾಂಡ್‌ ಅಂತಿಮಗೊಳಿಸಲಿದೆ ಕೈಗೊಳ್ಳಲಿದ್ದಾರೆ ಎಂದರು.

ಇದೇ ವೇಳೆ ಕುಟುಂಬದವರಿಗೆ ಟಿಕೆಟ್‌ ನೀಡಬಾರದು ಎಂಬ ಬೇಡಿಕೆ ಕಾರ್ಯಕರ್ತರಲ್ಲಿದೆಯಲ್ಲಾ ಎಂಬ ಪ್ರಶ್ನೆಗೆ, ಕುಟುಂಬ ಅಂತ ಯಾವುದೂ ಇಲ್ಲ. ಹಾಲಿ ಶಾಸಕರೊಬ್ಬರು ತಮ್ಮ ಸ್ಥಾನ ಬಿಟ್ಟುಕೊಟ್ಟ ಹಿನ್ನೆಲೆಯಲ್ಲಿ ಅವರಿಗೆ ಮಾತುಕೊಟ್ಟಿದ್ದೇವೆ ಎಂದರು. ಆದರೆ, ಯತೀಂದ್ರ ಸಿದ್ದರಾಮಯ್ಯ ಅವರಿಗೆ ಟಿಕೆಟ್‌ ಕೊಡುತ್ತೀರಾ ಎಂಬ ಪ್ರಶ್ನೆಗೆ ಉತ್ತರ ನೀಡಲು ನಿರಾಕರಿಸಿದರು.

Share this article