;Resize=(412,232))
ನವದೆಹಲಿ : ಎಸ್ಐಆರ್ ಪ್ರಕ್ರಿಯೆಯನ್ನು ಅಸಮರ್ಪಕವಾಗಿ ನಡೆಸಿದ ಆರೋಪ ಹೊತ್ತಿರುವ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಜಿರಳೆ ಜನತಾ ಪಕ್ಷ ಕರೆ ನೀಡಿದ್ದ ಪ್ರತಿಭಟನೆಯನ್ನು ಕಾವು ತಣ್ಣಗೆ ಮಾಡುವಲ್ಲಿ ಕೇಂದ್ರ ಸರ್ಕಾರ ಯಶ ಕಂಡಿದೆ.
ಜಿರಳೆ ಪಕ್ಷದ ನಾಯಕ ಅಭಿಜೀತ್ ದೀಪ್ಕೆ ಸೇರಿ ಹಲವು ವಿದ್ಯಾರ್ಥಿ ನಾಯಕರು, ಪ್ರತಿಪಕ್ಷಗಳಿಗೆ ಸೇರಿದ 4 ಮಾಜಿ ಮುಖ್ಯಮಂತ್ರಿಗಳು, ಹಲವು ಪ್ರತಿಪಕ್ಷಗಳ ರಾಜಕೀಯ ನಾಯಕರು ಸೇರಿದಂತೆ 7 ಸಾವಿರ ಜನರನ್ನು ದೆಹಲಿ ಪೊಲೀಸರು ವಶಕ್ಕೆ ತೆಗೆದುಕೊಂಡು, ಪ್ರತಿಭಟನಾ ಸ್ಥಳ ಜಂತರ್ ಮಂತರ್ ತಲುಪದಂತೆ ನೋಡಿಕೊಳ್ಳುವಲ್ಲಿ ಯಶ ಕಂಡಿದ್ದಾರೆ.
ಅನುಮತಿ ಇಲ್ಲದಿದ್ದರೂ ಶನಿವಾರ ಪ್ರತಿಭಟನೆಗೆ ಕರೆ ನೀಡಿದ್ದ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ನವದೆಹಲಿಯಲ್ಲಿ ಬಿಗಿಬಂದೋಬಸ್ತ್ ಕಲ್ಪಿಸಿದ್ದರು. ಇದರನ್ವಯ ಬೆಳ್ಳಂಬೆಳಗ್ಗೆ 6 ಗಂಟೆಗೇ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಯೋಚಿಸಿದ್ದ ಯೂಟ್ಯೂಬರ್ ಧ್ರುವ್ ರಾಠಿಯನ್ನು ಗುರುಗ್ರಾಮದ ಅವರ ಮನೆಗೆ ಹೋಗಿ ಪೊಲೀಸರು ವಶಕ್ಕೆ ಪಡೆದರು. ನಂತರ ಮಹಾರಾಷ್ಟ್ರದಿಂದ ದಿಲ್ಲಿಗೆ ವಿಮಾನದಲ್ಲಿ ಆಗಮಿಸಿದ ಜಿರಳೆ ಪಕ್ಷದ ನಾಯಕರಾದ ಅಭಿಜೀತ್ ದೀಪ್ಕೆ, ಸೌರವ ದಾಸ್ ಹಾಗೂ ಆಶುತೋಷ್ ರಾಂಕಾ ಅವರನ್ನು ವಿಮಾನದ ಒಳಗೇ ತೆರಳಿ ದೆಹಲಿ ಪೊಲೀಸರು ವಶಕ್ಕೆ ತೆಗೆದುಕೊಂಡರು.
ಇದಾದ ನಂತರ ಜಿರಳೆ ಪಕ್ಷದ ಹೋರಾಟ ಬೆಂಬಲಿಸಿ ಜಂತರ್ ಮಂತರ್‌ಗೆ ಆಗಮಿಸಲು ಯತ್ನಿಸಿದ 4 ಮಾಜಿ ಸಿಎಂಗಳಾದ ಮಮತಾ ಬ್ಯಾನರ್ಜಿ, ಅರವಿಂದ ಕೇಜ್ರಿವಾಲ್, ಪಿಣರಾಯಿ ವಿಜಯನ್ ಹಾಗೂ ಮಾಣಿಕ್ ಸರ್ಕಾರ್ ಅವರನ್ನು ವಶಕ್ಕೆ ಪಡೆದು ಸಂಜೆ ವೇಳೆ ಬಿಡುಗಡೆ ಮಾಡಿದರು.
ಈ ನಡುವೆ, ಪೊಲೀಸ್ ವಶದಲ್ಲಿದ್ದ ಅಭಿಜೀತ್ ದೀಪ್ಕೆ ಅವರು ಜಿರಳೆ ಪಕ್ಷದ ಮತ್ತೊಬ್ಬ ನಾಯಕ ಅಜಿಂಕ್ಯ ಶಿಂಧೆ ಅವರು ಜಂತರ್ ಮಂತರ್ ಹೋರಾಟ ಮುಂದುವರಿಸುತ್ತಾರೆ ಎಂದು ಘೋಷಿಸಿದರೂ ಶಿಂಧೆ ಜಂತರ್ ಮಂತರ್‌ಗೆ ಬರಲು ಸಾಧ್ಯವಾಗಲಿಲ್ಲ.
ಹೀಗೆ ಒಟ್ಟು ಜಂತರ್ ಮಂತರ್‌ನತ್ತ ಹೊರಟಿದ್ದ 7 ಸಾವಿರಕ್ಕೂ ಹೆಚ್ಚು ಮಂದಿಯನ್ನು ಮುನ್ನೆಚ್ಚರಿಕಾ ಕ್ರಮವಾಗಿ ವಶಕ್ಕೆ ಪಡೆಯಲಾಗಿದೆ ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ. ಅಲ್ಲಲ್ಲಿ ಅಹಿತಕರ ಘಟನೆ ಹಾಗೂ ಕಲ್ಲು ತೂರಾಟ ನಡೆದು 6 ಪೊಲೀಸರು ಗಾಯಗೊಂಡಿದ್ದಾರೆ.