ಜ್ಞಾನೇಶ್‌ ವಜಾ ಸೇರಿ ಮುರ್ಮುಗೆ ಇಂಡಿಯಾ ಕೂಟ 4 ಮನವಿ

Published : Oct 10, 2026, 09:54 AM IST
india alliance

ಸಾರಾಂಶ

ಮತಪಟ್ಟಿಯ ವಿಶೇಷ ಪರಿಷ್ಕರಣೆಯ ಮೂಲಕ ಮತಗಳವು ಮಾಡಲಾಗಿದೆ ಎಂದು ಆರೋಪಿಸಿ ಕೆಲ ದಿನಗಳಿಂದ ಬೀದಿಗಿಳಿದು ಪ್ರತಿಭಟಿಸುತ್ತಿದ್ದ ವಿಪಕ್ಷ ಇಂಡಿಯಾ ಕೂಟದ ಪ್ರಮುಖ ನಾಯಕರು ಶುಕ್ರವಾರ ರಾತ್ರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಆಗಿ ಆ ಬಗೆಗಿನ ಜ್ಞಾಪನಾ ಪತ್ರವನ್ನು ಸಲ್ಲಿಸಿದ್ದಾರೆ.

ನವದೆಹಲಿ: ಮತಪಟ್ಟಿಯ ವಿಶೇಷ ಪರಿಷ್ಕರಣೆಯ (ಎಸ್‌ಐಆರ್‌) ಮೂಲಕ ಮತಗಳವು ಮಾಡಲಾಗಿದೆ ಎಂದು ಆರೋಪಿಸಿ ಕೆಲ ದಿನಗಳಿಂದ ಬೀದಿಗಿಳಿದು ಪ್ರತಿಭಟಿಸುತ್ತಿದ್ದ ವಿಪಕ್ಷ ಇಂಡಿಯಾ ಕೂಟದ ಪ್ರಮುಖ ನಾಯಕರು ಶುಕ್ರವಾರ ರಾತ್ರಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ಭೇಟಿ ಆಗಿ ಆ ಬಗೆಗಿನ ಜ್ಞಾಪನಾ ಪತ್ರವನ್ನು ಸಲ್ಲಿಸಿದ್ದಾರೆ. ಸಿಇಸಿ ಜ್ಞಾನೇಶ್‌ ಕುಮಾರ್ ರಾಜೀನಾಮೆ, ಕಳೆದ 2 ವರ್ಷದಲ್ಲಿ ನಡೆದ ವಿಧಾನಸಭಾ ಚುನಾವಣೆ ರದ್ದುಗೊಳಿಸುವುದು, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ರದ್ದು ಮಾಡಿ ರದ್ದಾದ 13 ಕೋಟಿ ಮತದಾರರ ಹೆಸರು ಮರುಸೇರ್ಪಡೆ ಮತ್ತು ಇವಿಎಂ ಬದಲು ಮತಪತ್ರಗಳಿಗೆ ಮರಳುವುದು- ಇವು ಆ 4 ಪ್ರಮುಖ ಬೇಡಿಕೆಗಳಾಗಿವೆ,

ಆ ಬಳಿಕ ಮಾತನಾಡಿದ ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ‘ನಮ್ಮ ಮಾತನ್ನು ರಾಷ್ಟ್ರಪತಿಗಳು ತಿರಸ್ಕರಿಸದೆ ಆಲಿಸಿದರು. ಅವರು ಕೇಳಿದಾಗ ಮತಗಳವಿನ ಸಾಕ್ಷ್ಯಗಳನ್ನು ಒದಗಿಸುತ್ತೇವೆ’ ಎಂದರು.

ರಾಷ್ಟ್ರಪತಿಗಳನ್ನು ಭೇಟಿಯಾಗಲು 10 ಸದಸ್ಯರ ನಿಯೋಗಕ್ಕೆ ಶುಕ್ರವಾರ ಬೆಳಗ್ಗೆ ಅನುಮತಿ ದೊರಕಿದ ಹಿನ್ನೆಲೆಯಲ್ಲಿ ‘ಪ್ರಜಾಪ್ರಭುತ್ವ ಉಳಿಸಿ’ ಎಂಬ ಬ್ಯಾನರ್‌ ಹಿಡಿದು ಇಂಡಿಯಾ ಕೂಟದ ನಾಯಕರು ಪಾರ್ಲಿಮೆಂಟ್‌ ಹೌಸ್‌ನಿಂದ ಪ್ರತಿಭಟನಾ ಮೆರವಣಿಗೆ ಹೊರಟರು. ಆದರೆ ಪೊಲೀಸರು ಅವರಲ್ಲಿ ಕೆಲವರನ್ನು ವಿಜಯ್‌ ಚೌಕ್‌ ಬಳಿ ತಡೆದರು.

ಬಳಿಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್‌ ಗಾಂಧಿ, ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ, ಜಮ್ಮು ಕಾಶ್ಮೀರದ ಸಿಎಂ ಒಮರ್ ಅಬ್ದುಲ್ಲಾ, ಎನ್‌ಸಿಪಿ (ಎಸ್‌ಪಿ) ಸಂಸದೆ ಸುಪ್ರಿಯಾ ಸುಳೆ, ಆರ್‌ಜೆಡಿಯ ಮನೋಜ್ ಝಾ, ವಿಸಿಕೆ ಮುಖ್ಯಸ್ಥ ತೋಲ್ ತಿರುಮಾವಲವನ್, ಐಯುಎಂಎಲ್‌ನ ಇ.ಟಿ. ಮೊಹಮ್ಮದ್ ಬಶೀರ್, ಸಿಪಿಎಂ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಮತ್ತು ಸಿಪಿಐನ ಡಿ. ರಾಜಾ ಅವರನ್ನೊಳಗೊಂಡ 10 ಸದಸ್ಯರ ನಿಯೋಗ ರಾಷ್ಟ್ರಪತಿ ಭವನಕ್ಕೆ ತೆರಳಿತು.

ಇದಕ್ಕೂ ಮೊದಲು ವಿಪಕ್ಷಗಳ ಕೂಟ ಸಂವಿಧಾನ ಸದನದಲ್ಲಿ ತಮ್ಮ ಮುಂದಿನ ನಡೆಯ ಬಗ್ಗೆ ಚರ್ಚಿಸಲು ಸಭೆ ನಡೆಸಿದ್ದು, ಕರ್ನಾಟಕ ಸಿಎಂ ಡಿ.ಕೆ. ಶಿವಕುಮಾರ್‌ ಅವರು ಇದರಲ್ಲಿ ಭಾಗಿಯಾಗಿದ್ದರು.

ಕೇಳಿದಾಗ ಸಾಕ್ಷ್ಯ ಕೊಡುವೆ:

ಮುರ್ಮು ಅವರ ಭೇಟಿಯ ಬಳಿಕ ಪತ್ರಕರ್ತರನ್ನುದ್ದೇಶಿಸಿ ಮಾತನಾಡಿದ ರಾಹುಲ್‌, ‘ಭಾರತೀಯ ಪ್ರಜಾಪ್ರಭುತ್ವವನ್ನು ನಾಶಮಾಡಲು ಪ್ರಧಾನಿ ಮೋದಿ, ಗೃಹ ಸಚಿವ ಶಾ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ಸಂಚು ರೂಪಿಸಿದ್ದಾರೆ ಎಂದು ಸ್ಪಷ್ಟವಾಗಿ ಉಲ್ಲೇಖಿಸಲಾಗಿರುವ ಜ್ಞಾಪನಾ ಪತ್ರವನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿದೆವು. ಮತಗಳವಿನ ಬಗ್ಗೆ ಸಲ್ಲಿಸಿದ ಜ್ಞಾಪನಾ ಪತ್ರವನ್ನು ಸ್ವೀಕರಿಸಿದ ರಾಷ್ಟ್ರಪತಿಗಳು, ನಾವು ಹೇಳಿದ್ದನ್ನು ಯಾವುದೇ ರೀತಿಯಲ್ಲಿ ನಿರಾಕರಿಸಲಿಲ್ಲ. ಇದರಿಂದ ನಾನು ಆಶ್ಚರ್ಯಚಕಿತನಾದೆ’ ಎಂದು ಹೇಳಿದರು.

ರಾಷ್ಟ್ರಪತಿಗಳ ಪ್ರತಿಕ್ರಿಯೆಯನ್ನು ವಿವರಿಸುತ್ತಾ, ‘ನಮ್ಮ ಹೇಳಿಕೆಯನ್ನು ಒಪ್ಪಿಕೊಂಡ ಅವರು, ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದ ಸಾಕ್ಷ್ಯವನ್ನು ನೀಡುವಂತೆ ಸೂಚಿಸಿದರು. ಆಗ ನಾನು, ಒಂದಾದಮೇಲೊಂದರಂತೆ ರಾಜ್ಯಗಳಲ್ಲಿ ಮತಗಳವಾಗಿದ್ದು, ಅದರ ಸಾಕ್ಷ್ಯ ಇಡೀ ದೇಶಕ್ಕೆ ತಿಳಿದಿದೆ ಎಂದೆ’ ಎಂದ ರಾಹುಲ್‌, ‘ಸಾಕ್ಷ್ಯವನ್ನು ಸ್ವೀಕರಿಸಲು ರಾಷ್ಟ್ರಪತಿಯವರು ಸಿದ್ಧರಾದಾಗ, ನಾವು ಸಂತೋಷದಿಂದ ಅದನ್ನು ಅವರೆದುರು ಪ್ರಸ್ತುತಪಡಿಸುತ್ತೇವೆ’ ಎಂದರು.

‘ಸೋಮವಾರ ನಾವು ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳನ್ನು ಭೇಟಿಯಾಗಿ ಅವರಿಗೆ ಜ್ಞಾಪನಾ ಪತ್ರವನ್ನು ಸಲ್ಲಿಸುತ್ತೇವೆ’ ಎಂದು ರಾಹುಲ್‌ ತಿಳಿಸಿದರು.

ಮತಪತ್ರ ಬಳಕೆಗೆ ಮನವಿ-ಖರ್ಗೆ:

ಮುರ್ಮು ಅವರನ್ನು ಭೇಟಿಯಾದ ಬಳಿಕ ಮಾತನಾಡಿದ ಖರ್ಗೆ, ‘ಚುನಾವಣೆಗಳಲ್ಲಿನ್ನು ಮತಪತ್ರ ಪದ್ಧತಿಗೆ ಮರಳುವಂತೆ ನಾವು ಕೋರಿದ್ದೆವು’ ಎಂದು ಹೇಳಿದರು. ಮಮತಾ ಮಾತನಾಡಿ, ‘ನಾವು ಒಗ್ಗಟ್ಟಾಗಿದ್ದೇವೆ ಹಾಗೂ ಅತ್ಯಂತ ಬಲವಾಗಿದ್ದೇವೆ. ದೇಶದ ಶೇ.60ಕ್ಕೂ ಹೆಚ್ಚು ಜನರ ಪ್ರತಿನಿಧಿಗಳು ನಾವಾಗಿದ್ದೇವೆ’ ಎಂದು ತಿಳಿಸಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಪೆನ್‌ಡ್ರೈವ್‌ ತೋರಿಸಿ ರವಿ ಬಾಂಬ್‌ : ಸಿಎಂ, 10 ಸಚಿವರ ಸ್ಟಿಂಗ್‌ಗೆ ಕೋಲ್ಕತಾ, ದೆಹಲಿ ಟೀಂ
ಸಿಇಸಿ ಜ್ಞಾನೇಶ್‌ ತಲೆದಂಡಕ್ಕಾಗಿ ಇಂದು ಸಿಜೆಪಿ ಹೋರಾಟ-ಜಿರಳೆ ತಡೆಗೆ ದಿಲ್ಲಿ ಭದ್ರಕೋಟೆ