;Resize=(412,232))
ನವದೆಹಲಿ : ಅನುದಾನದ ವಿಚಾರದಲ್ಲಿ ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯಕ್ಕೆ ಶುಭ ಸುದ್ದಿ ಕೊಡಲಿದೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಜಿಎಸ್‌ಟಿ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಪ್ರತ್ಯೇಕವಾಗಿ ರಾಜ್ಯಕ್ಕೆ ಕೇಂದ್ರದಿಂದ ಬರಬೇಕಿರುವ ಅನುದಾನದ ಬಗ್ಗೆ ಚರ್ಚೆ ನಡೆಸಿದ್ದೇನೆ. ಅನುದಾನ ನೀಡುವ ವಿಚಾರದಲ್ಲಿ ಕರ್ನಾಟಕಕ್ಕೆ ಶುಭ ಸುದ್ದಿ ಸಿಗಲಿದೆ ಎಂದು ತಿಳಿಸಿದರು. ಆದರೆ ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದರು.
ಕೇಂದ್ರವು 2023-24ನೇ ಸಾಲಿನ ತನ್ನ ಬಜೆಟ್‌ನಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ₹5 ಸಾವಿರ ಕೋಟಿ ಘೋಷಣೆ ಮಾಡಿತ್ತು. ಈ ಅನುದಾನ ಬಿಡುಗಡೆ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ. ಇನ್ನು ಈ ವರ್ಷ ರಾಜ್ಯದಲ್ಲಿ ಬಹುತೇಕ ತಾಲೂಕುಗಳು ಬರ ಪೀಡಿತವಾಗಿದ್ದು, ₹46 ಸಾವಿರ ಕೋಟಿ ನಷ್ಟವಾಗಿದ್ದು, ₹10ರಿಂದ ₹12 ಸಾವಿರ ಕೋಟಿ ಪರಿಹಾರ ನೀಡುವಂತೆ ಕೇಂದ್ರಕ್ಕೆ ಬೇಡಿಕೆ ಇಟ್ಟಿದೆ. ಈ ಅನುದಾನಕ್ಕೆ ಕೇಂದ್ರ ಸಮ್ಮತಿಸಿರುವ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ಜಿಎಸ್‌ಟಿ ಸಂಗ್ರಹದಲ್ಲಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆದರೆ ರಾಜ್ಯಕ್ಕೆ ಕಡಿಮೆ ಅನುದಾನ ಬರುತ್ತಿದೆ ಎಂದು ಕರ್ನಾಟಕ ಅವಲತ್ತುಕೊಂಡಿದ್ದು, ಹೆಚ್ಚಿನ ಜಿಎಸ್‌ಟಿ ಪಾಲು ನೀಡಲು ಕೇಂದ್ರ ಒಪ್ಪಿರುವ ಸಾಧ್ಯತೆಯನ್ನು ಇದೆ ಎಂದು ಊಹಿಸಲಾಗಿದೆ.
ಇನ್ನು ಮುಖ್ಯಮಂತ್ರಿಗಳು, ಜಿಎಸ್‌ಟಿ ಸಭೆಯು ಫಲಪ್ರದವಾಗಿದೆ. ನಮ್ಮ ಹಲವು ವಿಷಯಗಳ ಬಗ್ಗೆ ಕೇಂದ್ರವು ಸಮ್ಮತಿ ಸೂಚಿಸಿದೆ. ಉದ್ಯಮಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವುದು, ಅವರ ಬಂಧನ ಬಂಧನ ಸೂಕ್ತವಲ್ಲ ಎಂದು ಸಭೆಯಲ್ಲಿ ನಾವು ತಿಳಿಸಿದ್ದು, ಇದಕ್ಕೆ ಒಂದು ರಾಜ್ಯ ಬಿಟ್ಟು ಉಳಿದೆಲ್ಲ ರಾಜ್ಯಗಳು ಸಮ್ಮತಿಸಿವೆ ಎಂದು ವಿವರಿಸಿದರು.