ಬೆಂಗಳೂರು : ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಕೆಲ ಸಚಿವರ ದಂಡಿನ ದೆಹಲಿ ದಂಡಯಾತ್ರೆಯ ಅಂತಿಮ ಪರಿಣಾಮ ವಿಧಾನಪರಿಷತ್ ಖಾಲಿ ಸ್ಥಾನಗಳ ಭರ್ತಿ ಶೀಘ್ರ, ಅಂದರೆ ಎಐಸಿಸಿ ಅಧಿವೇಶನ ಮುಗಿದ ಕೂಡಲೇ (ಬಹುತೇಕ ಏ.10ರ ನಂತರ), ನಡೆಯಲಿದ್ದು, ಉಳಿದ ಎಲ್ಲಾ ವಿಚಾರಗಳಲ್ಲೂ ಸದ್ಯಕ್ಕೆ ಯಥಾಸ್ಥಿತಿ ಮುಂದುವರಿಯಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಪರಿಷತ್‌ನ ನಾಲ್ಕು ಖಾಲಿ ಸ್ಥಾನಗಳ ಭರ್ತಿ ಬಗ್ಗೆ ಚರ್ಚಿಸಿದ್ದು, ಪಟ್ಟಿಯೊಂದನ್ನು ಸಹ ನೀಡಿದ್ದಾರೆ. ಈ ಪಟ್ಟಿ ಪಡೆದುಕೊಂಡಿರುವ ಹೈಕಮಾಂಡ್ ವರಿಷ್ಠರು ಈ ಬಗ್ಗೆ ಶೀಘ್ರ ತೀರ್ಮಾನ ತಿಳಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಮೂಲಗಳ ಪ್ರಕಾರ, ಎಐಸಿಸಿ ಅಧಿವೇಶನ (ಏ.8 ಹಾಗೂ 9ರಂದು ನಡೆಯಲಿದೆ) ನಂತರ ಅಂದರೆ ಬಹುತೇಕ ಏ.10ರ ವೇಳೆಗೆ ಈ ವಿಚಾರದ ಬಗ್ಗೆ ಹೈಕಮಾಂಡ್ ಚರ್ಚೆ ನಡೆಸಿ ತೀರ್ಮಾನ ಕೈಗೊಳ್ಳಲಿದೆ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಟ್ಟಿ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವ ಮೊದಲು ತಮ್ಮೊಂದಿಗೆ ಚರ್ಚಿಸುವಂತೆಯೂ ವರಿಷ್ಠರನ್ನು ಕೋರಿದ್ದಾರೆ ಎಂದು ಹೇಳಲಾಗುತ್ತಿದೆ.
ಕೆಪಿಸಿಸಿ ಅಧ್ಯಕ್ಷ ಸ್ಥಾನ-ನಿಲುವು ತಿಳಿಸಿಲ್ಲ : ಇನ್ನು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ಮುಖ್ಯಮಂತ್ರಿಯವರು ಹೈಕಮಾಂಡ್ ನಾಯಕರಿಗೆ ಸ್ಪಷ್ಟವಾಗಿ ತಿಳಿಸಿದ್ದು, ಬದಲಾವಣೆ ಮಾಡುವುದಾದರೆ ಸಚಿವರಾದ ಈಶ್ವರ್ ಖಂಡ್ರೆ ಅಥವಾ ಸತೀಶ್ ಜಾರಕಿಹೊಳಿ ಅವರನ್ನು ಪರಿಗಣಿಸುವಂತೆ ಸೂಚಿಸಿದ್ದಾರೆ.
ಕಾಂಗ್ರೆಸ್ ವರಿಷ್ಠರು ಸಿದ್ದರಾಮಯ್ಯ ಅವರ ಅಭಿಪ್ರಾಯಕ್ಕೆ ಕಿವಿಕೊಟ್ಟಿದ್ದಾರೆಯೇ ಹೊರತು ಈ ವಿಚಾರದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿಲ್ಲ. ಕೆಲ ಮೂಲಗಳ ಪ್ರಕಾರ, ಈ ವಿಚಾರದಲ್ಲಿ ಸದ್ಯಕ್ಕೆ ಯಥಾಸ್ಥಿತಿ ಕಾಯ್ದುಕೊಳ್ಳುವ ಮನಸ್ಥಿತಿಯಲ್ಲಿ ಹೈಕಮಾಂಡ್ ಇದೆ.
ಏನೇ ಆದರೂ ಎಐಸಿಸಿ ಅಧಿವೇಶನದ ನಂತರ ಕಾಂಗ್ರೆಸ್ ವರಿಷ್ಠರು ರಾಜ್ಯದ ವಿಚಾರದ ಬಗ್ಗೆ ಸಭೆ ನಡೆಸುವ ಸಾಧ್ಯತೆಯಿದ್ದು, ಆ ವೇಳೆಗೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರದಲ್ಲಿ ಹೈಕಮಾಂಡ್ ಚಿಂತನೆ ಏನು ಎಂಬುದು ಸ್ಪಷ್ಟವಾಗುವ ನಿರೀಕ್ಷೆಯಿದೆ.
ಇನ್ನು ಈ ಬಾರಿಯ ಸಿದ್ದರಾಮಯ್ಯ ಭೇಟಿ ವೇಳೆ ಸಚಿವ ಸಂಪುಟ ವಿಸ್ತರಣೆ ಚರ್ಚೆಯೇ ಆಗಿಲ್ಲ. ಹೀಗಾಗಿ ದೆಹಲಿ ದಂಡ ಯಾತ್ರೆ ಪರಿಣಾಮ ತಕ್ಷಣಕ್ಕೆ ಪರಿಷತ್ ಸದಸ್ಯ ಸ್ಥಾನಗಳ ಭರ್ತಿ ಏ.10 ನಂತರ ನಡೆಯುವ ಸಾಧ್ಯತೆಯಿದೆ.
ಸಚಿವ ರಾಜಣ್ಣ ಮೇಲೆ ಹೈ ಕಮಾಂಡ್ ಗರಂ
ಬೆಂಗಳೂರು: ತಮ್ಮ ವಿರುದ್ಧ ನಡೆದಿದೆ ಎನ್ನಲಾಗಿರುವ ಹನಿಟ್ರ್ಯಾಪ್ ಪ್ರಕರಣವನ್ನು ಪಕ್ಷದ ವೇದಿಕೆಯಲ್ಲಿ ಪ್ರಸ್ತಾಪಿಸದೆ ನೇರವಾಗಿ ಸದನದಲ್ಲಿ ಪ್ರಸ್ತಾಪಿಸಿದ ಸಚಿವ ಕೆ.ಎನ್.ರಾಜಣ್ಣ ಧೋರಣೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಅಸಮಾಧಾನ ವ್ಯಕ್ತಪಡಿಸಿದೆ ಎಂದು ಮೂಲಗಳು ತಿಳಿಸಿವೆ. ಇಂಥ ಗಂಭೀರ ವಿಚಾರ ಸದನದಲ್ಲಿ ಚರ್ಚೆ ಮಾಡುವ ಬದಲಾಗಿ ಕಾಂಗ್ರೆಸ್ ಪಕ್ಷದ ವೇದಿಕೆಯಲ್ಲಿ ಚರ್ಚಿಸಬಹುದಿತ್ತಲ್ಲವೇ? ಹೈಕಮಾಂಡ್ ಗಮನಕ್ಕಾದರೂ ಈ ವಿಚಾರ ತರಬಹುದಿತ್ತಲ್ಲವೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಳಿ ವರಿಷ್ಠರು ಪ್ರಶ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಖರ್ಗೆ ಭೇಟಿಯಾಗಿಸಿದ್ದು ಬೆಂಗಳೂರಿಗೆ
ನವದೆಹಲಿ: ಕರ್ನಾಟಕ ಭವನ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಿ ಕಳೆದ ಮೂರು ದಿನಗಳಿಂದ ದೆಹಲಿಯಲ್ಲೇ ಉಳಿದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ರಾಜ್ಯಕ್ಕೆ ವಾಪಸ್ ಬರುವ ಮುನ್ನ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಹಲವು ವಿಷಯಗಳ ಬಗ್ಗೆ ಸುಮಾರು ಅರ್ಧಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದ್ದಾರೆ.