ಬೆಂಗಳೂರು : ಹಿಂದಿನ ಬಿಜೆಪಿ ಸರ್ಕಾರದ ವಿರುದ್ಧ ಗುತ್ತಿಗೆದಾರರು ಮಾಡಿದ್ದ ಶೇ.40 ಪರ್ಸೆಂಟ್ ಲಂಚ ಆರೋಪ ಕುರಿತು ತನಿಖೆ ನಡೆಸಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ್ ನೇತೃತ್ವದ ವಿಚಾರಣಾ ಆಯೋಗ ಸಲ್ಲಿಸಿರುವ ವರದಿಯನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ವರದಿ ಸಲ್ಲಿಸಲು ನಿವೃತ್ತ ಐಎಎಸ್ ಅಧಿಕಾರಿ ಡಾ.ಸುಧೀರ್ ಕೃಷ್ಣ ಅಧ್ಯಕ್ಷತೆಯಲ್ಲಿ ರಾಜ್ಯ ಸರ್ಕಾರ ಸಮಿತಿ ರಚಿಸಿದೆ.
ನಿವೃತ್ತ ಮುಖ್ಯ ಎಂಜಿನಿಯರ್‌ಗಳಾದ ಶ್ರೀನಿವಾಸ್, ಕೆ.ಪಿ.ಶಿವಕುಮಾರ್, ರಾಷ್ಟ್ರೀಯ ಹೆದ್ದಾರಿ ದಕ್ಷಿಣ ವಲಯ ಲೆಕ್ಕಾಧಿಕಾರಿ (ಮುಖ್ಯ ಎಂಜಿನಿಯರ್) ಲೋಕೇಶ್ ವಿ. ಕುಕ್ಯಾನ, ಲೋಕೋಪಯೋಗಿ ಇಲಾಖೆಯ ಸರ್ಕಾರದ ಉಪ ಕಾರ್ಯದರ್ಶಿ (ಸಂಪರ್ಕ ಮತ್ತು ಕಟ್ಟಡ), ಅಧೀಕ್ಷಕ ಎಂಜಿನಿಯರ್ (ಸಂಪರ್ಕ ಮತ್ತು ಕಟ್ಟಡ, ದಕ್ಷಿಣ) ಈ ಐವರು ಸಮಿತಿಯ ಸದಸ್ಯರು. ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೇಂದ್ರದ ಮುಖ್ಯ ಎಂಜಿನಿಯರ್ ಅವರನ್ನು ಸಮಿತಿ ಸದಸ್ಯರ ಕಾರ್ಯದರ್ಶಿಗಳಾಗಿ ನೇಮಿಸಲಾಗಿದೆ.
ರಾಜ್ಯದಲ್ಲಿ 2019ರ ಜುಲೈ 26ರಿಂದ 2023ರ ಮಾರ್ಚ್ 31 ರವರೆಗೆ ಅಧಿಕಾರದಲ್ಲಿದ್ದ ಬಿಜೆಪಿ ನೇತೃತ್ವದ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಆರೋಪ ಮಾಡಿದ್ದ ಶೇ.40 ಲಂಚ ಆರೋಪ ಕುರಿತು ತನಿಖೆಗೆ ನಾಗಮೋಹನದಾಸ್ ನೇತೃತ್ವದ ವಿಚಾರಣಾ ಆಯೋಗವನ್ನು ಸರ್ಕಾರ ರಚಿಸಿತ್ತು. ಅವಧಿಯ ಸುಮಾರು 3 ಲಕ್ಷ ಕಾಮಗಾರಿಗಳ ಪೈಕಿ 1,729 ಕಾಮಗಾರಿಗಳನ್ನು ಮಾದರಿಯಾಗಿ ತೆಗೆದುಕೊಂಡು ಪರಿಶೀಲನೆ ನಡೆಸಿತ್ತು. ಕೆಲ ಕಾಮಗಾರಿಗಳಿಗೆ ಹೆಚ್ಚು ಹಣ ಪಾವತಿಸಿರುವುದು, ಇನ್ನು ಕೆಲವರಲ್ಲಿ ಟೆಂಡರ್ ಪ್ರಕ್ರಿಯೆಯಲ್ಲಿ ಲೋಪ, ಇನ್ನು ಕೆಲ ಕಾಮಗಾರಿಗಳೇ ಸಂಶಯಾಸ್ಪದವಾಗಿದೆ ಎಂದು ವರದಿ ನೀಡಿತ್ತು. ಇದೀಗ ಈ ಆಯೋಗದ ವರದಿಯನ್ನು ಕೂಲಂಕಶವಾಗಿ ಅಧ್ಯಯನ ಮಾಡಿ ವರದಿ ಸಲ್ಲಿಸಲು ಸರ್ಕಾರ ಇದೀಗ ಮತ್ತೊಂದು ಸಮಿತಿ ರಚಿಸಿದೆ.