ಸರ್ಕಾರಿ ಉದ್ಯಾನಗಳ ಶೇ.5ರಷ್ಟು ಜಾಗ ಇತರೆ ಉದ್ದೇಶಕ್ಕೆ, ಪರಿಶೀಲಿಸಿ: ತೇಜಸ್ವಿ ಸೂರ್ಯ

KannadaprabhaNewsNetwork |  
Published : Aug 23, 2026, 02:00 AM ISTUpdated : Aug 23, 2026, 05:18 AM IST
MP Tejasvi surya

ಸಾರಾಂಶ

ರಾಜ್ಯದ ಸಾರ್ವಜನಿಕ ಉದ್ಯಾನಗಳ ಜಾಗವನ್ನು ಇತರೆ ಉದ್ದೇಶಗಳಿಗೆ ಬಳಸುವ ಸರ್ಕಾರದ ತೀರ್ಮಾನ ಅತ್ಯಂತ ಕಳವಳಕಾರಿಯಾಗಿದೆ. ಇದನ್ನು ಮರು ಪರಿಶೀಲಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಸಂಸದ ತೇಜಸ್ವಿ ಸೂರ್ಯ ಶನಿವಾರ ಪತ್ರ ಬರೆದು ಆಗ್ರಹಿಸಿದ್ದಾರೆ.

 ಬೆಂಗಳೂರು : ರಾಜ್ಯದ ಸಾರ್ವಜನಿಕ ಉದ್ಯಾನಗಳ ಜಾಗವನ್ನು ಇತರೆ ಉದ್ದೇಶಗಳಿಗೆ ಬಳಸುವ ಸರ್ಕಾರದ ತೀರ್ಮಾನ ಅತ್ಯಂತ ಕಳವಳಕಾರಿಯಾಗಿದೆ. ಇದನ್ನು ಮರು ಪರಿಶೀಲಿಸುವಂತೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರಿಗೆ ಸಂಸದ ತೇಜಸ್ವಿ ಸೂರ್ಯ ಶನಿವಾರ ಪತ್ರ ಬರೆದು ಆಗ್ರಹಿಸಿದ್ದಾರೆ.

ರಾಜ್ಯದ ಸಾರ್ವಜನಿಕ ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಇತರ ಉದ್ದೇಶಗಳಿಗೆ ಬಳಸುವ ರಾಜ್ಯ ಸರ್ಕಾರದ ತೀರ್ಮಾನವು ಅತ್ಯಂತ ಕಳವಳಕಾರಿಯಾಗಿದೆ. ಇಂತಹ ನಿರ್ಧಾರ ಕೈಗೊಳ್ಳಲು ನಿಮ್ಮ ಆತ್ಮಸಾಕ್ಷಿಯಾದರೂ ಹೇಗೆ ಒಪ್ಪುತ್ತದೆ ಎಂಬುದನ್ನು ರಾಜ್ಯದ ಜನತೆಗೆ ತಿಳಿಸಿ ಎಂದು ಒತ್ತಾಯಿಸಿದ್ದಾರೆ.

ಬೆಂಗಳೂರು ಇಂದು ಗಾರ್ಡನ್ ಸಿಟಿ ಎಂಬ ಹೆಗ್ಗಳಿಕೆ ಹೊಂದಿರುವುದು ಕೇವಲ ಹೆಸರಿನಿಂದಲ್ಲ. ನಾಡಪ್ರಭು ಕೆಂಪೇಗೌಡರು ದೂರದೃಷ್ಟಿಯಿಂದ ಈ ನಗರವನ್ನು ರೂಪಿಸಿದ್ದರು. ಹಲವು ತಲೆಮಾರುಗಳ ಜನಪ್ರತಿನಿಧಿಗಳು, ಪರಿಸರ ಪ್ರೇಮಿಗಳು ಹಾಗೂ ನಾಗರಿಕರು ಮರ-ಗಿಡಗಳು ಮತ್ತು ಹಸಿರು ಪ್ರದೇಶಗಳನ್ನು ಉಳಿಸಿಕೊಂಡು ಬಂದಿದ್ದಾರೆ. ಅವರ ಪರಿಶ್ರಮದಿಂದ ರೂಪುಗೊಂಡ ಈ ಹಸಿರು ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಪಾರ್ಕ್‌ಗಳು ಖಾಸಗಿ ಆಸ್ತಿಯಲ್ಲ:

ಸಾರ್ವಜನಿಕ ಪಾರ್ಕ್‌ಗಳು ಯಾರೊಬ್ಬರ ಖಾಸಗಿ ಅಸ್ತಿಯಲ್ಲ. ಅವು ಕೇವಲ ಜಾಗಗಳಲ್ಲ. ಅವು ಜೀವವೈವಿಧ್ಯದ ಆಸರೆ ತಾಣಗಳು, ನಾಗರಿಕರ ಉಸಿರು, ಹಿರಿಯರ ಆರೋಗ್ಯ, ಮಕ್ಕಳ ನಗು ಹಾಗೂ ಸಾಮಾನ್ಯ ಜನರ ನೆಮ್ಮದಿಯ ತಾಣಗಳು. ಈ ಸಂದರ್ಭದಲ್ಲಿ ಸಾರ್ವಜನಿಕ ಉದ್ಯಾನವನಗಳ ಜಾಗವನ್ನು ಇತರ ಉದ್ದೇಶಗಳಿಗೆ ಬಳಸುವ ಯಾವುದೇ ಕ್ರಮವು ತೀವ್ರ ಕಳವಳಕಾರಿ. ಉದ್ಯಾನವನಗಳು ಕೇವಲ ಖಾಲಿ ಜಾಗವಲ್ಲ, ಅವು ಪ್ರತಿಯೊಂದು ಊರಿನ ಉಸಿರು, ಪರಿಸರ ಸಮತೋಲನ ಮತ್ತು ಸಾರ್ವಜನಿಕರ ಆರೋಗ್ಯದ ಅವಿಭಾಜ್ಯ ಅಂಗಗಳು ಎಂದು ತಿಳಿಸಿದ್ದಾರೆ.

ಇತರೆ ಹಸಿರು ಪ್ರದೇಶದ ಮೇಲೆ ಒತ್ತಡ: 

 ಈಗಾಗಲೇ ಅತಿಯಾದ ಕಾಂಕ್ರೀಟೀಕರಣ, ವಾಯುಮಾಲಿನ್ಯ, ನಗರ ಉಷ್ಣತೆ ಹಾಗೂ ಮಳೆನೀರು ನಿರ್ವಹಣೆಯ ಸಮಸ್ಯೆಗಳಿಂದ ಬೆಂಗಳೂರು ಸೇರಿದಂತೆ ರಾಜ್ಯದ ಇತರ ನಗರಗಳು ಸಂಕಷ್ಟ ಎದುರಿಸುತ್ತಿವೆ. ಇಂತಹ ಸಂದರ್ಭದಲ್ಲಿ ಉಳಿದಿರುವ ಹಸಿರು ಪ್ರದೇಶಗಳನ್ನೂ ಬೇರೆ ಉದ್ದೇಶಗಳಿಗೆ ಬಳಸುವುದು ಆತಂಕಕಾರಿ ನಿರ್ಧಾರವಾಗಲಿದೆ. ಇಂದು ಒಂದು ಉದ್ಯಾನವನದ ಜಾಗವನ್ನು ಬೇರೆ ಉದ್ದೇಶಕ್ಕೆ ಬಿಟ್ಟುಕೊಟ್ಟರೆ, ನಾಳೆ ಪ್ರತಿಯೊಂದು ಹಸಿರು ಪ್ರದೇಶದ ಮೇಲೂ ಇದೇ ರೀತಿಯ ಒತ್ತಡ ನಿರ್ಮಾಣವಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಪರ್ಯಾಯ ಸರ್ಕಾರಿ ಜಾಗ ಗುರುತಿಸಿ:

ಒಂದು ಬಾರಿ ಹಸಿರು ಪ್ರದೇಶ ಕಳೆದುಕೊಂಡರೆ ಅದನ್ನು ಮರಳಿ ಪಡೆಯುವುದು ಬಹುತೇಕ ಅಸಾಧ್ಯ. ಇಂತಹ ಸಂದರ್ಭದಲ್ಲಿ ಉಳಿದಿರುವ ಹಸಿರು ಪ್ರದೇಶಗಳನ್ನು ಬೇರೆ ಉದ್ದೇಶಗಳಿಗೆ ಬಲಿಕೊಡುವುದು ಅತ್ಯಂತ ಅವೈಜ್ಞಾನಿಕ ಮತ್ತು ದೂರದೃಷ್ಟಿಯಿಲ್ಲದ ನಿರ್ಧಾರವಾಗಲಿದೆ. ಬೆಂಗಳೂರಿಗೆ ಅಭಿವೃದ್ಧಿ ಅಗತ್ಯ. ಆದರೆ ಬೆಂಗಳೂರಿನ ಹಸಿರನ್ನು ನಾಶಮಾಡುವ ಅಭಿವೃದ್ಧಿ ನಮಗೆ ಬೇಡ. ಯಾವುದೇ ಯೋಜನೆಗೆ ಜಾಗದ ಅಗತ್ಯವಿದ್ದರೆ ಪರ್ಯಾಯ ಸರ್ಕಾರಿ ಜಾಗಗಳನ್ನು ಗುರುತಿಸಿ, ಪರಿಸರಕ್ಕೆ ಕನಿಷ್ಠ ಹಾನಿಯಾಗುವ ಮಾರ್ಗವನ್ನು ಸರ್ಕಾರ ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಆತ್ಮಸಾಕ್ಷಿ ರಹಿತ ನಿರ್ಧಾರ ಮರುಪರಿಶೀಲಿಸಿ:

ಕೆಂಪೇಗೌಡರು ಕಟ್ಟಿದ ನಮ್ಮ ಬೆಂಗಳೂರು, ತಲೆಮಾರುಗಳು ಉಳಿಸಿ, ಬೆಳೆಸಿದ ಬೆಂಗಳೂರು. ಮುಂದಿನ ಪೀಳಿಗೆಗೂ ಉಳಿಸುವುದು ನಮ್ಮೆಲ್ಲರ ಕರ್ತವ್ಯ. ನೂರಾರು ವರ್ಷಗಳಿಂದ ಕಾಯ್ದುಕೊಂಡು ಬಂದಿರುವ ಈ ಹಸಿರು ಪರಂಪರೆ, ಕೇವಲ ರಿಯಲ್ ಎಸ್ಟೇಟ್ ಕಾರಣಗಳಿಗಾಗಿ ಒತ್ತೆ ಇರಿಸುವ ಕ್ರಮವು ಆತ್ಮಸಾಕ್ಷಿ ರಹಿತ ನಿರ್ಧಾರವಾಗಿದೆ. ಇದಕ್ಕೆ ನಮ್ಮ ಸಂಪೂರ್ಣ ವಿರೋಧವಿದ್ದು, ಈ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಮೋದಿ ಗೆದ್ದಿದ್ದು ವಾಮ ಮಾರ್ಗದಿಂದ: ಖರ್ಗೆ
ಇಂಡಿಯಾ ನಾಯಕರ ಭೇಟಿಗೆ ಸಿಜೆಐ ನಕಾರ