ರಾಜ್ಯದಲ್ಲಿ ಅಧಿಕಾರದಲ್ಲಿರುವುದು ಸುಳ್ಳಿನ ಸರ್ಕಾರ : ಪ್ರತಾಪ್‌ಸಿಂಹ

KannadaprabhaNewsNetwork |  
Published : Feb 18, 2026, 01:30 AM ISTUpdated : Feb 18, 2026, 04:11 AM IST
pratap singh

ಸಾರಾಂಶ

ಚುನಾವಣೆ ವೇಳೆ ಪಂಚ ಗ್ಯಾರಂಟಿ ಯೋಜನೆ ನೀಡುವುದಾಗಿ ರಾಜ್ಯದ ಜನರಿಗೆ ವಾಗ್ದಾನ ಮಾಡಿದ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಮಾತಿಗೆ ತಪ್ಪಿದರು. 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಕೊಡುವುದಾಗಿ ಹೇಳಿ ವಾರ್ಷಿಕ ಸರಾಸರಿಯ ಶೇ.10ರಷ್ಟು ಮಾತ್ರ ಹೆಚ್ಚಿಗೆ ಕೊಡುವುದಾಗಿ ಹೇಳಿ ವಂಚಿಸಿದರು.

 ಮಂಡ್ಯ :  ರಾಜ್ಯದಲ್ಲಿ ಆಡಳಿತ ನಡೆಸುತಿರುವುದು ಸಿದ್ದರಾಮಯ್ಯ ನೇತೃತ್ವದಲ್ಲಿರುವ ಸುಳ್ಳಿನ ಸರ್ಕಾರ ಎಂದು ಮಾಜಿ ಸಂಸದ ಪ್ರತಾಪಸಿಂಹ ಲೇವಡಿ ಮಾಡಿದರು.

ಸರ್ಕಾರದ ಸಾವಿರ ದಿನಗಳ ಸಾಧನೆ ಹೆಸರಿನಲ್ಲಿ ಕಾಂಗ್ರೆಸ್ ನಾಯಕರು ಬಡಾಯಿ ಕೊಚ್ಚಿಕೊಳ್ಳುತ್ತಿದ್ದಾರೆ. ಪಂಚ ಗ್ಯಾರಂಟಿಯನ್ನು ದೊಡ್ಡದಾಗಿ ಬಿಂಬಿಸಿಕೊಳ್ಳುತ್ತಾ ರಾಜ್ಯದ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಮಾಡುತ್ತಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

2023ರ ವಿಧಾನಸಭಾ ಚುನಾವಣೆ ವೇಳೆ ಪಂಚ ಗ್ಯಾರಂಟಿ ಯೋಜನೆ ನೀಡುವುದಾಗಿ ರಾಜ್ಯದ ಜನರಿಗೆ ವಾಗ್ದಾನ ಮಾಡಿದ ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ನಂತರ ಮಾತಿಗೆ ತಪ್ಪಿದರು. 200 ಯೂನಿಟ್‌ವರೆಗೆ ಉಚಿತ ವಿದ್ಯುತ್ ಕೊಡುವುದಾಗಿ ಹೇಳಿ ವಾರ್ಷಿಕ ಸರಾಸರಿಯ ಶೇ.10 ರಷ್ಟು ಮಾತ್ರ ಹೆಚ್ಚಿಗೆ ಕೊಡುವುದಾಗಿ ಹೇಳಿ ವಂಚಿಸಿದರು. ಅದೇ ರೀತಿ ಎಲ್ಲ ಮಹಿಳೆಯರಿಗೂ ತಲಾ 2 ಸಾವಿರ ರು. ಕೊಡುವುದಾಗಿ ಹೇಳಿದ್ದರು. ಆದರೆ, ಕೊಟ್ಟಿದ್ದು ಕೆಲವರಿಗೆ ಮಾತ್ರ. ಅದೂ ಸಹ ಮೂರ್ನಾಲ್ಕು ತಿಂಗಳು ಕೊಡಲೇ ಇಲ್ಲ. ಲೋಕಸಭಾ ಚುನಾವಣೆ ವೇಳೆ ಮೂರು ತಿಂಗಳ ಹಣವನ್ನು ಒಮ್ಮೆಗೇ ಹಾಕಿದ್ದರು. ಉಪ ಚುನಾವಣೆ ಸಂದರ್ಭದಲ್ಲೂ ಇದೇ ರೀತಿ ಮಾಡಿದ್ದರು. ನಂತರ ಮತ್ತೆ ಯಾವ ಮಹಿಳೆಗೂ ಹಣ ಕೊಡಲೇ ಇಲ್ಲ ಎಂದು ಟೀಕಿಸಿದರು.

ಹೊಸ ಬಸ್ಸು ಖರೀದಿಸಲಿಲ್ಲ:

ಶಕ್ತಿ ಯೋಜನೆಯಡಿ ರಾಜ್ಯ ರಸ್ತೆ ಸಾರಿಗೆ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಓಡಾಡಲು ಅವಕಾಶ ಮಾಡಿಕೊಟ್ಟು ಎಲ್ಲ ಸಾರಿಗೆ ಸಂಸ್ಥೆಗಳನ್ನೂ ದಿವಾಳಿಯಾಗಿಸಿದ್ದಾರೆ. ಎರಡೂವರೆ ವರ್ಷದಲ್ಲಿ ಒಂದೇ ಒಂದು ಬಸ್ಸನ್ನೂ ಖರೀದಿಸಲಿಲ್ಲ. ಇರುವ ಬಸ್ಸುಗಳ ದುರಸ್ಥಿಯನ್ನೂ ಮಾಡಿಸಿಲ್ಲ. ಕೇಂದ್ರದ ನರೇಂದ್ರ ಮೋದಿಯವರ ಸರ್ಕಾರ ಅದರಲ್ಲೂ ವಿಶೇಷವಾಗಿ ಬೃಹತ್ ಕೈಗಾರಿಕಾ ಸಚಿವ ಎಚ್.ಡಿ. ಕುಮಾರಸ್ವಾಮಿ ಆಸಕ್ತಿ ವಹಿಸಿ ರಾಜ್ಯಕ್ಕೆ ೪ ಸಾವಿರ ಎಲೆಕ್ಟ್ರಿಕ್ ಬಸ್ಸುಗಳನ್ನು ನೀಡಿದ್ದಾರೆ ಎಂದರು.

ಅಕ್ಕಿನೂ ಕೊಡಲಿಲ್ಲ-ಯುವ ನಿಧಿ ಹಣವೂ ಇಲ್ಲ:

ಎಲ್ಲ ಬಡವರಿಗೂ ತಲಾ ೧೦ ಕೆಜಿ ಅಕ್ಕಿ ನೀಡುವುದಾಗಿ ವಾಗ್ದಾನ ಮಾಡಿದ ಸಿದ್ದರಾಮಯ್ಯ, ಕೊಟ್ಟಿದ್ದು ಮಾತ್ರ ಮೋದಿ ಸರ್ಕಾರ ನೀಡುವ ೫ ಕೆಜಿ ಅಕ್ಕಿಯನ್ನು ಮಾತ್ರ. ಸ್ವಲ್ಪ ದಿನಗಳ ಕಾಲ ೫ ಕೆಜಿ ಅಕ್ಕಿ ಬದಲಿಗೆ ಹಣವನ್ನೂ ಕೊಟ್ಟರು. ಆದರೆ, ಈಗ ಕೇಂದ್ರದಲ್ಲಿ ಅಕ್ಕಿ ದಾಸ್ತಾನು ಇದೆ. ಕೆಜಿಗೆ ೩೨ ರು. ಕೊಟ್ಟು ಖರೀದಿಸಿ ಎಂದು ಹೇಳಿದರೂ, ಕೇಳಿಸಿಕೊಳ್ಳದಂತೆ ನಾಟಕವಾಡುತ್ತಿದ್ದಾರೆ. ಇನ್ನು ಯುವನಿಧಿ ಯೋಜನೆಯಲ್ಲಿ ಯಾವ ಪದವೀಧರನಿಗೂ ಹಣ ಕೊಟ್ಟ ಉದಾಹರಣೆಗಳೇ ಇಲ್ಲ. ಹೀಗೆ ರಾಜ್ಯದ ಜನರ ಕಿವಿಯ ಮೇಲೆ ದೊಡ್ಡ ಹೂವಿಟ್ಟು ಹೋದೆಡೆ, ಬಂದೆಡೆಯೆಲ್ಲ ಪಂಚ ಗ್ಯಾರಂಟಿ ಯೋಜನೆ ಎಂದು ದೊಡ್ಡ ದನಿಯಲ್ಲಿ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.

ಒಂದೇ ಒಂದು ಸಮುದಾಯಕ್ಕೆ ಮಾತ್ರ ಲಾಭ:

ಪರಿಶಿಷ್ಟ ಜಾತಿ, ಪಂಗಡಕ್ಕೆ ಮೀಸಲಾಗಿದ್ದ ಸಾವಿರಾರು ಕೋಟಿ ರು. ಹಣವನ್ನು ಗ್ಯಾರಂಟಿ ಯೋಜನೆಗೆ ಬಳಕೆ ಮಾಡಿಕೊಳ್ಳುವ ಮೂಲಕ ಆ ಸಮುದಾಯಕ್ಕೂ ಅನ್ಯಾಯ ಮಾಡಿದ್ದಾರೆ. ಅಂಬೇಡ್ಕರ್ ನಿಗಮ, ವಾಲ್ಮೀಕಿ ನಿಗಮ, ವಿಶ್ವಕರ್ಮ ಸೇರಿದಂತೆ ಎಲ್ಲ ನಿಗಮಗಳಲ್ಲೂ ಸಾಲ ಕೊಡುತ್ತಿಲ್ಲ. ಬಡವರಿಗೆ ಕೊಟ್ಟ ಸಾಲದ ಮೇಲಿನ ಬಡ್ಡಿಯನ್ನೂ ಮನ್ನಾ ಮಾಡದೆ, ಕೇವಲ ಅಲ್ಪಸಂಖ್ಯಾತ ಸಮುದಾಯಕ್ಕೆ ಮಾತ್ರ ಸಾಲ-ಬಡ್ಡಿ ಮನ್ನಾ ಮಾಡುವುದಾಗಿ ಘೋಷಣೆ ಮಾಡಿದ್ದಾರೆ. ಬೇರೆಯವರು ಇವರಿಗೆ ಬಡವರು ಎಂದು ಕಾಣುತ್ತಿಲ್ಲವೇ ಎಂದು ವಾಗ್ದಾಳಿ ನಡೆಸಿದರು.

ಬಹು ಉಪಯೋಗಿ ವಿಬಿಜಿ ರಾಮ್‌ಜೀ:

ಹಿಂದೆ ೨೦೦೫ರಲ್ಲಿ ಜಾರಿಗೆ ಬಂದ ಮನರೇಗಾ ಯೋಜನೆಯಲ್ಲಿ ಬಹಳಷ್ಟು ಅವ್ಯವಹಾರಗಳು ನಡೆಯುತ್ತಿತ್ತು. ಇದು ಒಳ್ಳೆಯ ಯೋಜನೆಯಾದರೂ, ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿರಲಿಲ್ಲ. ಕೇಂದ್ರದ ಅನುದಾನ ವ್ಯರ್ಥವಾಗುತ್ತಿತ್ತು. ಕೆಲವೇ ಕೆಲವು ಕಾಮಗಾರಿಗೆ ಮಾತ್ರ ಅವಕಾಶವಿತ್ತು. ಇದನ್ನು ಮನಗಂಡ ನರೇಂದ್ರ ಮೋದಿಯವರ ಸರ್ಕಾರ ಅದಕ್ಕೆ ಬದಲಾವಣೆ ತಂದು ಯೋಜನೆಯನ್ನು ಬದಲಿಸಿತ್ತು. ಕೆರೆಯ ಹೂಳೆತ್ತುವ ಜೊತೆಗೆ ಏರಿ, ತೂಬು ಸಮಗ್ರ ಅಭಿವೃದ್ಧಿಗೆ ಒತ್ತು ನೀಡಿತು. ಇದರೊಂದಿಗೆ ೨೬೪ ಕಾಮಗಾರಿಗಳನ್ನು ಕೈಗೊಳ್ಳಬಹುದಾಗಿದೆ. ಕೃಷಿ ಚಟುವಟಿಕೆ ಸಮಯದಲ್ಲಿ ದೇಶದ ಜನರಿಗೆ ಅನ್ನಕೊಡುವ ಕಾಯಕವನ್ನು ಬಿಟ್ಟು ಈ ಯೋಜನೆಯನ್ನು ಮಾಡಲಾದೀತೆ ಎಂದು ಪ್ರಶ್ನಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಡಾ. ಎನ್.ಎಸ್. ಇಂದ್ರೇಶ್, ಮುಖಂಡರಾದ ಡಾ.ಸಿದ್ದರಾಮಯ್ಯ,ಎಸ್.ಸಚ್ಚಿದಾನಂದ, ವಿವೇಕ್, ಅಶೋಕ್ ಜಯರಾಂ, ನಾಗಾನಂದ್, ಪ್ರದೀಪ್ ಗೋಷ್ಠಿಯಲ್ಲಿದ್ದರು.  

ಖಾತೆ ಬಗ್ಗೆ ಮಾತನಾಡದ ಪ್ರಿಯಾಂಕ್ ಖರ್ಗೆ...!

 , ಮಂಡ್ಯ :  ಪಂಚಾಯತ್‌ರಾಜ್ ಗ್ರಾಮೀಣಾಭಿವೃದ್ಧಿ ಮತ್ತು ವಿಜ್ಞಾನ-ತಂತ್ರಜ್ಞಾನ ಇಲಾಖೆ ಸಚಿವರಾಗಿರುವ ಪ್ರಿಯಾಂಕ್ ಖರ್ಗೆ ತಮ್ಮ ಖಾತೆಯ ಬಗ್ಗೆ ಮಾತನಾಡುವುದೇ ಇಲ್ಲ. ತಮ್ಮ ಕ್ಷೇತ್ರದ ಅಭಿವೃದ್ಧಿಯ ಬಗ್ಗೆಯೂ ಚಿಂತನೆ ಮಾಡುವುದಿಲ್ಲ. ಅದನ್ನು ಬಿಟ್ಟು ಬೇರೆ ಬೇರೆ ವಿಚಾರಗಳನ್ನು ಬೇಕಾಬಿಟ್ಟಿಯಾಗಿ ಮಾತನಾಡುತ್ತಾರೆ ಎಂದು ಮಾಜಿ ಸಂಸದ ಪ್ರತಾಪಸಿಂಹ ಜರಿದರು.

ಮರದಲ್ಲಿ ಒಂದು ಕಾಗೆ ಕುಳಿತು, ಕಾ..., ಕಾ..., ಎನ್ನುವಂತೆ ಮರಿ ಖರ್ಗೆ ಅರಚುತ್ತಿರುತ್ತಾರೆ. ಇವರ ತಂದೆ ಮಲ್ಲಿಕಾರ್ಜುನ ಖರ್ಗೆ ಅವರು ೯ ಬಾರಿ ಶಾಸಕರಾಗಿದ್ದರು. ಎರಡು ಬಾರಿ ಲೋಕಸಭಾ ಸದಸ್ಯರು, ಒಂದು ಬಾರಿ ರಾಜ್ಯಸಭಾ ಸದಸ್ಯರಾಗಿದ್ದರು. ಇವರೂ ಸಹ ಶಾಸಕರಾಗಿ ಸಂಸದರಾಗಿದ್ದಾರೆ. ಆದರೂ ಕಲುಬುರ್ಗಿ ಅಭಿವೃದ್ಧಿಯಾಗಲಿಲ್ಲ. ಒಂದೇ ಒಂದು ಕಾರ್ಖಾನೆಯನ್ನೂ ಸ್ಥಾಪಿಸಿ ಉದ್ಯೋಗ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿಲ್ಲ. ಯಾವುದೋ ಒಂದು ಟ್ರಸ್ಟ್ ಸ್ಥಾಪಿಸುವುದು. ಅದರೊಂದಿಗೆ ನಾಲ್ಕೈದು ಎಕರೆ ಜಮೀನನ್ನು ಹೊಡೆದುಕೊಳ್ಳುವಂತಹ ಕೆಲಸವನ್ನು ಮಾತ್ರ ಅಚ್ಚುಕಟ್ಟಾಗಿ ಮಾಡುತ್ತಿದ್ದಾರೆ ಎಂದು ಮೂದಲಿಸಿದರು.

ಯಾವುದೇ ಆಸೆ ಇಲ್ಲದವರು ಆರ್‌ಎಸ್‌ಎಸ್‌ನಲ್ಲಿ ಕೆಲಸ ಮಾಡುತ್ತಾರೆ. ಅವರಿಗೆ ದೇಶಸೇವೆ ಮಾತ್ರ ಗೊತ್ತಿರುತ್ತದೆ. ಆದರೆ, ಮರಿ ಖರ್ಗೆಯಂತವರಿಗೆ ಇಂತಹ ವಿಚಾರಗಳು ತಿಳಿಯುವುದಿಲ್ಲ. ಸಿದ್ಧಾರ್ಥ ಟ್ರಸ್ಟ್ ಹೆಸರಿನಲ್ಲಿ ಪುಕ್ಕಟ್ಟೆ ಜಮೀನು ಹೊಡೆಯುವುದು ಮಾತ್ರ ಚೆನ್ನಾಗಿ ತಿಳಿಯುತ್ತದೆ ಎಂದು ಹರಿಹಾಯ್ದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.
Read more Articles on

Recommended Stories

ಬಾಂಗ್ಲಾ ಸರ್ಕಾರ ಕೆಡವಿದ ಜೆನ್‌-ಝೀಗಳೇನಾದರು?
ನಟ ವಿಜಯ್‌- ತ್ರಿಶಾ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕೀಳು ಹೇಳಿಕೆ ವಿವಾದ, ವಿಷಾಧ