ನವದೆಹಲಿ: ಮದ್ಯ ಹಗರಣಕ್ಕೆ ಸಂಬಂಧಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಜಾರಿ ನಿರ್ದೇಶನಾಲಯ (ಇ.ಡಿ.) ಬಂಧಿಸಿರುವುದನ್ನು ಖಂಡಿಸಿ ಆಮ್ ಆದ್ಮಿ ಪಕ್ಷ ಹಾಗೂ ಇಂಡಿಯಾ ಕೂಟದ ಪಕ್ಷಗಳು ದಿಲ್ಲಿ ಸೇರಿದಂತೆ ದೇಶಾದ್ಯಂತ ಪ್ರತಿಭಟನೆ ನಡೆಸಿವೆ.
ಎಲ್ಲ ವಿಪಕ್ಷ ನಾಯಕರು ಕೇಜ್ರಿವಾಲ್ ಬಂಧನವನ್ನು ಸೇಡಿನ ಕ್ರಮ ಎಂದು ಕಿಡಿಕಾರಿದ್ದಾರೆ.ಈ ವೇಳೆ ದೆಹಲಿಯ ಐಟಿಒ ಜಂಕ್ಷನ್ ಬಳಿ ಪ್ರತಿಭಟನೆ ಮಾಡುತ್ತಿದ್ದ ಮಂತ್ರಿ ಅತಿಶಿ ಹಾಗೂ ಸೌರಭ್ ತಿವಾರಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅತಿಶಿ ‘ನಾವು ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದರೂ ನಮ್ಮನ್ನು ಪೊಲೀಸರು ವಶಕ್ಕೆ ಪಡೆಯುವ ಮೂಲಕ ಚುನಾವಣೆಯ ಸಮಯದಲ್ಲಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡಲಾಗಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದೇ ರೀತಿಯಲ್ಲಿ ಪಂಜಾಬ್, ಹರ್‍ಯಾಣ, ಗುಜರಾತ್, ಮುಂಬೈ, ಗೋವಾ, ಬೆಂಗಳೂರು, ಕೇರಳ, ತಮಿಳುನಡು ಮುಂತಾದೆಡೆ ಆಪ್ ಕಾರ್ಯಕರ್ತರು ಹಾಗೂ ಇಂಡಿಯಾ ಕೂಟದ ಮಿತ್ರಪಕ್ಷಗಳಾದ ಕಾಂಗ್ರೆಸ್, ಸಿಪಿಎಂ, ಶಿವಸೇನೆ, ಸಮಾಜವಾದಿ ಪಾರ್ಟಿ, ಎನ್‌ಸಿಪಿ ಮೊದಲಾದ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.