ಪಿಟಿಐ ನವದೆಹಲಿ
ಭ್ರಷ್ಟಾಚಾರದ ವಿರುದ್ಧ ಸಮರ ಸಾರುವ ಮೂಲಕವೇ ಅಧಿಕಾರಕ್ಕೇರಿದ ಆಮ್ ಆದ್ಮಿ ಪಕ್ಷದ ಸಂಸ್ಥಾಪಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರೇ ದೆಹಲಿ ಅಬಕಾರಿ ಹಗರಣದ ಮುಖ್ಯ ಸಂಚುಗಾರ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಶುಕ್ರವಾರ ನ್ಯಾಯಾಲಯಕ್ಕೆ ತಿಳಿಸಿದೆ.
ಗುರುವಾರ ಕೇಜ್ರಿವಾಲ್ ಅವರನ್ನು ಬಂಧಿಸಿದ್ದ ಇ.ಡಿ. ಅಧಿಕಾರಿಗಳು ಶುಕ್ರವಾರ ಮಧ್ಯಾಹ್ನ 2ಕ್ಕೆ ಅವರನ್ನು ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯದ ವಿಶೇಷ ಜಡ್ಜ್ ಕಾವೇರಿ ಬವೇಜಾ ಅವರ ಮುಂದೆ ಹಾಜರುಪಡಿಸಿದರು.
ಈ ವೇಳೆ ಕೇಜ್ರಿವಾಲ್ ಅವರನ್ನು 10 ದಿನಗಳ ಕಾಲ ತಮ್ಮ ವಶಕ್ಕೆ ನೀಡಬೇಕು ಎಂಬ ಕೋರಿಕೆ ಇಟ್ಟರು. ಜತೆಗೆ ಹಗರಣದಲ್ಲಿ ಕೇಜ್ರಿ ಪಾತ್ರವನ್ನು ನ್ಯಾಯಾಲಯಕ್ಕೆ ವಿವರಿಸಿದರು.
ದೆಹಲಿ ಅಬಕಾರಿ ಲೈಸೆನ್ಸ್ ಹಂಚಿಕೆಯಲ್ಲಿ ಗರಿಷ್ಠ ಲಾಭ ಪಡೆಯುವ ಸಲುವಾಗಿ ಬಿಆರ್‌ಎಸ್ ನಾಯಕಿ ಕವಿತಾ ರೆಡ್ಡಿ ನೇತೃತ್ವದಲ್ಲಿ ದಕ್ಷಿಣ ಭಾರತದ ವಿವಿಧ ಉದ್ಯಮಿಗಳು ರಚಿಸಿಕೊಂಡಿದ್ದ ‘ಸೌತ್ ಗ್ರೂಪ್’ನಿಂದ ಹಲವಾರು ಕೋಟಿ ರು.ಗಳನ್ನು ಕೇಜ್ರಿವಾಲ್ ಅವರು ಲಂಚವಾಗಿ ಪಡೆದಿದ್ದರು.
ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ಸೌತ್ ಗ್ರೂಪ್‌ನ ಕೆಲವು ಸದಸ್ಯರಿಂದ 100 ಕೋಟಿ ರು. ಹಣವನ್ನು ಕೇಳಿದ್ದರು. ಕೇಜ್ರಿವಾಲ್ ಪಡೆದ ಲಂಚದ ಹಣದ ಪೈಕಿ 45 ಕೋಟಿ ರು.
ಗೋವಾ ಚುನಾವಣೆಯಲ್ಲಿ ಬಳಕೆಯಾಗಿದೆ. ಅದನ್ನು ಹವಾಲಾ ಮೂಲಕ ಸಾಗಿಸಲಾಗಿದೆ ಎಂದು ಇ.ಡಿ. ಪರ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್.ವಿ. ರಾಜು ಅವರು ದೂರಿದರು.
ಆಪ್ ಎಂಬುದು ವ್ಯಕ್ತಿಯಲ್ಲ. ಅದು ಒಂದು ಕಂಪನಿ. ಒಂದು ಕಂಪನಿಯ ನಡವಳಿಕೆಗೆ ಅದರಲ್ಲಿರುವ ಎಲ್ಲ ವ್ಯಕ್ತಿಗಳೂ ಹೊಣೆಗಾರರಾಗಿರುತ್ತಾರೆ ಎಂದು ಅವರು ಹೇಳಿದರು.