- ಬೆಳಗಾವಿ, ಸುವರ್ಣಸೌಧದಲ್ಲೇ ಸಭೆ ನಡೆಸಿದ ಯತ್ನಾಳ್ ಟೀಂ
- ಡಿ.26/27ರಿಂದ 2ನೇ ಹಂತದ ವಕ್ಫ್ ಹೋರಾಟ
- ಬಳ್ಳಾರಿ ಅಥವಾ ವಿಜಯನಗರದಿಂದ ಪ್ರಾರಂಭ==ಮಂಗಳವಾರ ಬೆಳಗಾವಿಯ ಹೋಟೆಲ್‌ನಲ್ಲಿ ಯತ್ನಾಳ್, ರಮೇಶ್ ಜಾರಕಿಹೊಳಿ, ಕುಮಾರ್ ಬಂಗಾರಪ್ಪ ಸಭೆ
ಡಿ.26-27ರಿಂದ ವಕ್ಫ್ ವಿರುದ್ಧ ಬಳ್ಳಾರಿ, ವಿಜಯನಗರದಿಂದ 2ನೇ ಸುತ್ತಿನ ಹೋರಾಟ ಆರಂಭಕ್ಕೆ ನಿರ್ಧಾರ
==
ಬಸನಗೌಡ ಪಾಟೀಲ್ ಯತ್ನಾಳ್, ವಿಜಯಪುರ ಶಾಸಕ
ಕನ್ನಡಪ್ರಭ ವಾರ್ತೆ ಸುವರ್ಣ ವಿಧಾನಸೌಧ
ಇದೇ ತಿಂಗಳ 26 ಅಥವಾ 27ರಂದು ಬಳ್ಳಾರಿ ಅಥವಾ ವಿಜಯನಗರ ಜಿಲ್ಲೆಯಿಂದ ಎರಡನೇ ಹಂತದ ವಕ್ಫ್ ಹೋರಾಟ ಆರಂಭಿಸಲು ಮುಂದಾಗಿದೆ. ಈ ಹೋರಾಟಕ್ಕೆ ವಿಜಯೇಂದ್ರ ಸೇರಿದಂತೆ ಎಲ್ಲರಿಗೂ ಆಹ್ವಾನ ನೀಡುವುದಾಗಿ ಹೇಳಿದೆ.
ಹೋಟೆಲ್‌ನಲ್ಲಿ ಸಭೆ ಬಳಿಕ ಮಧ್ಯಾಹ್ನ ಸುವರ್ಣ ವಿಧಾನಸೌಧಕ್ಕೆ ಮೂವರೂ ಒಂದೇ ಕಾರಿನಲ್ಲಿ ಆಗಮಿಸಿದರು. ಮೊಗಸಾಲೆಯಲ್ಲಿರುವ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕೊಠಡಿಯಲ್ಲಿ ಕುಳಿತು ಸಮಾಲೋಚನೆ ನಡೆಸಿದರು. ಇದೇ ವೇಳೆ ಕಲಾಪದ ಕುರಿತು ಚರ್ಚಿಸಲು ಪಕ್ಷದ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಪ್ರತಿಪಕ್ಷದ ನಾಯಕನ ಕೊಠಡಿಗೆ ತೆರಳಲು ಮುಂದಾದರು. ಅಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ತಂಡ ಸೇರಿರುವ ಮಾಹಿತಿ ತಿಳಿದು ಮೊಗಸಾಲೆಯಿಂದಲೇ ಹಿಂತಿರುಗಿದರು.
ಪಕ್ಷದ ಬೆಂಬಲದಿಂದಲೇ ಹೋರಾಟ:ಈ ವೇಳೆ ಸುದ್ದಿಗಾರರ ಜತೆ ಮಾತನಾಡಿದ ರಮೇಶ್ ಜಾರಕಿಹೊಳಿ, ಸಭೆಯಲ್ಲಿ ಎರಡನೇ ಹಂತದ ವಕ್ಫ್ ಹೋರಾಟದ ಬಗ್ಗೆ ಚರ್ಚೆ ಮಾಡಿದ್ದೇವೆ. ಡಿ.26 ಅಥವಾ 27ರಿಂದ ಎರಡನೇ ಹಂತದ ಹೋರಾಟದ ಬಗ್ಗೆ ಚರ್ಚೆಯಾಗಿದೆ. ಜನರ ಸಮಸ್ಯೆಗಳ ಅಭಿಪ್ರಾಯ ಸಂಗ್ರಹಕ್ಕೆ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ. ಪಕ್ಷದ ಬೆಂಬಲದಿಂದಲೇ ಹೋರಾಟ ನಡೆಸಲಾಗುವುದು. ಮೊದಲ ಹಂತದ ಹೋರಾಟದ ವರದಿಯನ್ನು ದೆಹಲಿಗೆ ತೆರಳಿ ಪಕ್ಷದ ಹೈಕಮಾಂಡ್‌ಗೆ ಸಲ್ಲಿಕೆ ಮಾಡಲಾಗಿದೆ. ಅಲ್ಲದೇ, ವಕ್ಫ್ ಸಂಬಂಧ ರಚನೆಯಾಗಿರುವ ಜೆಪಿಸಿಗೂ ನೀಡಲಾಗಿದೆ ಎಂದು ಹೇಳಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ವಿಜಯೇಂದ್ರ ಪರ ಮಾಜಿ ಶಾಸಕರು ಸಭೆ ನಡೆಸಿದ್ದಾರೆ. ಅವರ ಜತೆ 12 ಮಾಜಿ ಶಾಸಕರು ಮಾತ್ರ ಇದ್ದಾರೆ. ಪಕ್ಷದ ರಾಜ್ಯಾಧ್ಯಕ್ಷರು ಎಂಬ ಕಾರಣಕ್ಕಾಗಿ ಹೋಗಿದ್ದಾರೆಯೇ ಹೊರತು ಬೇರಾವುದೇ ಕಾರಣವಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಗ್ಗೆ ನಮಗೆ ಗೌರವ ಇದೆ. ಪಕ್ಷವನ್ನು ಕಟ್ಟಿ ಬೆಳೆಸಿದ್ದಾರೆ. ನಮ್ಮ ಹೋರಾಟದ ಬಗ್ಗೆ ರಾಷ್ಟ್ರೀಯ ನಾಯಕರಿಗೆ ಎಲ್ಲವನ್ನೂ ತಿಳಿಸಿದ್ದೇವೆ. ರಾಷ್ಟ್ರೀಯ ನಾಯಕರು ಏನು ಹೇಳುತ್ತಾರೋ ಅದಕ್ಕೆ ನಾವೆಲ್ಲಾ ತಲೆಬಾಗುತ್ತೇವೆ. ನಾವು ರೈತರ ಪರ ಸಮಸ್ಯೆಗಳಿಗೆ ಹೋರಾಟ ಮಾಡುತ್ತಿದ್ದೇವೆ ಎಂದರು.ಶಾಸಕ ಯತ್ನಾಳ್ ಮಾತನಾಡಿ, ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಎದುರಿಗೆ ನಮಸ್ಕಾರ ಮಾಡುತ್ತಾರೆ. ಒಳಗೊಳಗೆ ಏನು ಮಾಡುತ್ತಾರೆ ಎಂಬುದು ಯಾರಿಗೆ ಗೊತ್ತಾಗುತ್ತದೆ. ಊಟಕ್ಕೆ ಕರೆದಿದ್ದರು. ಆದರೆ ಹೋಗುವುದು ಅಥವಾ ಬಿಡುವುದು ನನ್ನ ವೈಯಕ್ತಿಕ ವಿಚಾರ. ವಕ್ಫ್ ವಿಚಾರದಲ್ಲಿ ಎರಡನೇ ಹಂತದ ಹೋರಾಟಕ್ಕೆ ಸಜ್ಜಾಗಿದ್ದೇವೆ. ಬಳ್ಳಾರಿ ಅಥವಾ ವಿಜಯನಗರದಿಂದ ಹೋರಾಟ ಪ್ರಾರಂಭ ಮಾಡುತ್ತೇವೆ. ರಾಜ್ಯಾಧ್ಯಕ್ಷ ಸೇರಿದಂತೆ ಎಲ್ಲರನ್ನೂ ಕರೆಯುತ್ತೇವೆ. ಬರುವುದು, ಬಿಡುವುದು ಅವರಿಗೆ ಬಿಟ್ಟ ವಿಚಾರ ಎಂದರು.
ವಸತಿ ಸಚಿವ ಜಮೀರ್ ಅಹ್ಮದ್ ಅವರನ್ನು ಸರ್ಕಾರ ಕೆಲಸದ ವಿಚಾರದಲ್ಲಿ ಭೇಟಿಯಾಗಿದ್ದೇನೆ. ಅವರ ಕಚೇರಿಗೆ ಹೋಗಿದ್ದೇನೆಯೇ ಹೊರತು ಮನೆಗಲ್ಲ. ಕ್ಷೇತ್ರಕ್ಕೆ ಮನೆಗಳನ್ನು ನೀಡಿಲ್ಲ. ಈ ವಿಚಾರವಾಗಿ ಭೇಟಿಯಾಗಿ ಚರ್ಚೆ ನಡೆಸಲಾಗಿದೆ. ಅವರಿಗೆ ನಮಗೆ ಇರುವ ಭಿನ್ನಾಭಿಪ್ರಾಯ ಬೇರೆಯಾಗಿದ್ದು, ಕ್ಷೇತ್ರದ ವಿಚಾರದ ಹಿನ್ನೆಲೆಯಲ್ಲಿ ಭೇಟಿಯಾಗಿದ್ದೇನೆ ಎಂದು ಇದೇ ವೇಳೆ ಯತ್ನಾಳ್ ಸ್ಪಷ್ಟನೆ ನೀಡಿದರು.