- ಆನ್‌ಲೈನ್ ಗೇಮಿಂಗ್, ಬೆಟ್ಟಿಂಗ್ ಪ್ರಕರಣ
- ಚಳ್ಳಕೆರೆ ಮನೇಲಿ ಅಧಿಕಾರಿಗಳ ತಲಾಶ್--
- ಪಪ್ಪಿ ಮೇಲೆ ಆನ್‌ಲೈನ್ ಗೇಮ್, ಬೆಟ್ಟಿಂಗ್, ಕ್ಯಾಸಿನೊ ವ್ಯವಹಾರ ಆರೋಪ- ಆ.22ರಂದು ಮನೆ ಮೇಲೆ ದಾಳಿ ನಡೆಸಿ ಬಳಿಕ ಸಿಕ್ಕಿಂನಲ್ಲಿ ಇ.ಡಿ. ಬಂಧಿಸಿತ್ತು
- ಬಂಧನದ ಬಳಿಕ ವೀರೇಂದ್ರ ತೀವ್ರ ವಿಚಾರಣೆ, ಹಲವು ಮಾಹಿತಿ ಬೆಳಕಿಗೆ- ಹೀಗಾಗಿ ಹೆಚ್ಚಿನ ಮಾಹಿತಿ, ದಾಖಲೆ ಸಂಗ್ರಹಿಸಲು ಈಗ ಮತ್ತೆ ಇ.ಡಿ. ದಾಳಿ
- ದಾಳಿಯ ವೇಳೆ 6 ಕಾರುಗಳು ವಶಕ್ಕೆ ಬೆಂಗಳೂರಿನ ಇ.ಡಿ. ಕಚೇರಿಗೆ ಶಿಫ್ಟ್--
ಕನ್ನಡಪ್ರಭ ವಾರ್ತೆ ಚಳ್ಳಕೆರೆ (ಚಿತ್ರದುರ್ಗ)ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಚಳ್ಳಕೆರೆ ಪಟ್ಟಣದಲ್ಲಿರುವ ಮನೆ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ತಂಡ (ಇ.ಡಿ.) ಮಂಗಳವಾರ ಮತ್ತೊಮ್ಮೆ ದಾಳಿ ನಡೆಸಿದೆ. ಇದರಿಂದಾಗಿ ಸದ್ಯ ಇ.ಡಿ.ವಶದಲ್ಲೇ ಇರುವ ಪಪ್ಪಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ.
ಅವರು ಆನ್‌ಲೈನ್ ಗೇಮ್, ಬೆಟ್ಟಿಂಗ್, ಕ್ಯಾಸಿನೊ ಮುಂತಾದ ವ್ಯವಹಾರಗಳನ್ನು ನಡೆಸುತ್ತಿದ್ದು, ಸಾವಿರಾರು ಕೋಟಿ ರೂ.ಗಳ ವಹಿವಾಟು ನಡೆದಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಆ.22ರಂದು ಅವರ ಮನೆ ಮೇಲೆ ದಾಳಿ ನಡೆದಿತ್ತು.ಇ.ಡಿ.ಶೋಧದ ವೇಳೆ ವೀರೇಂದ್ರ ಅವರು ಸಾಗರೋತ್ತರ ವ್ಯವಹಾರ ನಡೆಸುತ್ತಿರುವ ಸಂಬಂಧ ಕೆಲ ದಾಖಲೆಗಳು ಪತ್ತೆಯಾಗಿದ್ದವು. ಬಳಿಕ ಇ.ಡಿ.ಅಧಿಕಾರಿಗಳು ಅವರನ್ನು ಸಿಕ್ಕಿಂನಲ್ಲಿ ಬಂಧಿಸಿ ಈ ಶೆಲ್ ಕಂಪನಿಗಳು ಹಾಗೂ ಸಾಗರೋತ್ತರ ವ್ಯವಹಾರದ ಬಗ್ಗೆ ವಿಚಾರಣೆಗೆ ಒಳಪಡಿಸಿದ್ದರು.
ಈ ವ್ಯವಹಾರಗಳಿಗೆ ಸಂಬಂಧಪಟ್ಟಂತೆ ಇನ್ನೂ ಹೆಚ್ಚಿನ ಮಾಹಿತಿ ಹಾಗೂ ದಾಖಲೆ ಸಂಗ್ರಹಿಸಲು ಮಂಗಳವಾರ ಮತ್ತೆ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ.ದಾಳಿ ವೇಳೆ, ಕೆಲ ದಾಖಲೆಗಳ ಬಗ್ಗೆ ಮನೆಯವರಿಂದ ಮಾಹಿತಿ ಪಡೆದಿದ್ದು, ಅವರ ಕೆಲ ಖಾಸಗಿ ಬ್ಯಾಂಕ್ ಖಾತೆಗಳ ಪರಿಶೀಲನೆ ನಡೆಸಿದರು. ಬಳಿಕ, ಅವರ ಮನೆಯಲ್ಲಿದ್ದ 6 ಕಾರುಗಳನ್ನು ವಶಕ್ಕೆ ಪಡೆದು, ಬೆಂಗಳೂರಿನ ಇ.ಡಿ. ಕಚೇರಿಗೆ ತೆಗೆದುಕೊಂಡು ಹೋಗಿದ್ದಾರೆ.10 ದಿನದ ಅವಧಿಯಲ್ಲಿ ಎರಡನೇ ಬಾರಿಗೆ ದಾಳಿ:
ಕೇವಲ 10 ದಿನದ ಅವಧಿಯಲ್ಲಿ ಎರಡನೇ ಬಾರಿಗೆ ಇ.ಡಿ.ಅಧಿಕಾರಿಗಳು ಅವರ ಮನೆ ಮೇಲೆ ದಾಳಿ ನಡೆಸುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ. ಇ.ಡಿ.ಅಧಿಕಾರಿಗಳು ಆ.22ರ ಶುಕ್ರವಾರ ಬೆಳಗಿನ ಜಾವ ಪಪ್ಪಿ ಹಾಗೂ ಅವರ ಇಬ್ಬರು ಸಹೋದರರ ಮನೆಯ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದರು. ರಾತ್ರಿ 12.30ರ ತನಕವೂ ದಾಳಿ ಮುಂದುವರಿದಿತ್ತು. ಆಗ ಅವರ ಬ್ಯಾಂಕ್ ಅಕೌಂಟ್‌ಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗಿತ್ತು. ಅವರಿಗೆ ಸೇರಿದ ನಾಲ್ಕು ಕಾರುಗಳನ್ನು ವಶಕ್ಕೆ ಪಡೆಯಲಾಗಿತ್ತು.ಬಳಿಕ, ಆ.24ರಂದು ಸಿಕ್ಕಿಂನ ಖಾಸಗಿ ಲಾಡ್ಜ್‌ನಲ್ಲಿ ಅವರನ್ನು ಬಂಧಿಸಿ, ಆ.25ರ ಸೋಮವಾರ ಬೆಂಗಳೂರಿನ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯ ಅವರನ್ನು ಇ.ಡಿ.ವಶಕ್ಕೆ ನೀಡಿದೆ.