ಕೃಷಿ ಸಚಿವ ಚಲುವರಾಯಸ್ವಾಮಿ ರಾಜೀನಾಮೆ ರಾಜಕೀಯ ಗಿಮಿಕ್: ಸುರೇಶ್‌ಗೌಡ

KannadaprabhaNewsNetwork |  
Published : Jun 08, 2024, 12:32 AM ISTUpdated : Jun 08, 2024, 04:33 AM IST
Cheluvaraya Swamy

ಸಾರಾಂಶ

ಸಚಿವ ಚಲುವರಾಯಸ್ವಾಮಿ ಅವರಿಂದ ಅಧಿಕಾರ ತ್ಯಾಗದ ನಿರೀಕ್ಷೆ ಮಾಡಬೇಡಿ. ಅವರೆಂದೂ ಕೊಟ್ಟ ಮಾತಿನಂತೆ ನಡೆಯುವುದಿಲ್ಲ. ಅಧಿಕಾರ, ಹಣಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ಅವರಿಗೆ ಈಗ ಸಿಕ್ಕಿರುವುದು ಕೊನೆಯ ಅವಕಾಶ. ಲೂಟಿ ಮಾಡುವುದಷ್ಟೇ ಮುಖ್ಯ ಗುರಿಯಾಗಿದೆ.

 ನಾಗಮಂಗಲ :  ಪಕ್ಷ ಕೇಳಿದರೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿರುವುದು ಕೇವಲ ರಾಜಕೀಯ ಗಿಮಿಕ್ ಅಷ್ಟೇ. ಸಿದ್ದರಾಮಯ್ಯ ಅಧಿಕಾರ ಬಿಡಬಹುದು. ಆದರೆ, ಚಲುವರಾಯಸ್ವಾಮಿ ಮಾತ್ರ ಅಧಿಕಾರ ಮಾತ್ರ ಬಿಡುವುದಿಲ್ಲ ಎಂದು ಜೆಡಿಎಸ್ ಮಾಜಿ ಶಾಸಕ ಸುರೇಶ್‌ಗೌಡ ಕುಹಕವಾಡಿದರು.

ಸಚಿವ ಚಲುವರಾಯಸ್ವಾಮಿ ಅವರಿಂದ ಅಧಿಕಾರ ತ್ಯಾಗದ ನಿರೀಕ್ಷೆ ಮಾಡಬೇಡಿ. ಅವರೆಂದೂ ಕೊಟ್ಟ ಮಾತಿನಂತೆ ನಡೆಯುವುದಿಲ್ಲ. ಅಧಿಕಾರ, ಹಣಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧರಿದ್ದಾರೆ. ಅವರಿಗೆ ಈಗ ಸಿಕ್ಕಿರುವುದು ಕೊನೆಯ ಅವಕಾಶ. ಲೂಟಿ ಮಾಡುವುದಷ್ಟೇ ಮುಖ್ಯ ಗುರಿಯಾಗಿದೆ ಎಂದು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಾ ತಿಳಿಸಿದರು.

ರಾಜ್ಯದ ನಾಯಕ ಎನ್ನುತ್ತಿದ್ದ ವ್ಯಕ್ತಿಯ ಕ್ಷೇತ್ರದಲ್ಲೇ ಕಾಂಗ್ರೆಸ್‌ಗೆ ಲೀಡ್ ಸಿಕ್ಕಿಲ್ಲ. ರಾಜೀನಾಮೆ ನೀಡುವುದಾಗಿದ್ದರೆ ನೈತಿಕ ಹೊಣೆ ಹೊತ್ತು ಇಷ್ಟೊತ್ತಿಗಾಗಲೇ ರಾಜೀನಾಮೆ ಕೊಡಬೇಕಿತ್ತು. ರಾಜೀನಾಮೆ ಕೊಡುತ್ತೇನೆ ಎನ್ನುವುದೆಲ್ಲಾ ಕೇವಲ ಗಿಮಿಕ್ ಅಷ್ಟೇ. ಆತ ಒಬ್ಬ ಮಹಾನ್ ಭ್ರಷ್ಟ ರಾಜಕಾರಣಿ. ಲೂಟಿ ಮಾಡಲೆಂದೇ ಅಧಿಕಾರಕ್ಕೆ ಬಂದಿದ್ದಾರೆ. ನಾನೇ ಮಂಡ್ಯ ಶಿಲ್ಪಿ ಎಂದು ಅಹಂಕಾರದಿಂದ ಮೆರೆದರೆ ಹೀಗೇ ಆಗೋದು. ಜನರು ಮನಸ್ಸು ಮಾಡಿದರೆ ಏನಾಗುತ್ತೆ ಎನ್ನುವುದಕ್ಕೆ ಫಲಿತಾಂಶವೇ ಸಾಕ್ಷಿ ಎಂದು ಕುಟುಕಿದರು.

ರಾಜಕೀಯದ ಗಂಧ-ಗಾಳಿ ಗೊತ್ತಿಲ್ಲದ ಸ್ಟಾರ್ ಚಂದ್ರು ಅವರನ್ನು ರಾಜಕಾರಣಕ್ಕೆ ಕರೆತಂದು ಹರಕೆಯ ಕುರಿಯನ್ನಾಗಿ ಮಾಡಿದರು. ಚುನಾವಣೆ ಮುಗಿದ ಬಳಿಕವೂ ಸ್ಟಾರ್ ಚಂದ್ರು ಬಳಿ ಹಣ ಕೇಳಿದ್ದಾರೆ. ಹೆಚ್ಚು ಖರ್ಚಾಗಿದೆ ಎಂದು ಹೇಳಿ ಮಹಾನ್ ನಾಯಕ ಚಂದ್ರು ಬಳಿಗೆ ಹೋಗಿದ್ದರಂತೆ ಎಂದು ಸಚಿವ ಚಲುವರಾಯಸ್ವಾಮಿ ವಿರುದ್ಧ ಸುರೇಶ್‌ಗೌಡ ಗಂಭೀರ ಆರೋಪ ಮಾಡಿದರು.

ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಈ ಚುನಾವಣೆ ವೇಳೆ ಯಾರ್ಯಾರು ಏನು ಕರ್ಮ ಮಾಡಿದ್ದಾರೋ ಆ ಕರ್ಮವನ್ನು ಪುಣ್ಯಾತ್ಮರು ಅನುಭವಿಸುತ್ತಾರೆ. ದೇವರಾಜೇಗೌಡ ಹೊರಗೆ ಬರಬೇಕು ಅಷ್ಟೇ. ಈ ಚುನಾವಣೆಯಲ್ಲಿ ಕರ್ಮ ತಟ್ಟಿದೆ, ಮುಂದೆ ಇನ್ನೂ ತಟ್ಟಲಿದೆ. ದೇವರಾಜೇಗೌಡ ಹೊರಬಂದರೆ ಎಲ್ಲ ವಿಷಯವನ್ನೂ ಹೇಳುತ್ತಾನೆ. ಯಾರೆಲ್ಲಾ ಏನು ಮಾತನಾಡಿದರು, ಏನು ಮಾಡಿದರು ಎಂಬುದೆಲ್ಲಾ ಹೊರಬರುತ್ತೆ. ಕುಕೃತ್ಯ ಮಾಡಿದವನು ಒಬ್ಬ ಅಪರಾಧಿ.

ಹಾಗೆಯೇ ಹೆಣ್ಣು ಮಕ್ಕಳ ಮಾನವನ್ನು ಬೀದಿ ಬೀದಿಯಲ್ಲಿ ಹರಾಜು ಹಾಕುವ ಕೃತ್ಯ ಮಾಡಿದವರು ಅವರಿಗಿಂತ ದೊಡ್ಡ ಅಪರಾಧಿ. ದೇವರಾಜೇಗೌಡ ಜೈಲಿ ಹೋಗುವ ಮುನ್ನ ಒಂದಷ್ಟು ಜನರ ಮುಖವಾಡ ಬಯಲು ಮಾಡಿದ್ದಾನೆ. ಹೊರಗೆ ಬಂದು ಇನ್ನೊಂದಷ್ಟು ಮಂದಿಯ ಮುಖವಾಡ ಬಯಲು ಮಾಡುತ್ತಾನೆ ಎಂದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಮೈಸೂರು ರನ್‌ವೇಯಲ್ಲಿ ಸಿದ್ದು, ಡಿಕೆ ಜತೆ ರಾಗಾ ಪ್ರತ್ಯೇಕ ಚರ್ಚೆ
ಅಕ್ರಮ ಕಟ್ಟಡ ಪರಿಶೀಲಿಸಿ ತೆರವಿಗೆ ತಂಡ ರಚಿಸಲು ಮಹೇಶ್ವರ್ ರಾವ್ ಸೂಚನೆ