10 ವರ್ಷವಾದರೂ 100 ಸ್ಥಾನ ಗೆಲ್ಲದ ಕಾಂಗ್ರೆಸ್‌: ಮೋದಿ

KannadaprabhaNewsNetwork |  
Published : Jun 08, 2024, 12:32 AM ISTUpdated : Jun 08, 2024, 04:34 AM IST
ಪ್ರಧಾನಿ ನರೇಂದ್ರ ಮೋದಿ | Kannada Prabha

ಸಾರಾಂಶ

ಶುಕ್ರವಾರ ದೆಹಲಿಯಲ್ಲಿ ನಡೆದ ಎನ್‌ಡಿಎ ನಾಯಕರ ಸಭೆಯಲ್ಲಿ ನರೇಂದ್ರ ಮೋದಿ ಇಂಡಿಯಾ ಕೂಟವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

ನವದೆಹಲಿ: ಶುಕ್ರವಾರ ದೆಹಲಿಯಲ್ಲಿ ನಡೆದ ಎನ್‌ಡಿಎ ನಾಯಕರ ಸಭೆಯಲ್ಲಿ ನರೇಂದ್ರ ಮೋದಿ ಇಂಡಿಯಾ ಕೂಟವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಇಂಡಿಯಾ ಕೂಟದ ಪ್ರಮುಖ ಪಕ್ಷ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ, ‘10 ವರ್ಷವಾದರೂ ಕಾಂಗ್ರೆಸ್‌ಗೆ 100ರ ಗಡಿ ತಲುಪುವುದಕ್ಕೆ ಸಾಧ್ಯವಾಗಲಿಲ್ಲ’ ಎಂದು ಟೀಕಿಸಿದ್ದಾರೆ.

ಸಭೆಯಲ್ಲಿ ಮಾತನಾಡಿದ ಪ್ರಧಾನಿ, ‘ವಿರೋಧ ಪಕ್ಷ (ಕಾಂಗ್ರೆಸ್) 10 ವರ್ಷ ಕಳೆದರೂ 100 ಸ್ಥಾನದ ಗಡಿ ತಲುಪುವುದಕ್ಕೆ ಸಾಧ್ಯವಾಗಲಿಲ್ಲ. ಕಳೆದ 3 ಅವಧಿಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದ ಒಟ್ಟು ಸ್ಥಾನ, ಈ ಬಾರಿ ಬಿಜೆಪಿ ಲೋಕಸಭೆ ಚುನಾವಣೆಯಲ್ಲಿ ಗೆದ್ದ ಸ್ಥಾನಕ್ಕಿಂತಲೂ ಕಡಿಮೆಯಾಗಿದೆ’ ಎಂದು ವ್ಯಂಗ್ಯವಾಡಿದರು.

ಕಾಂಗ್ರೆಸ್‌ ಈ ಸಲದ ಲೋಕಸಭೆ ಚುನಾವಣೆಯಲ್ಲಿ 99 ಸ್ಥಾನ ಗೆದ್ದಿದೆ. 2014ರಲ್ಲಿ 44 ಹಾಗೂ 2019ರಲ್ಲಿ 52 ಸ್ಥಾನಗಳನ್ನು ಕಾಂಗ್ರೆಸ್‌ ಗೆದ್ದಿತ್ತು.

ವಿಪಕ್ಷಗಳಿಗೆ ಚಾಟಿ:ಇದೇ ವೇಳೆ, ಎನ್‌ಡಿಎ ವಿರುದ್ಧವಾಗಿ ಜನಾದೇಶ ಬಂದಿದೆ ಎನ್ನುವ ವಿಪಕ್ಷಗಳ ಆರೋಪಕ್ಕೆ ಟಾಂಗ್ ನೀಡಿದ ಮೋದಿ, ‘ನಾವು ಎಂದಿಗೂ ಸೋತಿಲ್ಲ. ಜೂನ್ 4ನೇ ತಾರೀಖು ನಾವು ವಿಜಯವನ್ನು ಹೇಗೆ ಜೀರ್ಣಿಸಿಕೊಳ್ಳಬೇಕು ಎನ್ನುವುದನ್ನು ತೋರಿಸಿದೆ. ಈ ಗೆಲುವನ್ನು ಒಪ್ಪಿಕೊಳ್ಳದೇ ಇದರ ಮೇಲೆ ಸೋಲಿನ ನೆರಳು ಹಾಕುವ ಪ್ರಯತ್ನಗಳು ನಡೆದಿವೆ. 

ಆದರೆ ಅಂತಹ ಪ್ರಯತ್ನಗಳು ಫಲಪ್ರದವಾಗಲ್ಲ ಮತ್ತು ಅವುಗಳೆಲ್ಲವೂ ಬಹಳ ಅಲ್ಪಾವಧಿಯಲ್ಲಿಯೇ ಕೊನೆಗೊಳ್ಳುತ್ತವೆ’ ಎಂದರು. ‘ಇಂಡಿಯಾ ಕೂಟದ ನಾಯಕರು ಲೋಕಸಭೆಗೆ ಮಾತ್ರ ಒಗ್ಗೂಡಿದ್ದೇವೆ ಎಂದು ಹೇಳುತ್ತಾರೆ. ಇದು ಅವರ ನೈಜ ವ್ಯಕ್ತಿತ್ವ ಮತ್ತು ಅಧಿಕಾರದ ಹಸಿವು ತೋರಿಸುತ್ತದೆ. ಎನ್‌ಡಿಎ ಅಧಿಕಾರಕ್ಕಾಗಿ ಒಗ್ಗೂಡಿದ ಕೂಟವಲ್ಲ. ಅದು ದೇಶ ಮೊದಲು ಎನ್ನುವ ತತ್ವಕ್ಕೆ ಬದ್ಧವಾಗಿದೆ’ ಎಂದು ಮೋದಿ ಹೇಳಿದರು.

PREV
Catch up on the latest political news from Karnataka and India (ರಾಜಕೀಯ ಸುದ್ದಿ) — election results, government decisions, party updates, and in-depth political analysis on Kannada Prabha.

Recommended Stories

ಜಿ ರಾಮ್‌ ಜಿ ಕುರಿತು ಇಂದು ರಾಜ್ಯ ವಿಶೇಷ ಸಂಪುಟ ಸಭೆ
ಫೆ.13ಕ್ಕೆ ಕಾಂಗ್ರೆಸ್‌ ಸರ್ಕಾರಕ್ಕೆ 1000 ದಿನ