ಚೆನ್ನೈ: ‘ದಕ್ಷಿಣದ ರಾಜ್ಯಗಳು ದೇಶದ ಪ್ರಗತಿಯ ಪ್ರಮುಖ ಆಧಾರಸ್ತಂಭಗಳು. ಅವುಗಳ ಪ್ರಗತಿ ಸಂಪೂರ್ಣವಾಗಿ ನೀರನ್ನು ಅವಲಂಬಿಸಿದೆ. ನೀರೇ ಈ ರಾಜ್ಯಗಳ ಜೀವನಾಡಿ. ಜಲವಿವಾದಗಳೇನೇ ಇದ್ದರೂ ಕೇಂದ್ರ-ರಾಜ್ಯಗಳು ಜಂಟಿ ಸಭೆ ನಡೆಸಿ ಮಾತುಕತೆ ಮೂಲಕ ಇತ್ಯರ್ಥಪಡಿಸಿಕೊಳ್ಳಬೇಕು’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಗುರುವಾರ ಕರೆ ನೀಡಿದ್ದಾರೆ.
31ನೇ ದಕ್ಷಿಣ ವಲಯ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ದಕ್ಷಿಣದ ರಾಜ್ಯಗಳು ದೇಶದ ಪ್ರಗತಿಯ ಪ್ರಮುಖ ಸ್ತಂಭ. ಅವುಗಳ ಅಭಿವೃದ್ಧಿಯು ಸಂಪೂರ್ಣವಾಗಿ ನೀರನ್ನು ಅವಲಂಬಿಸಿದೆ. ಕೃಷಿ, ಕೈಗಾರಿಕೆ, ಸಾರ್ವಜನಿಕ ಆರೋಗ್ಯ ಅಥವಾ ಪರಿಸರ – ಈ ನಾಲ್ಕೂ ಕ್ಷೇತ್ರಗಳಲ್ಲಿ ನೀರು ಈ ಭಾಗದ ಜೀವನಾಡಿಯಾಗಿದೆ’ ಎಂದರು.
‘ಪ್ರತಿ ರಾಜ್ಯವೂ ತನ್ನ ಹಿತಾಸಕ್ತಿಗಳನ್ನು ರಕ್ಷಿಸಿಕೊಳ್ಳುವುದು ತಪ್ಪಲ್ಲ. ಆದರೆ, ಹಿತಾಸಕ್ತಿ ರಕ್ಷಣೆಯ ನೆಪದಲ್ಲಿ, ರಾಜ್ಯಗಳು ವರ್ಷಗಟ್ಟಲೆ ನೀರಿನ ಅಭಾವ ಎದುರಿಸುವಂತಾದರೆ ಅದರಿಂದ ಯಾರಿಗೂ ಲಾಭವಿಲ್ಲ’ ಎಂದರು.
ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ದೀರ್ಘಕಾಲದಿಂದ ಬಾಕಿ ಉಳಿದಿರುವ ವಿವಾದಗಳನ್ನು ಶೀಘ್ರವಾಗಿ ಇತ್ಯರ್ಥಪಡಿಸಿಕೊಳ್ಳಲು ಕೇಂದ್ರ ಜಲಶಕ್ತಿ ಸಚಿವಾಲಯ, ಗೃಹ ಸಚಿವಾಲಯ, ಅಂತಾರಾಜ್ಯ ಮಂಡಳಿ ಹಾಗೂ ಸಂಬಂಧಪಟ್ಟ ರಾಜ್ಯಗಳ ಜಂಟಿ ಸಭೆಗಳನ್ನು ನಡೆಸಿ ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ’ ಎಂದು ಪ್ರತಿಪಾದಿಸಿದರು.