ಚೆನ್ನೈ: ಕಾವೇರಿ ನದಿಗೆ ಮೇಕೆದಾಟು ಬಳಿ ಅಣೆಕಟ್ಟು ಕಟ್ಟುವ ಯೋಜನೆಗೆ ತಮಿಳುನಾಡಿನ ಬಲವಾದ ವಿರೋಧದ ನಡುವೆಯೇ, ಪ್ರಸ್ತಾವಿತ ಮೇಕೆದಾಟು ಅಣೆಕಟ್ಟು ವಿಷಯದಲ್ಲಿ ತಮಿಳುನಾಡು ಮತ್ತು ಪುದುಚೇರಿಯ ಹಿತಾಸಕ್ತಿ ರಕ್ಷಿಸುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಸಮ್ಮುಖದಲ್ಲಿ ಕರ್ನಾಟಕದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭರವಸೆ ನೀಡಿದ್ದಾರೆ. ಈ ಮೂಲಕ ಸೌಹಾರ್ದಯುತವಾಗಿ ಯೋಜನೆ ಜಾರಿಗೊಳಿಸುವತ್ತ ಹೆಜ್ಜೆ ಇಟ್ಟಿದ್ದಾರೆ.

ಚೆನ್ನೈನ ಕೋವಲಂನಲ್ಲಿ ಶಾ ಅಧ್ಯಕ್ಷತೆಯಲ್ಲಿ ನಡೆದ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಡಿ.ಕೆ.ಶಿವಕುಮಾರ್‌, ‘ಮೇಕೆದಾಟು ಅಣೆಕಟ್ಟಿನಲ್ಲಿ ಲಭ್ಯವಿರುವ ನೀರಿನಲ್ಲಿ, ಒಂದು ವೇಳೆ ಕೇವಲ ಒಂದು ಹನಿ ನೀರು ಉಳಿದಿದ್ದರೂ ಸಹ ಕುಡಿಯುವ ನೀರಿಗಾಗಿ ಮೀಸಲಿಡುವ 5 ಟಿಎಂಸಿ ನೀರನ್ನು ಹೊರತುಪಡಿಸಿ, ಉಳಿದೆಲ್ಲಾ ನೀರನ್ನು ತಮಿಳುನಾಡಿಗೇ ಬಿಡಲಾಗುವುದು ಎಂದು ಶಾ ಅವರ ಸಮ್ಮುಖದಲ್ಲಿ ಭರವಸೆಯನ್ನು ನೀಡಿದ್ದೇನೆ. ಆದ್ದರಿಂದ ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳು ನಿಶ್ಚಿಂತೆಯಿಂದಿರಬಹುದು. ಈ ಅಣೆಕಟ್ಟನ್ನು ನಿರ್ಮಿಸುತ್ತಿರುವುದು ನಮಗಾಗಲ್ಲ, ಬದಲಿಗೆ ನಿಮಗಾಗಿಯೇ’ ಎಂದರು.

ರೈತರಿಗೆ ಸಹಾಯ:

ಇದಕ್ಕೂ ಮುನ್ನ, ಸಭೆಯನ್ನುದ್ದೇಶಿಸಿ ಮಾತನಾಡಿದ ಶಿವಕುಮಾರ್, ‘ಸಭೆಗೆ ತೆರಳುವಾಗ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು, ಕರ್ನಾಟಕ ಮತ್ತು ತಮಿಳುನಾಡಿನ ನಡುವಿನ ಕಾವೇರಿ ಸಮಸ್ಯೆಯನ್ನು ಬಗೆಹರಿಸಬೇಕಿದೆ ಎಂದು ಸಲಹೆ ನೀಡಿದರು. ಅದಕ್ಕೆ ನಾನು, ‘ನಾನು ನಿಮಗೆ ಭರವಸೆ ನೀಡುತ್ತೇನೆ. ಮೇಕೆದಾಟು ಯೋಜನೆಯ ಪ್ರತಿಯೊಂದು ಹನಿ ನೀರೂ ತಮಿಳುನಾಡು ಮತ್ತು ಪುದುಚೇರಿಯ ರೈತರಿಗೆ ಸಹಾಯ ಮಾಡಲಿದೆ. ನಿಮಗೆ ಸಹಾಯ ಮಾಡಲು ಹೊರಟಿರುವ ನಮಗೆ ಸಹಕಾರ ನೀಡಿ’ ಎಂದು ಮನವಿ ಮಾಡಿದರು.


ನೀರು ಒಗ್ಗೂಡಿಸಬೇಕು:

‘ಕಾವೇರಿ, ಕೃಷ್ಣಾ, ತುಂಗಭದ್ರಾ, ಪೆನ್ನಾರ್ ಮತ್ತು ಪಾಲಾರ್‌ನಂತಹ ನದಿಗಳು ದಕ್ಷಿಣ ಪ್ರಸ್ಥಭೂಮಿಯ ಜೀವನಾಡಿಗಳಾಗಿವೆ. ನಮ್ಮ ನದಿಗಳು ರಾಜಕೀಯ ಗಡಿಗಳನ್ನು ಗುರುತಿಸುವುದಿಲ್ಲ. ನೀರು ನಮ್ಮನ್ನು ಒಗ್ಗೂಡಿಸಬೇಕೇ ಹೊರತು ವಿಭಜಿಸಬಾರದು. ನೀರಿನ ಹಂಚಿಕೆಯಿಂದ ನೀರಿನ ಸಹಕಾರದತ್ತ ಸಾಗುವ ಸಮಯ ಬಂದಿದೆ. ಅಂತಹ ಸಹಕಾರ ಹೇಗಿರುತ್ತದೆ ಎಂಬುದನ್ನು ಕರ್ನಾಟಕ ತೋರಿಸಿಕೊಟ್ಟಿದೆ’ ಎಂದು ಪ್ರತಿಪಾದಿಸಿದರು.