ರಾಮನಗರ: ಮೇಕೆದಾಟು, ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಕನ್ನಡ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು

ರಾಮನಗರ: ಮೇಕೆದಾಟು, ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ಕನ್ನಡ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು

ಉತ್ತರ ಕರ್ನಾಟಕದ ಜನರು ಕಾವೇರಿ ಒಂದೇ ವಿಷಯದ ಬಗ್ಗೆ ಮಾತನಾಡಿದರೆ ಸಾಲದು ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗಾಗಿ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ ಎಂದು ನಿರ್ಣಯ ಮಾಡಬೇಕೆಂದು ಒತ್ತಾಯಿಸಿದರು.

ಈ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಕಾವೇರಿ ನೀರಿನ ಬಗ್ಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಳೆ ಬಂತು ನೀರು ಹೋಯ್ತು ಅನ್ನುವ ಹುಡುಗಾಟದ ಮಾತು ಆಡುವುದು ಸರಿಯಲ್ಲ. ಹಾಗಾದರೆ ಕಾವೇರಿ ನ್ಯಾಯಮಂಡಳಿಗಳ ಅವಶ್ಯಕತೆ ಇಲ್ಲ ರದ್ದು ಮಾಡಿದರೆ ಒಳಿತು. ಮಳೆ ಬಂದಾಗ ನೀರು ಹೋಗಲಿ. ತಮಿಳುನಾಡಿನಲ್ಲಿರುವ ಜಲಾಶಯಗಳು ಒಂದು ಜಲಾಶಯಕ್ಕೆ ಕರ್ನಾಟಕದ ಜಲಾಶಯಗಳು ಸಮ ಆಗುವುದಿಲ್ಲ. ನೀರು ಎಷ್ಟೇ ಬಂದರೂ ನೀರು ಪಡೆಯುವ ಅಧಿಕಾರವಿದ್ದರೂ ನಾವು ನೀರು ತುಂಬಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಮೇಕೆದಾಟು ಜಲಾಶಯ ನಿರ್ಮಾಣ ಮಾಡಬೇಕು. ಇದಕ್ಕಾಗಿ ಕೂಡಲೇ ಸರ್ಕಾರ ಐಎಎಸ್ ಅಧಿಕಾರಿಗಳ ಒಂದು ಸಮಿತಿ ರಚನೆ ಮಾಡಬೇಕೆಂದು ಒತ್ತಾಯಿಸಿದರು.

ಕೆಆರ್‌ಎಸ್ ಜಲಾಶಯದ ನೀರು ಕೇವಲ ಬೆಳೆಗಾಗಿ ಮಾತ್ರ ಉಪಯೋಗ ಆಗುತ್ತಿಲ್ಲ. ಬೆಂಗಳೂರು ನಗರಕ್ಕೆ ಮೂರು ಹಂತಗಳಲ್ಲಿ ಕುಡಿಯಲು ತರುತ್ತಿದ್ದೇವೆ. ಆ ನಗರಕ್ಕೆ ಕುಡಿಯಲು ನೀರು ಇಲ್ಲ. ಕೋಲಾರ, ತುಮಕೂರು ನಗರಗಳನ್ನು ಉಪನಗರ ಮಾಡಿದರೆ ಲಕ್ಷಾಂತರ ಜನರು ಉಪನಗರಗಳಲ್ಲಿ ಸೇರುತ್ತಾರೆ. ಇವರಿಗೆ ನೀರು ಎಲ್ಲಿಂದ ತರಬೇಕು ಎಂದು ಪ್ರಶ್ನಿಸಿದರು.

ಕಾವೇರಿ ನದಿ ನೀರಿನ ವಿಚಾರದಲ್ಲಿ ತಮಿಳುನಾಡು ಪದೆ ಪದೇ ಕ್ಯಾತೆ ತೆಗೆಯುತ್ತಾ ಕಿರುಕುಳ ನೀಡುತ್ತಿದೆ. ಬೆಂಗಳೂರಿನ ನೀರಿನ ದಾಹ ತೀರಿಸಲು ಮೇಕೆದಾಟು ಯೋಜನೆ ಕೂಡಲೇ ಆಗಬೇಕು. ಈ ಯೋಜನೆಗೆ ಯಾರ ಅಪ್ಪಣೆಯೂ ಬೇಕಾಗಿಲ್ಲ. ಸರ್ಕಾರ ಕಾವೇರಿ ವಿಚಾರದಲ್ಲಿ ಹುಡುಗಾಟ ಆಡಬಾರದು ಎಂದು ಎಚ್ಚರಿಕೆ ನೀಡಿದರು.

ತಮಿಳುನಾಡು ಮೇಕೆದಾಟು ಯೋಜನೆಗೆ ಅಡ್ಡಿಪಡಿಸುವ ವಿರುದ್ಧ ಆ.10ರಂದು ಕನ್ನಡ ಒಕ್ಕೂಟ ತಮಿಳುನಾಡು ಗಡಿ ಬಂದ್ ಮಾಡಲಿದ್ದೇವೆ ಸ್ಟಾಲಿನ್, ವಿಜಯ್ ಆಗಲಿ ಅವರ ಆಟ ಇಲ್ಲಿ ನಡೆಯದು. ತಮಿಳುನಾಡಿನವರೇ ನೀರು ಕುಡಿಯಬೇಕೆ ನಮ್ಮ ಜಲಾಶಯ, ನಾವು ನೀರು ಕುಡಿಯಲು ಅವರ ಅನುಮತಿ ಪಡೆಯಬೇಕಾದ ಅವಶ್ಯಕತೆ ಇಲ್ಲ ಎಂದು ವಾಟಾಳ್ ನಾಗರಾಜ್ ಹೇಳಿದರು.

ಪ್ರತಿಭಟನೆಯಲ್ಲಿ ಕರುನಾಡು ಸೇನೆ ರಾಜ್ಯ ಉಪಾಧ್ಯಕ್ಷ ಐಜೂರು ಎಂ.ಜಗದೀಶ್, ರಾಜ್ಯ ಉಸ್ತುವಾರಿ ಅಧ್ಯಕ್ಷ ವಿ.ಎನ್. ಗಂಗಾಧರ್, ಜಿಲ್ಲಾಧ್ಯಕ್ಷ ಸಿ.ಎಸ್.ಜಯಕುಮಾರ್, ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಪುಷ್ಪಲತಾ, ಕಾರ್ಯದರ್ಶಿ ವೆಂಕಟಲಕ್ಷ್ಮಿ, ಜಿಲ್ಲಾ ದಲಿತ ಘಟಕದ ಅಧ್ಯಕ್ಷ ಕೆ. ಜಯರಾಮು, ಯುವ ಘಟಕದ ಜಿಲ್ಲಾಧ್ಯಕ್ಷ ವಿ.ಎನ್. ಶ್ರೀನಿವಾಸ್, ತಾಲೂಕು ಗೌರವಾಧ್ಯಕ್ಷ ಕೆಂಪರಾಜು, ಪ್ರಧಾನ ಕಾರ್ಯದರ್ಸಿ ಕುಮಾರ್, ಕಾರ್ಯಾಧ್ಯಕ್ಷ ಪಿ.ಸುರೇಶ್ ಕೊತ್ತಿಪುರ, ನಗರ ಅಧ್ಯಕ್ಷ ಪ್ರಸನ್ನ, ಮುಖಂಡರಾದ ನಾರಾಯಣಸ್ವಾಮಿ, ಮಹದೇವ್, ಪಾರ್ಥಸಾರಥಿ ಭಾಗವಹಿಸಿದ್ದರು.

7ಕೆಆರ್ ಎಂಎನ್ 6.ಜೆಪಿಜಿ

ರಾಮನಗರದಲ್ಲಿ ವಾಟಾಳ್ ನಾಗರಾಜ್ ಕಪ್ಪು ಬಾವುಟ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.