;Resize=(412,232))
ಹುಬ್ಬಳ್ಳಿ : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಅನಾರೋಗ್ಯದ ಹಿನ್ನೆಲೆಯಲ್ಲಿ ಇಲ್ಲಿನ ಗಬ್ಬೂರು ಕ್ರಾಸ್ ಬಳಿ ನಿರ್ಮಿಸಿರುವ ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ (ಕಾಹೇರ್) ಜೆಜಿಎಂಎಂ ವೈದ್ಯಕೀಯ ಕಾಲೇಜು ಕಟ್ಟಡ, ಕೆಎಲ್‌ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಉದ್ಘಾಟನಾ ಕಾರ್ಯಕ್ರಮಕ್ಕೆ ಬಾರದೆ ವೈದ್ಯರ ಸಲಹೆ ಮೇರೆಗೆ ಹೋಟೆಲ್‌ನಲ್ಲೇ ವಿಶ್ರಾಂತಿ ಪಡೆದರು.
ಹೋಟೆಲ್‌ನಲ್ಲೇ ಶನಿವಾರ ಸಂಜೆವರೆಗೂ ಚಿಕಿತ್ಸೆ, ವಿಶ್ರಾಂತಿ ಪಡೆದ ಅಮಿತ್ ಶಾ, ಸಂಜೆ ಚೇತರಿಸಿಕೊಂಡು ಕೆಎಲ್‌ಇ ಮೆಡಿಕಲ್ ಕಾಲೇಜಿಗೆ ಭೇಟಿ ನೀಡಿ ಶುಭ ಹಾರೈಸಿದರು. ಬಳಿಕ, ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದರು.
ಕೆಎಲ್‌ಇ ಆಸ್ಪತ್ರೆ ಮತ್ತು ವೈದ್ಯಕೀಯ ಸಂಶೋಧನಾ ಕೇಂದ್ರದ ಉದ್ಘಾಟನೆಗಾಗಿ ಶುಕ್ರವಾರ ತಡರಾತ್ರಿಯೇ ಅಮಿತ್ ಶಾ ಆಗಮಿಸಿ ಡೆನಿಸನ್ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದರು. ಶುಕ್ರವಾರ ವಿಮಾನದಲ್ಲೇ ಮನೆಯ ಆಹಾರವನ್ನೇ ಸೇವಿಸಿದ್ದರು ಎಂದು ಮೂಲಗಳು ತಿಳಿಸಿವೆ. ಹೋಟೆಲ್‌ನಲ್ಲಿ ತಂಗಿದ್ದ ಅವರು, ಶನಿವಾರ ಬೆಳಗ್ಗೆ 11.30ಕ್ಕೆ ಆಸ್ಪತ್ರೆಯ ಉದ್ಘಾಟನೆ ನೆರವೇರಿಸಬೇಕಿತ್ತು. ಆದರೆ, ಬೆಳಗ್ಗೆ ಅವರ ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದ ಕಾರಣ ಹೋಟೆಲ್‌ನಲ್ಲೇ ಉಳಿದರು. ಸಚಿವರೊಂದಿಗೆ ಬಂದಿದ್ದ ಡಾ.ಅರುಣ ಪ್ರತಾಪ ಅವರ ನೇತೃತ್ವದ ಏಳು ಜನ ವೈದ್ಯರ ತಂಡ ಅವರಿಗೆ ಚಿಕಿತ್ಸೆ ನೀಡಿತು. ವೈದ್ಯರ ಸಲಹೆ ಮೇರೆಗೆ ಸಂಜೆವರೆಗೂ ಸಚಿವರು ಹೋಟೆಲ್‌ನಲ್ಲೇ ವಿಶ್ರಾಂತಿ ಪಡೆದರು. ಹೀಗಾಗಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಾರ್ಯಕ್ರಮ ಉದ್ಘಾಟಿಸಿದರು.
ಈ ನಡುವೆ, ಸಂಜೆವರೆಗೂ ವಿಶ್ರಾಂತಿ ಪಡೆದ ಶಾ, ಸಂಜೆ ವೇಳೆ ಕೆಎಲ್‌ಇ ಮೆಡಿಕಲ್ ಕಾಲೇಜ್‌ಗೆ ತೆರಳಿ ಕಾಲೇಜ್‌ನ್ನು ವೀಕ್ಷಿಸಿದರು. ಮೆಡಿಕಲ್ ಕಾಲೇಜ್‌ನಲ್ಲಿ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ಬಳಿಕ ಸಾಂಕೇತಿಕವಾಗಿ ದೀಪ ಬೆಳಗುವ ಮೂಲಕ ಶುಭ ಹಾರೈಸಿದರು. ಜತೆಗೆ ನಾಮಫಲಕವನ್ನು ವೀಕ್ಷಿಸಿದರು.
ಈ ವೇಳೆ ಶಾ ಅವರನ್ನು ಪ್ರಭಾಕರ ಕೋರೆ ಸನ್ಮಾನಿಸಿದರು. ಬಳಿಕ, ಅಲ್ಲಿಂದ ನೇರವಾಗಿ ವಿಮಾನ ನಿಲ್ದಾಣಕ್ಕೆ ಆಗಮಿಸಿ, ವಿಶೇಷ ವಿಮಾನದ ಮೂಲಕ ದೆಹಲಿಗೆ ತೆರಳಿದರು.
- ಅನಾರೋಗ್ಯ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಹೋಟೆಲ್‌ನಲ್ಲೇ ಸಂಜೆವರೆಗೂ ವಿಶ್ರಾಂತಿ ಪಡೆದ ಅಮಿತ್
- ಸಂಜೆ ಬಳಿಕ ಕೆಎಲ್‌ಇ ಆಸ್ಪತ್ರೆಗೆ ತೆರಳಿ ಪರಿಶೀಲನೆ. ಬಳಿಕ ಹುಬ್ಬಳ್ಳಿಯಿಂದ ದೆಹಲಿಗೆ ವಿಮಾನ ಪ್ರಯಾಣ