;Resize=(412,232))
ತೀರ್ಥಹಳ್ಳಿ/ಚಿಕ್ಕಮಗಳೂರು : ಕಸ್ತೂರಿ ರಂಗನ್ ವರದಿ ಜಾರಿಯಿಂದ ಉಂಟಾಗಬಹುದಾದ ಅನಾಹುತಗಳನ್ನು ತಪ್ಪಿಸುವ ನಿಟ್ಟಿನಲ್ಲಿ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ಪ್ರವಾಸ ಕೈಗೊಂಡಿದ್ದು, ಜನರ ಸಮಸ್ಯೆ ಹಾಗೂ ಭಾವನೆಗಳನ್ನು ಅರ್ಥಮಾಡಿಕೊಂಡು ಅವರ ರಕ್ಷಣೆಗೆ ಅಗತ್ಯ ಕಾರ್ಯಕ್ರಮ ರೂಪಿಸುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ. ಅಲ್ಲದೆ, ಕೇರಳ ಮಾದರಿಯಲ್ಲೇ ಭೌತಿಕ ಸರ್ವೇ ನಡೆಸುವ ಬಗ್ಗೆ ಶಾಸಕರೊಂದಿಗೆ ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಹಾಗೂ ಚಿಕ್ಕಮಗಳೂರಿನ ಬಾಳೆಹೊನ್ನೂರಿನಲ್ಲಿ ಶನಿವಾರ ಅವರು ಕಸ್ತೂರಿ ರಂಗನ್ ವರದಿಯಿಂದ ಮಲೆನಾಡಿನ ಭಾಗದಲ್ಲಿ ಎದುರಾಗಿರುವ ಆತಂಕಗಳು ಹಾಗೂ ಪರಿಣಾಮಗಳ ಕುರಿತು ಸ್ಥಳೀಯ ರೈತರು, ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿದರು. ಬಳಿಕ ನಡೆದ ಬಹಿರಂಗ ಸಭೆಯಲ್ಲಿ ಮಾತನಾಡಿ, ಶುಕ್ರವಾರ ದಕ್ಷಿಣ ಕನ್ನಡ, ಶನಿವಾರ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ಭಾನುವಾರ ಹಾಸನ ಜಿಲ್ಲೆಗೆ ತೆರಳಲಿದ್ದೇನೆ. ಈ ವೇಳೆ ಸ್ಥಳೀಯರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಸ್ತೂರಿ ರಂಗನ್ ವರದಿ ಕುರಿತು ಮೊದಲು ಜನರೊಂದಿಗೆ ಸಂವಾದ ನಡೆಸಲಾಗುವುದು. ಅವರ ಭಾವನೆಗಳನ್ನು ಅರ್ಥ ಮಾಡಿಕೊಂಡು, ಆ ಬಳಿಕ ಶಾಸಕರೊಂದಿಗೆ ಚರ್ಚೆ ನಡೆಸಿ, ಒಟ್ಟಾರೆ ಅಭಿಪ್ರಾಯ ಸಂಗ್ರಹಿಸಲಾಗುವುದು. ಸೆ.21ರಿಂದ ಮೂರು ದಿನಗಳ ಕಾಲ ನಡೆಯಲಿರುವ ವಿಧಾನಮಂಡಲದ ವಿಶೇಷ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಲಾಗುವುದು. ಈ ಕುರಿತ ಕಾನೂನು ಅಂಶಗಳ ಪರಿಶೀಲನೆ ನಡೆಸಲಾಗುವುದು. ಈ ಎಲ್ಲದರ ಆಧಾರದ ಮೇಲೆಯೇ ಮುಂದಿನ ಹೆಜ್ಜೆ ಇಡಲಾಗುವುದು ಎಂದು ತಿಳಿಸಿದರು.
ಅರಣ್ಯ ಒತ್ತುವರಿ ಸಂಬಂಧ ಯಾವ ರೈತರಿಗೂ ಹೊಸದಾಗಿ ನೋಟಿಸ್ ನೀಡದಂತೆ ಹಾಗೂ ಇದೇ ವೇಳೆ ಹೊಸದಾಗಿ ಯಾರೂ ಒತ್ತುವರಿ ಮಾಡದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ನಾನು ನಿಮ್ಮ ಜೊತೆ ಇದ್ದೇನೆ. ರೈತರ ಪರವಾಗಿ ಇದ್ದೇನೆ ಎಂದು ಅವರು ಭರವಸೆ ನೀಡಿದರು.
ಅರಣ್ಯ ಹಕ್ಕು ಕಾಯ್ದೆ ಕುರಿತು ಮಾತನಾಡಿ, ಪರಿಶಿಷ್ಟ ಪಂಗಡದವರಿಗೆ ಹಾಗೂ ಇತರರಿಗೆ ಇರುವ ಹಕ್ಕಿನ ಅವಧಿಗೆ ಸಂಬಂಧಿಸಿದಂತೆ ಬದಲಾವಣೆ ತರಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವ ಉದ್ದೇಶವಿದೆ. ಈ ಕುರಿತು ವಿಧಾನಸಭೆಯಲ್ಲಿ ನಿರ್ಣಯ ಕೈಗೊಂಡು ಕೇಂದ್ರಕ್ಕೆ ಕಳುಹಿಸಲಾಗುವುದು ಎಂದು ಹೇಳಿದರು.
‘ರೈತನಿಗೆ ಸಂಬಳ ಇಲ್ಲ, ಪ್ರಮೋಷನ್ ಇಲ್ಲ, ಪೆನ್ಷನ್ ಇಲ್ಲ, ರಿಟೈರ್ಮೆಂಟ್ ಇಲ್ಲ, ರಜೆಯೂ ಇಲ್ಲ’. ರೈತರ ಸ್ಥಿತಿ ಕಷ್ಟದಲ್ಲಿದೆ. ನೀವು ಭರವಸೆ ಕಳೆದುಕೊಳ್ಳಬಾರದು. ರೈತರ ಬದುಕನ್ನು ಉಳಿಸುವ ದೃಷ್ಟಿಯಿಂದಲೇ ನಾನು ನಿಮ್ಮಲ್ಲಿಗೆ ಬಂದಿದ್ದೇನೆ ಎಂದು ಅವರು ಹೇಳಿದರು.
ಕಸ್ತೂರಿ ರಂಗನ್ ವರದಿ ಜಾರಿಯಿಂದ ಮಲೆನಾಡು ಭಾಗದ ರೈತರ ಬದುಕಿನ ಮೇಲೆ ಉಂಟಾಗಬಹುದಾದ ಪರಿಣಾಮಗಳನ್ನು ಮುಖ್ಯಮಂತ್ರಿಯೊಬ್ಬರು ಅತಿ ಗಂಭೀರವಾಗಿ ಪರಿಗಣಿಸಿರುವುದು ಇದೇ ಮೊದಲು. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಶುಕ್ರವಾರ ದಕ್ಷಿಣ ಕನ್ನಡ, ಶನಿವಾರ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಿಗೆ ಭೇಟಿ ನೀಡಿದ್ದು, ಭಾನುವಾರ ಹಾಸನ ಜಿಲ್ಲೆಗೆ ಭೇಟಿ ನೀಡಿ, ಸಾರ್ವಜನಿಕರೊಂದಿಗೆ ಸಂವಾದ ನಡೆಸಲಿದ್ದಾರೆ.
ಮಲೆನಾಡಿಗೆ ಡಿಕೆಶಿ ಅಭಯ
- ವಿಧಾನಮಂಡಲ ಅಧಿವೇಶನದಲ್ಲಿ ಕಸ್ತೂರಿ ರಂಗನ್ ವರದಿ ಕುರಿತು ಚರ್ಚೆ
- ಕೇರಳದ ರೀತಿ ಭೌತಿಕ ಸಮೀಕ್ಷೆ ಬಗ್ಗೆ ಸಮಾಲೋಚನೆ ಬಳಿಕ ನಿರ್ಧಾರ
- ಅರಣ್ಯ ಒತ್ತುವರಿ ಸಂಬಂಧ ರೈತರಿಗೆ ನೋಟಿಸ್ ನೀಡದಂತೆ ಸೂಚನೆ
- ಪಶ್ಚಿಮಘಟ್ಟಕ್ಕೆ ತೆರಳಿ ಪರಿಸರ ಸೂಕ್ಷ್ಮ ಸಂವಾದ ನಡೆಸಿದ ಮೊದಲ ಸಿಎಂ