;Resize=(412,232))
ಬೆಂಗಳೂರು : ‘ಕರ್ನಾಟಕ ಸರ್ಕಾರಿ ಉದ್ಯಾನವನಗಳ(ಸಂರಕ್ಷಣೆ) ತಿದ್ದುಪಡಿ ವಿಧೇಯಕ 2026’ ಅನ್ನು ತಿರಸ್ಕರಿಸುವಂತೆ ಸಂಸದ ತೇಜಸ್ವಿ ಸೂರ್ಯ ನೇತೃತತ್ವದಲ್ಲಿ ಪರಿಸರವಾದಿಗಳು, ಮಾಜಿ ಅಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳ ನಿಯೋಗವು ರಾಜ್ಯಪಾಲರಿಗೆ ಮನವಿ ಮಾಡಿದೆ. ಬುಧವಾರ ಲೋಕಭವನಕ್ಕೆ ತೆರಳಿದ ನಿಯೋಗವು ರಾಜ್ಯಪಾಲರ ಥಾವರ್ ಚಂದ್ ಗೆಹಲೋತ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ, ರಾಜ್ಯ ಸರ್ಕಾರ ರಿಯಲ್ ಎಸ್ಟೇಟ್ ಮಾಡಬೇಕೆಂಬ ಏಕೈಕ ಉದ್ದೇಶದಿಂದ ಉದ್ಯಾನವನಗಳ ಮೇಲೆ ಕಣ್ಣು ಹಾಕಿದೆ. ಉದ್ಯಾನಗಳ ಮೇಲೆ ಯುದ್ಧ ಸಾರಿದೆ. ಟನಲ್ ಮಾಡಲು ಯಾವುದೇ ಚರ್ಚೆ ಇಲ್ಲದೇ ಹೇಡಿಗಳಂತೆ ಬಿಲ್ ಪಾಸ್ ಮಾಡಿದ್ದಾರೆ. ಟನಲ್ ಅವಶ್ಯಕತೆ ಇಲ್ಲ ಎಂದು ಜನ ಹೇಳಿದರೂ ಸರ್ಕಾರ ದುರಹಂಕಾರದಿಂದ ಮಾಡಲು ಹೊರಟಿದೆ. ಸಾವಿರಾರು ಕೋಟಿ ರು. ವೆಚ್ಚದ ಯೋಜನೆ ಇದು ಎಂದು ಕಿಡಿಕಾರಿದರು.
ರಾಜ್ಯ ಸರ್ಕಾರ 2028ರ ಚುನಾವಣೆಗೆ ಫಂಡ್ ಸಂಗ್ರಹಿಸಲು ಈ ಯೋಜನೆ ಮಾಡುತ್ತಿದ್ದಾರೆ. ಇವರ ಯೋಗ್ಯತೆಗೆ ಹೊಸ ಉದ್ಯಾನ ಮಾಡಲು ಆಗುತ್ತಿಲ್ಲ. ಈ ಯೋಜನೆಯಿಂದ ಎಷ್ಟು ಕೋಟಿ ಕಿಕ್ ಬ್ಯಾಕ್ ಬರುತ್ತದೆ ಎಂದು ಹೇಳಿ. ಅಷ್ಟು ಹಣವನ್ನು ನಾವು ಚಂದ ಎತ್ತಿ ಕೊಡುತ್ತೇವೆ. ನಿಮಗೆ ರಿಯಲ್ ಎಸ್ಟೇಟ್ ಮಾಡಲು ಸಾವಿರಾರು ದಾರಿಗಳಿವೆ. ದಯಮಾಡಿ ಬೆಂಗಳೂರಿನ ಉದ್ಯಾನಗಳನ್ನು ಉಳಿಸಿ ಎಂದು ಮನವಿ ಮಾಡಿದರು.
ಪರಿಸರ ತಜ್ಞ ಡಾ.ಯಲ್ಲಪ್ಪ ರೆಡ್ಡಿ ಮಾತನಾಡಿ, ಕೋವಿಡ್ ವೇಳೆ ಉಸಿರಾಡಲು ಸಮಸ್ಯೆ ಆದಾಗ ಆಕ್ಸಿಜನ್ ಸಿಲಿಂಡರ್ ಬಳಸಬೇಕಾಯಿತು. ನಮ್ಮ ಪಾಪ ಕೋಶದಿಂದ ಮುಂದೆ ನಮ್ಮ ಜನಾಂಗ ಸಾಯುತ್ತಾರೆ. ಈಗಾಗಲೇ ಅಸ್ತಮ, ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನಿಮಗೆ ದುಡ್ಡ ಬೇಕಾ ಕೇಳಿ. 6 ಕೋಟಿ ಜನ ತಲಾ 500 ರು. ಕೊಟ್ಟರೆ ಎಷ್ಟಾಗುತ್ತೆ? ನಾವು ಸಂಗ್ರಹಿಸಿ ಕೊಡುತ್ತೇವೆ. ಮರಗಳನ್ನು ಕತ್ತರಿಸಬೇಡಿ ಎಂದು ಮನವಿ ಮಾಡಿದರು.
ಈ ವಿಧೇಯಕ ನ್ಯಾಯಾಲಯಗಳ ತೀರ್ಪು ಉಲ್ಲಂಘಿಸಿದೆ. ಆ.30 ರಂದು ‘ಲಾಲ್ ಬಾಗ್ ಉಳಿಸಿ, ಬೆಂಗಳೂರಿನ ಉದ್ಯಾನಗಳ ಉಳಿಸಿ’ ಎಂದು ಪಾದಯಾತ್ರೆ ಮಾಡುತ್ತೇವೆಂದು ಸಂಸದ ತೇಜಸ್ವಿ ಸೂರ್ಯ ತಿಳಿಸಿದರು. ಬೆಂಗಳೂರಿನ ಕೆರೆ-ಕಟ್ಟೆಗಳ ಬಗ್ಗೆ ಕಾಳಜಿ ಇರುವವರು ಭಾಗವಹಿಸಿ. ಪರಿಸರ ತಜ್ಞ ಡಾ.ಯಲ್ಲಪ್ಪರೆಡ್ಡಿ, ನಿವೃತ್ತ ಅಧಿಕಾರಿ ರವೀಂದ್ರ ಮೊದಲಾದವರು ಭಾಗವಹಿಸಲಿದ್ದಾರೆ. ಯುವಕರು ಕೂಡ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಇದು ಬಿಜೆಪಿ, ಕಾಂಗ್ರೆಸ್ ಹೋರಾಟ ಅಲ್ಲ. ನಾಳೆ ಉಸಿರಾಡಲು ಉದ್ಯಾನಗಳು, ಕುಡಿಯಲು ನೀರು ಕೂಡ ಇರಲ್ಲ. ಇದೊಂದು ದೊಡ್ಡ ಜನಾಂದೋಲನ ಆಗಬೇಕು. ಮುಖ್ಯಮಂತ್ರಿ ಅವರು ಈ ಉದ್ಧಟತನ, ದುರಹಂಕಾರ ಬಿಡಬೇಕು ಎಂದು ಸಂಸದ ತೇಜಸ್ವಿಸೂರ್ಯ ಹೇಳಿದರು.
ನಗರದಲ್ಲಿ ಟ್ರಾಫಿಕ್ ದೊಡ್ಡ ಸಮಸ್ಯೆಯಾಗಿದೆ ನಿಜ. ಸಾರ್ವಜನಿಕ ಸಾರಿಗೆಗೆ ಹೆಚ್ಚಿನ ಆದ್ಯತೆ ನೀಡಿ. ನಾವೇ ನಮ್ಮ ಆಸ್ತಿ ಕಳೆದುಕೊಳ್ಳುತ್ತಿದ್ದೇವೆ. ಉದ್ಯಾನವನ ಜಾಗ ಬಳಕೆ ಸಂಬಂಧ ತಿದ್ದುಪಡಿ ತರುವುದು ಸರಿಯಲ್ಲ. ಈಗಾಗಲೇ ಕೆರೆಗಳನ್ನು ಕಳೆದುಕೊಂಡಿದ್ದೇವೆ. ಉಸಿರಾಟಕ್ಕೆ ಇರುವ ಉದ್ಯಾನಗಳನ್ನೂ ಕಳೆದುಕೊಳ್ಳುವುದು ಬೇಡ.
-ರವೀಂದ್ರ ನಿವೃತ್ತ ಅಧಿಕಾರಿ