ಸಂಪುಟ ವಿಸ್ತರಣೆ ಗೊಂದಲ, ನಿಗಮ-ಮಂಡಳಿ ನೇಮಕ, ಮುಖ್ಯ ಸಚೇತಕರ ನೇಮಕ ಕುರಿತು ಚರ್ಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಗುರುವಾರ ದೆಹಲಿಗೆ ತೆರಳಲಿದ್ದಾರೆ.ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರನ್ನು ಭೇಟಿ ಮಾಡಲಿದ್ದು, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರ ಭೇಟಿಗೂ ಪ್ರಯತ್ನಿಸಲಿದ್ದಾರೆ

 ಬೆಂಗಳೂರು : ಸಂಪುಟ ವಿಸ್ತರಣೆ ಗೊಂದಲ, ನಿಗಮ-ಮಂಡಳಿ ನೇಮಕ, ಮುಖ್ಯ ಸಚೇತಕರ ನೇಮಕ ಕುರಿತು ಚರ್ಚೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಗುರುವಾರ ದೆಹಲಿಗೆ ತೆರಳಲಿದ್ದಾರೆ.

ರಾಜ್ಯ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲಾ ಅವರನ್ನು ಭೇಟಿ ಮಾಡಲಿದ್ದು, ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್‌ಗಾಂಧಿ ಅವರ ಭೇಟಿಗೂ ಪ್ರಯತ್ನಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.

ಒಂದು ವೇಳೆ, ರಾಹುಲ್‌ ಗಾಂಧಿ ಅವರ ಭೇಟಿಗೆ ಅವಕಾಶ ದೊರೆತರೆ ಸಂಪುಟ ವಿಸ್ತರಣೆಯಲ್ಲಿನ ಕೆಲ ಬದಲಾವಣೆ ಬಗ್ಗೆ ಚರ್ಚಿಸಿ ಒಪ್ಪಿಗೆ ಪಡೆಯಲು ಯತ್ನಿಸಲಿದ್ದಾರೆ. ಮುಖ್ಯವಾಗಿ ಕುರುಬ ಹಾಗೂ ಮಹಿಳೆಗೆ ಸ್ಥಾನ ಕಲ್ಪಿಸುವ ಬಗ್ಗೆ ಚರ್ಚಿಸಲಿದ್ದಾರೆ.

ಸಚಿವ ನಾಗೇಂದ್ರ ಅವರ ರಾಜೀನಾಮೆ ಪಡೆದು ಬಸವರಾಜ ಶಿವಣ್ಣನವರ್‌ ಅವರಿಗೆ ಸ್ಥಾನ ಕಲ್ಪಿಸಲು ಪ್ರಸ್ತಾಪಿಸುವ ಸಾಧ್ಯತೆಯಿದೆ. ನಾಗೇಂದ್ರ ವಾಲ್ಮೀಕಿ ಸಮುದಾಯಕ್ಕೆ ಸೇರಿದ್ದು ಅದೇ ಸಮುದಾಯಕ್ಕೆ ನೀಡುವುದಾದರೆ ಇ. ಅನ್ನಪೂರ್ಣ ಅವರ ಹೆಸರು ಪ್ರಸ್ತಾಪಿಸಬಹುದು. ಆ ಮೂಲಕ ಮಹಿಳೆಗೂ ಅವಕಾಶ ನೀಡಿದಂತಾಗುತ್ತದೆ.

ಮತ್ತೊಂದು ಖಾಲಿ ಸ್ಥಾನವನ್ನು ಬಸವರಾಜ ಶಿವಣ್ಣನವರ್‌ ಅವರಿಗೆ ನೀಡಿದರೆ ಗೊಂದಲ ಬಗೆಹರಿಯಲಿದೆ. ಆದರೆ, ರಾಜ್ಯ ನಾಯಕತ್ವಕ್ಕೆ ಮಹಿಳಾ ಕೋಟಾದಡಿ ಲಕ್ಷ್ಮೀ ಹೆಬ್ಬಾಳ್ಕರ್‌ ಅವರಿಗೆ ಅವಕಾಶ ನೀಡಬೇಕು ಎಂಬ ಇರಾದೆಯೂ ಇದೆ. ಹೀಗಾಗಿ ವಿಸ್ತರಣೆಯ ಮುಂದುವರೆದ ಪ್ರಕ್ರಿಯೆ ಬಗ್ಗೆ ಕುತೂಹಲ ಕೆರಳಿಸಿದೆ.

ಪಟ್ಟು ಬಿಡದ ಎಂ.ಕೃಷ್ಣಪ್ಪ, ಪ್ರಿಯಕೃಷ್ಣ:

ಮತ್ತೊಂದೆಡೆ ಎಂ.ಕೃಷ್ಣಪ್ಪ ಹಾಗೂ ಪ್ರಿಯಕೃಷ್ಣ ಅವರು ಸಚಿವ ಸ್ಥಾನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಇದೇ ಕಾರಣಕ್ಕೆ ಸಿಎಂ ಕರೆದಿದ್ದ ಶಾಸಕರ ಸಭೆಗೂ ಗೈರಾಗಿದ್ದಾರೆ. ಕೃಷ್ಣಪ್ಪ ಅವರಿಗೆ ಅವಕಾಶ ಕಲ್ಪಿಸಲು ಇತ್ತೀಚೆಗೆ ವರಿಷ್ಠರು ಡಿ.ಕೆ. ಸುರೇಶ್‌ ಅವರಿಗೆ ಬುಲಾವ್ ನೀಡಿ ಟಾಸ್ಕ್‌ವೊಂದನ್ನು ನೀಡಿದ್ದರು ಎನ್ನಲಾಗಿದೆ. ಅದರ ಪ್ರಕಾರ ಕೃಷ್ಣಪ್ಪ ಅವರಿಗೆ ಅವಕಾಶ ನೀಡಲು ಸಂಪುಟದಿಂದ ಹಿಂದೆ ಸರಿಯುವಂತೆ ಬಾಲಕೃಷ್ಣ ಅವರ ಮನವೊಲಿಸಲು ಸುರೇಶ್ ಪ್ರಯತ್ನಿಸಿದ್ದರು ಎನ್ನಲಾಗಿದೆ. ಆದರೆ, ಬಾಲಕೃಷ್ಣ ಸಂಪುಟದಲ್ಲೇ ಮುಂದುವರೆಯುವ ಆಕಾಂಕ್ಷೆ ವ್ಯಕ್ತಪಡಿಸಿದ್ದಾರೆ. ಹೀಗಾಗಿ ಕೃಷ್ಣಪ್ಪ ಅವರ ಅಸಮಾಧಾನ ತಣಿಸಲು ಪಕ್ಷ ಯಾವ ಪರಿಹಾರ ಹುಡುಕಲಿದೆ ಎಂಬುದು ಸಹ ಕುತೂಹಲಕ್ಕೆ ಕಾರಣವಾಗಿದೆ.

- ರಾಹುಲ್‌ ಗಾಂಧಿ ಭೇಟಿಗೆ ಅವಕಾಶ ಸಿಕ್ಕರೆ ಸಂಪುಟದಲ್ಲಿ ಕೆಲ ಬದಲಾವಣೆ ಮಾಡುವ ಬಗ್ಗೆ ಚರ್ಚಿಸಿ ಒಪ್ಪಿಗೆ ಪಡೆಯಲೆತ್ನ

- ನಾಗೇಂದ್ರ ರಾಜೀನಾಮೆ ಪಡೆದು ಕುರುಬ ಸಮುದಾಯದ ಶಾಸಕ ಬಸವರಾಜ ಶಿವಣ್ಣನವರ್‌ಗೆ ಅವಕಾಶ ಕಲ್ಪಿಸುವುದು

- ವಾಲ್ಮೀಕಿಗೇ ನೀಡಬೇಕು ಎಂದಾದರೆ ಶಾಸಕಿ ಅನ್ನಪೂರ್ಣ ಹೆಸರು ಪ್ರಸ್ತಾಪಿಸುವುದು. ಮಹಿಳಾ ಕೋಟಾ ತುಂಬುವುದು

- ಅದಾದ ಬಳಿಕ ಉಳಿಯುವನೊಂದು ಖಾಲಿ ಸ್ಥಾನವನ್ನು ಬಸವರಾಜ ಶಿವಣ್ಣನವರ್‌ಗೆ ನೀಡಿದರೆ ಗೊಂದಲ ಮುಗಿವ ವಾದ

- ಈ ನಡುವೆ ಬೆಂಗಳೂರಿನ ಕೃಷ್ಣಪ್ಪ, ಪ್ರಿಯಕೃಷ್ಣಪ್ಪಗೆ ಅವಕಾಶ ನೀಡಲು ಬಾಲಕೃಷ್ಣರಿಂದ ರಾಜೀನಾಮೆಗೆ ಡಿಕೆಸು ಯತ್ನ

- ಆದರೆ ಸಂಪುಟದಲ್ಲೇ ಮುಂದುವರಿಯುವ ಆಕಾಂಕ್ಷೆ ವ್ಯಕ್ತಪಡಿಸಿರುವ ಮಾಗಡಿ ಶಾಸಕ. ಮುಂದಿನ ಪರಿಹಾರ ಬಗ್ಗೆ ಸಸ್ಪೆನ್ಸ್