ರಾಜ್ಯ ವಾಲ್ಮೀಕಿ ನಿಗಮದ 187 ಕೋಟಿ ರು. ಹಗರಣದ ಆರೋಪ ಹೊತ್ತಿರುವ ಸಚಿವ ನಾಗೇಂದ್ರಗೆ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ ಅವರು ಕನಕಾಭಿಷೇಕ ಮಾಡುವುದರ ಮೂಲಕ ಭ್ರಷ್ಟಾಚಾರವನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಕಿಡಿಕಾರಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ರಾಜ್ಯ ವಾಲ್ಮೀಕಿ ನಿಗಮದ 187 ಕೋಟಿ ರು. ಹಗರಣದ ಆರೋಪ ಹೊತ್ತಿರುವ ಸಚಿವ ನಾಗೇಂದ್ರಗೆ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ ಅವರು ಕನಕಾಭಿಷೇಕ ಮಾಡುವುದರ ಮೂಲಕ ಭ್ರಷ್ಟಾಚಾರವನ್ನು ಮುಚ್ಚಿ ಹಾಕುತ್ತಿದ್ದಾರೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಕಿಡಿಕಾರಿದರು. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಜರುಗಿದ ಪ್ರಥಮ ಅಧಿವೇಶನದ ಆರಂಭದಲ್ಲಿ ಭ್ರಷ್ಟಾಚಾರ ಮುಕ್ತ ಸರ್ಕಾರ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಈಗ ಕಳಂಕಿತ ಸಚಿವ ನಾಗೇಂದ್ರ ಅವರ ಬೆನ್ನಿಗೆ ನಿಂತು ಕೊಟ್ಟ ಮಾತಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರು.

ರಾಜ್ಯದಲ್ಲಿನ ಬರ ನೀಗಿಸಲು ಸರ್ಕಾರದಲ್ಲಿ ಹಣವಿಲ್ಲ. ಮೊನ್ನೆ ನಡೆದ ಅಧಿವೇಶನದಲ್ಲಿ ರಾಜ್ಯದಲ್ಲಿನ ಬರ ಮೊದಲಾದ ಗಂಭೀರ ವಿಷಯಗಳ ಚರ್ಚೆಗಳು ನಡೆಯಬಾರದು. ಚರ್ಚೆ ನಡೆದರೆ ಎಲ್ಲಿ ಬರ ಪರಿಹಾರಕ್ಕೆ ಅನುದಾನ ಕೊಡಬೇಕಾಗುತ್ತೋ ಎಂಬ ಭಯದಿಂದ ನಾಗೇಂದ್ರ ರಾಜೀನಾಮೆ ಪ್ರಕರಣವನ್ನು ನೆಪವಾಗಿಟ್ಟುಕೊಂಡು ಇಡೀ ಅಧಿವೇಶನವನ್ನೇ ನಾಗೇಂದ್ರ ಪ್ರಕರಣ ಆಪೋಷನ ತೆಗೆದುಕೊಳ್ಳುವಂತೆ ಮಾಡಿದರು ಎಂದು ಆಪಾದಿಸಿದರು.

ವಾಲ್ಮೀಕಿ ನಿಗಮದ ಹಗರಣದ ವಿರುದ್ಧ ಡೆಥ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡ ಅಧಿಕಾರಿ ಚಂದ್ರಶೇಖರ ಸಾವಿನ ಮೇಲೆ ಕಾಂಗ್ರೆಸ್ ಸರ್ಕಾರ ನಡೆಸುತ್ತಿದೆ. ಕೆ.ಪಿ.ಎಸ್.ಸಿ., ವಾಲ್ಮೀಕಿ, ಬಿಡದಿ ಮೊದಲಾದ ಗಂಭೀರ ವಿಷಯಗಳ ಬಗ್ಗೆ ಚರ್ಚೆ ನಡೆಯಬೇಕಿದ್ದರೂ ಬಿಜೆಪಿ ಮಿತ್ರ ಪಕ್ಷಗಳ ಹೋರಾಟದ ಪರಿಣಾಮ ಅಧಿವೇಶನವನ್ನು ಎರಡು ದಿನಗಳ ಮುನ್ನವೇ ಅಧಿವೇಶನವನ್ನು ಅಂತ್ಯಗೊಳಿಸಲಾಯಿತು. ನಮ್ಮ ವಿರುದ್ಧ ಮಾತನಾಡುವ ಕಾಂಗ್ರೆಸ್‌ನ ರಾಷ್ಟ್ರ-ರಾಜ್ಯ ನಾಯಕರಿಗೆ ನೈತಿಕತೆ ಇದೆಯಾ? ಭ್ರಷ್ಟಾಚಾರಿ ಸಚಿವನ ಕೈಯಲ್ಲಿ ಕೀಲಿ ಕೈ ಕೊಡುತ್ತಿದೆಯಾ ಎಂದು ಕಟುವಾಗಿ ಪ್ರಶ್ನಿಸಿದರು.

ಕಳೆದ ಮೂರು ವರ್ಷಗಳಲ್ಲಿ ನಾವು ಕೇಳಿದ ಶೇ.50ರಷ್ಟು ಮಾತ್ರ ಸರ್ಕಾರ ಉತ್ತರ ಕೊಡುತ್ತಿದೆ. ಶಾಸಕರು ಕೇಳುವ ಸರಳ ಪ್ರಶ್ನೆಗೂ ಉತ್ತರ ಕೊಡಲು ಸರ್ಕಾರಕ್ಕೆ ತಾಕತ್ತಿಲ್ಲ. 400 ಪ್ರಶ್ನೆ ಕೇಳಿದರೆ 125ಕ್ಕೆ ಮಾತ್ರ ಸರ್ಕಾರ ಉತ್ತರಿಸುತ್ತಿದೆ. ಶಾಲೆಗಳು ಆರಂಭವಾಗಿ 3 ತಿಂಗಳು ಕಳೆದರೂ ಮಕ್ಕಳಿಗೆ ಇನ್ನೂ ಶೂ, ಸಾಕ್ಸ್ ಸರಬರಾಜಾಗಿಲ್ಲ. ಸಿ., ಡಿ.ವರ್ಗದ ದೇವಾಲಯಗಳ ವಿದ್ಯುತ್ ಬಿಲ್ಲನ್ನು ಅರ್ಚಕರು ತುಂಬುತ್ತಿದ್ದಾರೆ. ಅವುಗಳನ್ನು ಗೃಹ ಜ್ಯೋತಿಗೆ ಸೇರಿಸಿ ಎಂದರೂ ಸರ್ಕಾರ ಉತ್ತರಿಸುತ್ತಿಲ್ಲ. ಕುವೆಂಪು ವಿವಿಯ ಹಗರಣದ ತನಿಖೆಯೆ ಬಗ್ಗೆಯೂ ಉತ್ತರವಿಲ್ಲ. ರಾಜ್ಯದಲ್ಲಿ 23.24ಲಕ್ಷ ಜನರಿಗೆ ಪಿಂಚಣಿ ಸಮಸ್ಯೆ ಆಗಿದೆ. 6 ತಿಂಗಳಲ್ಲಿ ಕೇವಲ ಒಂದು ತಿಂಗಳ ಪಿಂಚಣಿ ಬಿಡುಗಡೆ ಮಾಡಿದೆ. ಬಾಕಿ 5 ತಿಂಗಳ ಪಿಂಚಣಿಯನ್ನು ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ನಗರಾಧ್ಯಕ್ಷ ಮೋಹನ ರೆಡ್ಡಿ, ಪ್ರಮುಖರಾದ ಎಸ್.ಜ್ಞಾನೇಶ್ವರ, ದೀನದಯಾಳ್, ಮಂಜುನಾಥ ನವುಲೆ, ಶ್ರೀನಾಗ, ಶಿವಕುಮಾರ್ ಡಿ.ಎಸ್., ಯೋಶೋಧಾ, ಲತಾ ಶ್ರೀನಿವಾಸ್, ಪ್ರಕಾಶ್ ವಡ್ಡಿನಕೊಪ್ಪ, ಸೋಮೇಶ್ ಇದ್ದರು.

-----

ನಗರಕ್ಕೆ ಎರಡನೇ ಹಂತದ ಕುಡಿಯುವ ನೀರಿನ ಯೋಜನೆಗೆ ಸರ್ಕಾರ ತಾತ್ವಿಕ ಒಪ್ಪಿಗೆ ನೀಡಿದೆ. ಗಾಜನೂರು ಬಳಿಯ ಸಕ್ರೆಬೈಲಿನ ಸರ್ವೆ ನಂ.5ರಲ್ಲಿ 24 ಎಕರೆ ಜಾಗ ಗುರುತು ಮಾಡಲಾಗಿದೆ. ಸಧ್ಯದಲ್ಲೇ ಸಚಿವರನ್ನೂ ಭೇಟಿ ಮಾಡುವೆ. ಹಣ ಬಿಡುಗಡೆಯಾಗತ್ತದೆ ಎಂಬ ನಂಬಿಕೆ ಇದೆ. ಭೂಮಾಪಕರ ಹುದ್ದೆ ತುಂಬಲು ಅಧಿಸೂಚನೆ ಹೊರಡಿಸಲಾಗುವುದು ಎಂದು ಸಿಎಂ ಹೇಳಿದ್ದಾರೆ. ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ವಿಭಾಗೀಯ ಸಭೆಯಲ್ಲಿ ಗಾಜನೂರು ಡ್ಯಾಂನ ಹೂಳೆತ್ತುವ ಕಾರ್ಯಕ್ಕೆ ತಜ್ಞರ ಸಮಿತಿ ರಚಿಸಲಾಗಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಸರ್ಕಾರಿ ಶಾಲೆಗಳಲ್ಲಿ 8ನೇ ತರಗತಿಯಿಂದ ಇಂಗ್ಲೀಷ್‌ ಮಾಧ್ಯಮ ಬೋಧನೆಗೆ ಸರ್ಕಾರ ಒಪ್ಪಿರುವುದು ಸಂತಸಕರ ಸಂಗತಿ.

ಎಸ್.ಎನ್.ಚನ್ನಬಸಪ್ಪ, ಶಾಸಕ.