ಬೆಲೆ ಏರಿಕೆ, ಭ್ರಷ್ಟಾಚಾರ, ಅಧಿಕಾರ ದುರುಪಯೋಗವೇ ಇವರ ಸಾಧನೆಯೇ?

KannadaprabhaNewsNetwork |  
Published : May 20, 2025, 01:07 AM ISTUpdated : May 20, 2025, 04:23 AM IST
1 | Kannada Prabha

ಸಾರಾಂಶ

ಹಣ ದುರ್ಬಳಕೆ, ವಕ್ಫ್‌ ಜಮೀನು ದುರ್ಬಳಕೆ, ಕೆಪಿಎಸ್ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಎಸ್‌ಇಪಿ, ಟಿಇಪಿ ಹಣ ದುರ್ಬಳಕೆ ಇವರ ಸಾಧನೆಯೇ ಎಂದು ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ಥ್‌ ನಾರಾಯಣ ಪ್ರಶ್ನಿಸಿದರು.

 ಮೈಸೂರು : ಅಗತ್ಯ ವಸ್ತುಗಳ ಬೆಲೆ ಏರಿಕೆ, ಮುಡಾ ಜಮೀನು ಕಬಳಿಕೆ, ವಾಲ್ಮಿಕಿ ನಿಗಮದ ಹಣ ದುರ್ಬಳಕೆ, ವಕ್ಫ್‌ ಜಮೀನು ದುರ್ಬಳಕೆ, ಕೆಪಿಎಸ್ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ, ಎಸ್‌ಇಪಿ, ಟಿಇಪಿ ಹಣ ದುರ್ಬಳಕೆ ಇವರ ಸಾಧನೆಯೇ ಎಂದು ಮಾಜಿ ಉಪ ಮುಖ್ಯಮಂತ್ರಿ ಅಶ್ವತ್ಥ್‌ ನಾರಾಯಣ ಪ್ರಶ್ನಿಸಿದರು.

ನಗರದ ಬಿಜೆಪಿ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್‌ ಸರ್ಕಾರ ಎರಡು ವರ್ಷದ ಸಾಧನ ಸಮಾವೇಶ ನಡೆಸುತ್ತಿರುವುದು ಯಾವ ಪುರುಷಾರ್ಥಕ್ಕೆ, ಸಂಪೂರ್ಣ ಬಹುಮತ ನೀಡಿದ ಜನರ ಜೀವನವನ್ನು ರಾಜ್ಯ ಸರ್ಕಾರ ಬರ್ಬಾತ್‌ ಮಾಡಿದೆ. ಈಗ ಸಮರ್ಪಣಾ ಸಮಾವೇಶ, ಸಾಧನಾ ಸಮಾವೇಶ, ಗ್ಯಾರಂಟಿ ಬದುಕು ಎಂಬೆಲ್ಲ ಹೆಸರಿನಲ್ಲಿ ಸಮಾವೇಶ ಮಾಡುತ್ತಿದೆ ಎಂದು ಟೀಕಿಸಿದರು.

ಸಚಿವ ಸಂಪುಟದ ಮೂರ್ನಾಲ್ಕು ಮಂದಿ ಮಾತ್ರ ಆನಂದವಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡು ಸಂತೋಷವಾಗಿದ್ದಾರೆ. ಉಳಿದವರು ಯಾರೂ ಸಂತೋಷವಾಗಿಲ್ಲ. ಇದೊಂದು ವಸೂಲಿ ಸರ್ಕಾರ, ಭ್ರಷ್ಟ, ಶೇ.60ರಷ್ಟು ಕಮಿಷನ್‌ ಪಡೆಯುವ, ರೈತ ವಿರೋಧಿ, ದಲಿತ ವಿರೋಧಿ, ಯುವಕ ವಿರೋಧಿ ಸರ್ಕಾರ, ಭಯೋತ್ಪಾದಕರನ್ನು ಅಮಾಯಕರು ಎಂದು ಕರೆಯುವ, ತುಷ್ಟೀಕರಿಸುವ ಸರ್ಕಾರ. ಈ ಸರ್ಕಾರ ಎಲ್ಲದರಲ್ಲೂ ವಿಫಲವಾಗಿದೆ. ಸಂಪುಟ ಸಹೋದ್ಯೋಗಿಗಳು ಮನಸ್ಸಿಗೆ ಬಂದ ಹಾಗೆ ಹೇಳಿಕೆ ನೀಡುತ್ತಿದ್ದಾರೆ. ಯುದ್ಧಕ್ಕೆ ಮುಂಚೆ ಯುದ್ಧ ಬೇಡ ಎನ್ನುತ್ತಾರೆ. ಯುದ್ಧ ಮಾಡುವಾಗ ಶಾಂತಿ ಎನ್ನುತ್ತಾರೆ. ಯುದ್ಧ ವಿರಾಮದ ಸಂದರ್ಭದಲ್ಲಿ ಯುದ್ಧ ಮಾಡಿ ಎನ್ನುತ್ತಾರೆ. ಇವರು ಜನರ ಭಾವನೆಗೆ ಧಕ್ಕೆ ಆಗುವಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.

ಮೈಸೂರು ಇಡೀ ದೇಶಕ್ಕೆ ಮಾದರಿಯಾಗಿದೆ. ಇಂತಹ ಜಿಲ್ಲೆಯಿಂದ ಆಯ್ಕೆಯಾದ ಮುಖ್ಯಮಂತ್ರಿಗಳು ಸೆಸ್‌ ಹೆಚ್ಚಿಸಿದೆ, ಸ್ಟಾಂಪ್‌ಡ್ಯೂಟಿ ಹೆಚ್ಚಿಸಿದೆ. ಎಲ್ಲಾ ಅಗತ್ಯ ವಸ್ತುಗಳನ್ನು ಹೆಚ್ಚಿಸಿದೆ, ಬಡ ಮತ್ತು ಮಧ್ಯಮ ವರ್ಗದ ಜನರ ಜೀವನದ ಮೇಲೆ ಬರೆ ಎಳೆದಿದೆ. ಸಿಎಂ ಜಿಲ್ಲೆಗೆ ಯಾವುದಾದರೂ ಹೊಸ ಕೈಗಾರಿಕೆ ಬಂತೆ?, ಇರುವ ಕೈಗರಿಕೆಗಳೂ ಮುಚ್ಚಿಕೊಂಡು ಹೋಗುತ್ತಿವೆ ಎಂದು ಅವರು ವಾಗ್ದಾಳಿ ನಡೆಸಿದರು.

ಮೈಸೂರು ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದೆ. ಪೊಲೀಸ್‌ ಠಾಣೆಗೆ ಮುತ್ತಿಗೆ ಹಾಕುವ ಗಲಭೆ ಕೋರರರನ್ನು ಬೆಂಬಲಿಸುತ್ತಾರೆ. ರಾಜ್ಯದಲ್ಲಿ ಬಾಣಂತಿಯರ ಸಾವಾದರೆ ನಾನೇನು ಮಡಲಿ ಎಂದು ಕೇಳುವ ಮಂತ್ರಿಗಳು, ಮುಕ್ಯಮಂತ್ರಿಗಳು ಇದ್ದಾರೆ. ಇದೊಂದು ಕೊಲೆಗಡುಕ ಸರ್ಕಾರ. ಕಾರ್ಮಿಕ ಕಿಟ್, ಪೋಷಕಾಂಶದ ಕಿಟ್‌ನಲ್ಲೂ ಹಗರಣವಾಗಿದೆ. ಕಾರ್ಮಿಕ ಸಚಿವರಿಗೆ ತನ್ನ ಇಲಾಖೆಯಲ್ಲಿನ ಭ್ರಷ್ಟಾಚಾರವೇ ಗೊತ್ತಾಗುವುದಿಲ್ಲ. ಆದರೆ, ದೇಶದ ಬಗ್ಗೆ ಮಾತನಾಡುತ್ತಾರೆ ಎಂದು ಟೀಕಿಸಿದರು.

ಸರ್ಕಾರ ಎಲ್ಲಾ ವಿಭಾಗದಲ್ಲೂ ಭ್ರಷ್ಟಾಚಾರ ನಡೆಸುತ್ತಿದೆ. ಗುತ್ತಿಗೆದಾರರಿಗೆ 32 ಸಾವಿರ ಕೋಟಿ ಬಾಕಿ ಕೊಡಬೇಕಿದೆ. ಸಚಿವ ಸಂಪುಟದಲ್ಲಿ ಒಬ್ಬನಾದರೂ ಪ್ರಮಾಣಿಕ ಸಚಿವ ಇದ್ದಾನೆಯೇ?, ಅಸಹಾಯಕರಾಗಿ ಭ್ರಷ್ಟವಾರಕ್ಕೆ ಬೆಂಬಲ ನೀಡುತ್ತಿದ್ದಾರೆ ಎಂದರು.

ಬೇಷರತ್ತಾಗಿ ಗ್ಯಾರಂಟಿ ಯೋಜನೆ ಸವಲತ್ತು ಕೊಡುವುದಾಗಿ ಹೇಳಿದ ನೀವು, ಈಗ ಗೃಹಲಕ್ಷ್ಮೀ ಹಣ ಬಂದಿಲ್ಲ ಎಂದರೆ ತಿಂಗಳು ತಿಂಗಳು ಕೊಡಲು ಅದೇನು ಸಂಬಳವೇ ಎನ್ನುತ್ತಿದ್ದಾರೆ. ಪರಿಹಾರಕ್ಕಾಗಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸಚಿವರು ಹೇಳುತ್ತಾರೆ. ಇವರು ಅಧಿಕಾರಕ್ಕೆ ಬಂದಾಗಿನಿಂದ ಒಂದೇ ಒಂದು ಘನ ಕಾರ್ಯ ಮಾಡಿಲ್ಲ. ಒಟ್ಟಾರೆ 7 ಲಕ್ಷ ಕೋಟಿ ಸಾಲ ಮಾಡಿದ್ದಾರೆ ಎಂದು ಅವರು ದೂರಿದರು.

ಕದನ ವಿರಾಮ ವಿಷಯದಲ್ಲಿ ನಮ್ಮ ಹಿತಾಸಕ್ತಿಯನ್ನು ನಾವು ಕಾಪಾಡಿಕೊಂಡಿದ್ದೇವೆ. ಉಗ್ರರ ತರಬೇತಿ ಕೇಂದ್ರವನ್ನು ಧಮನ ಮಾಡಿದ್ದೇವೆ. ಇಷ್ಟು ಪ್ರಬಲವಾಗಿ ಇತಿಹಾಸದಲ್ಲಿ ಯಾವ ದೇಶವೂ ಉಗ್ರ ನೆಲೆ ಧಮನ ಮಾಡಿಲ್ಲ. ರಷ್ಯಾದಿಂದ ತೈಲ ಖರೀದಿಸಬೇಡಿ ಎಂದು ಅಮೆರಿಕ ಹೇಳಿದಾಗ ನಾವು ಕೇಳಲಿಲ್ಲ, ಖರೀದಿಸಲಿಲ್ಲವೇ ಎಂದರು.

ಒಳಜಗಳ ಇಲ್ಲ:  ಬಿಜೆಪಿಯಲ್ಲಿ ಒಳಜಗಳ ಇಲ್ಲ. ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಗುದ್ದಾಡುತ್ತಿದ್ದಾರೆ. ವಿಪಕ್ಷವಾದ ನಮಗೆ ಸರ್ಕಾರವು ದಿನಕ್ಕೊಂದು ಅಸ್ತ್ರ ಕೊಡುತ್ತಿದೆ. ಅದನ್ನು ನಾವು ಸಮರ್ಥವಾಗಿ ಬಳಸಿಕೊಂಡು ಸರ್ಕಾರದ ಮೇಲೆ ಗಧಾ ಪ್ರಹಾರ ಮಾಡುತ್ತಿದ್ದೇವೆ. ಇದರಲ್ಲಿ ಹೊಂದಾಣಿಕೆ ಪ್ರಶ್ನೆಯೇ ಇಲ್ಲ. ನಮ್ಮ ವಿರುದ್ಧದ ತನಿಖೆಗಳಿಗೆ ನಾವು ಸಿದ್ಧರಿದ್ದೇವೆ. ಮಾಡಲಿ. ಆದರೆ ಅವರು ಮೂರು ಬಿಟ್ಟವರು, ಅಧಿಕಾರ ದುರ್ಬಳಕೆ ಮಾಡಿಕೊಂಡು ಮುಡಾ ಹಗರಣ ಸಂಬಂಧ ಅಂತಿಮ ವರದಿಯನ್ನು ಕೊಡುತ್ತಲೇ ಇಲ್ಲ ಎಂದು ಟೀಕಿಸಿದರು.

ಸುದ್ದಿಗೋಷ್ಠಿಯಲ್ಲಿ ನಗರ ಬಿಜೆಪಿ ಅಧ್ಯಕ್ಷ ಎಲ್‌.ನಾಗೆಂದ್ರ, ಬಿಜೆಪಿ ಜಿಲ್ಲಾಧ್ಯಕ್ಷ ಎಲ್‌.ಆರ್‌. ಮಹದೇವಸ್ವಾಮಿ, ಮಾಜಿ ಮೇಯರ್‌ ಶಿವಕುಮಾರ್, ಬಿಜೆಪಿ ಉಪಾಧ್ಯಕ್ಷ ಎಂ. ರಾಜೇಂದ್ರ, ಪ್ರಧಾನ ಕಾರ್ಯದರ್ಶಿಗಳಾದ ಗಿರೀಧರ್, ಕೇಬಲ್ ಮಹೇಶ್, ನಗರ ಉಪಾಧ್ಯಕ್ಷ ಜೋಗಿ ಮಂಜು, ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್, ಡಾ. ಸುಶ್ರುತ್‌, ಡಾ. ಚಂದ್ರಶೇಖರ್‌, ದಯಾನಂದ ಪಟೇಲ್, ಕಾರ್ಯಾಲಯ ಕಾರ್ಯದರ್ಶಿ ಎಸ್. ನಂದಕುಮಾರ, ಗ್ರಾಮಾಂತರ ಕಾರ್ಯಾಲಯ ಕಾರ್ಯದರ್ಶಿ ಪಾಪಣ್ಣ ಮೊದಲಾದವರು ಇದ್ದರು.ಕಾಂಗ್ರೆಸ್‌ ನಾಯಕರುಗಳು ಜೇಬಲ್ಲಿ ಸಂವಿಧಾನ ಇಟ್ಟುಕೊಂಡಿರುವುದಾಗಿ ಹೇಳುತ್ತಾರೆ. ಅದರೆ ಅದರಂತೆ ನಡೆದುಕೊಳ್ಳುವುದಿಲ್ಲ. ಜೇಬಲ್ಲಿ ಸಂವಿಧಾನ ಇದೆಯೋ ಅಥವಾ ಬೈಬಲ್ ಇದೆಯೋ ಗೊತ್ತಿಲ್ಲ.

- ಅಶ್ವತ್ಥ್‌ ನಾರಾಯಣ, ಮಾಜಿ ಉಪ ಮುಖ್ಯಮಂತ್ರಿ

PREV
Read more Articles on

Recommended Stories

ನೆಂಟಸ್ತನ ಮಾತಾಡಲು ಬಂದಿಲ್ಲ: ಸ್ಪೀಕರ್‌ ವಿರುದ್ಧ ಕಂದಕೂರು ಕಿಡಿ
ನೈಸ್ ಭೂಸ್ವಾಧೀನ ರದ್ದುಗೊಳಿಸಲು ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತ ಸಂಘ ಪ್ರತಿಭಟನೆ