ಮೈಸೂರು : ಎರಡು ಬಾರಿ ಮುಖ್ಯಮಂತ್ರಿಯಾದರೂ ಸಿದ್ದರಾಮಯ್ಯ ಹಿಂದುಳಿದವರಿಗೆ, ಕುರುಬರಿಗೂ ಏನನ್ನು ಮಾಡಲಿಲ್ಲ. ಸಿದ್ದರಾಮಯ್ಯ ಗಂಭೀರವಾಗಿ ಆಡಳಿತ ನಡೆಸುತ್ತಿಲ್ಲ. ಹೀಗಾಗಿ, ಇವರು ಮಾಡುತ್ತಿರುವುದು ಸಾಧನಾ ಸಮಾವೇಶವಲ್ಲ, ಸಾಧನೆ ಶೂನ್ಯ ಸಮಾವೇಶ. ಇದು ಬರೀ ಪ್ರಚಾರ (ಪಬ್ಲಿಸಿಟಿ) ಸರ್ಕಾರ ಎಂದು ವಿಧಾನ ಪರಿಷತ್ ಸದಸ್ಯ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.
ಜಲದರ್ಶಿನಿ ಅತಿಥಿಗೃಹದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಏನು ಸಾಧನೆ ಮಾಡಿದೆ ಎಂದು ಸಾಧನಾ ಸಮಾವೇಶ ಮಾಡುತ್ತಿದ್ದಾರೆ?, ಹೇಳಿಕೊಳ್ಳುವಂತಹ ಯಾವ ಸಾಧನೆ ಮಾಡಿದ್ದಾರೆ? ಮುಖ್ಯಮಂತ್ರಿಗಳೇ ನಿಮ್ಮ ಸ್ವಂತ ಜಿಲ್ಲೆಯಲ್ಲಿ ಏನು ಅಭಿವೃದ್ಧಿ ಮಾಡಿದ್ದೀರಾ ಹೇಳಿ ಎಂದು ಪ್ರಶ್ನಿಸಿದರು.
ಬರೀ ಹೆಲಿಕಾಪ್ಟರ್ ನಲ್ಲಿ ಓಡಾಡಿರುವುದೇ ನಿಮ್ಮ ಸಾಧನೆಯಾ? ನಿಮ್ಮ ಅಧಿಕಾರವಧಿಯಲ್ಲಿ ಹೆಲಿಕಾಪ್ಟರ್‌ನಲ್ಲಿ ಓಡಾಡಲು ಎಷ್ಟು ಹಣ ಖರ್ಚು ಮಾಡಿದ್ದೀರಾ ಎಂಬುದನ್ನು ಸಾಧನಾ ಸಮಾವೇಶದಲ್ಲಿ ತಿಳಿಸಬೇಕು. ನಿಮ್ಮಿಂದ ಎಷ್ಟು ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದನ್ನು ತಿಳಿಸಬೇಕು. ಮುಡಾ ಹಗರಣದ ಬಗ್ಗೆಯೂ ತಿಳಿಸಬೇಕು. ಇಲ್ಲದಿದ್ದರೆ ನಾವು ಕೂಡ ಮೈಸೂರಿನಲ್ಲಿ ಸಮಾವೇಶ ಮಾಡಿ, ನಿಮ್ಮ ವೈಫಲ್ಯಗಳನ್ನು ಜನರ ಮುಂದಿಡುತ್ತೇವೆ ಎಂದರು.
ನಿಮ್ಮ ವೈಫಲ್ಯಗಳನ್ನು ಮರೆ ಮಾಚಲು, ಜನರ ಗಮನ ಬೇರೆಡೆಗೆ ಸೆಳೆಯಲು ಸಾಧನಾ ಸಮಾವೇಶ ಮಾಡುತ್ತಿದ್ದೀರಿ. ಸಾಧನಾ ಸಮಾವೇಶದಲ್ಲಿ ಸಿಎಂ ಸೇರಿದಂತೆ ಎಲ್ಲಾ ಸಚಿವರ ಆಸ್ತಿಯ ವಿವರಗಳನ್ನು ಬಹಿರಂಗಪಡಿಸಬೇಕು. ಸರ್ಕಾರದ ಹಣದಲ್ಲಿ ಸಾಧನಾ ಸಮಾವೇಶ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ನಿಮಗೂ ಬಿಜೆಪಿಯವರಿಗೂ ಯಾವುದೇ ವ್ಯತ್ಯಾಸವಿಲ್ಲ. ನಾನು ಸಹ ಬಿಜೆಪಿಯಲ್ಲಿದ್ದವನು. ಬಿಜೆಪಿ ಸರ್ಕಾರ ಬರಲು ಕಾರಣನಾದವನು. ಯಡಿಯೂರಪ್ಪ ಅವಧಿಯಲ್ಲಿ ಜಿಂದಾಲ್‌ಗೆ ಭೂಮಿ ಕೊಡಲು ನಾವು ತಡೆ ಹಾಕಿದೇವು. ಕಳೆದ ಮೂರು ತಿಂಗಳಲ್ಲಿ ನೀವು ಮಾಡಿದ್ದೇನು ಸಿದ್ದರಾಮಯ್ಯನವರೇ?. ಜನಾರ್ಧನ ರೆಡ್ಡಿಗೂ ನಿಮಗೂ ಯಾವುದೇ ವ್ಯತ್ಯಾಸವಿಲ್ಲ. ಎಲ್ಲಾ ಪಕ್ಷಗಳು ಸೇರಿ ರಾಜ್ಯವನ್ನು ಧೂಳಿಪಟ ಮಾಡುತ್ತಿವೆ ಎಂದು ಆರೋಪಿಸಿದರು.
ಜನರ ವಿಶ್ವಾಸ ಕಳೆದುಕೊಂಡಿರುವ ನೀವು ಸಾಧನಾ ಸಮಾವೇಶ ಮಾಡ್ತಿದ್ದೀರಾ. ನೀವು ಬರೀ ಸುಳ್ಳು, ಬುಟಾಟಿಕೆ ಮಾಡುತ್ತಿದ್ದೀರಿ. ಬಿಜೆಪಿಯವರು ಕೂಡ ಬರೀ ಸುಳ್ಳು ಹೇಳಿ ಮನೆಗೆ ಹೋದರು. ಈಗಿನ ಸರ್ಕಾರಕ್ಕೂ ಅದೇ ಪರಿಸ್ಥಿತಿ ಬರುತ್ತದೆ ಎಂದು ಟೀಕಿಸಿದರು.
ಭಾರತ- ಪಾಕಿಸ್ತಾನದ ವಿರುದ್ಧ ನಡೆಸಿದ ಸಮರಕ್ಕೆ ಕಾಂಗ್ರೆಸ್ ನಾಯಕರು ಸಾಕ್ಷ್ಯ ಕೇಳುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಎಚ್.ವಿಶ್ವನಾಥ್ ಅವರು, ಸಿದ್ದರಾಮಯ್ಯ ಒಂದು ದಿನ ಪಾಕಿಸ್ತಾನದ ಪರ ಮಾತನಾಡುತ್ತಾರೆ. ಮತ್ತೊಂದು ದಿನ ಭಾರತದ ಪರ ಮಾತನಾಡುತ್ತಾರೆ. ಇಂತಹ ಸನ್ನಿವೇಶದಲ್ಲಿ ಎಲ್ಲರೂ ಒಗ್ಗಟ್ಟಾಗಿರಬೇಕು. ಪಕ್ಷಕ್ಕಿಂತ ದೇಶ ದೊಡ್ಡದು, ದೇಶ ಇದ್ದರೆ ನಾವು ಎಂಬುದನ್ನು ಅರಿಯಬೇಕು ಎಂದು ತಿಳಿಸಿದರು.
ಇದು ಹುಚ್ಚರ ಸರ್ಕಾರ
ರಾಜ್ಯದ ನೀರಾವರಿ ಯೋಜನೆಗಳು ಕುಂಟುತ್ತಾ ಸಾಗುತ್ತಿವೆ. ಕಿಕ್ ಬ್ಯಾಕ್ ಪಡೆಯಲು ನೀರಾವರಿ ಇಲಾಖೆ ಇಟ್ಕೊಂಡಿದಾರೆ. ಶ್ರೀರಾಮ ಸಕ್ಕರೆ ಕಾರ್ಖಾನೆಯ ಸ್ಥಿತಿ ಏನಾಗಿದೆ. ಜನರ ತೆರಿಗೆ ಹಣವನ್ನು ಪೋಲು ಮಾಡ್ತಿದಾರೆ. ಇದು ಹುಚ್ಚರ ಸರ್ಕಾರವಾಗಿದೆ. ಯಾವುದೇ ಮಾನದಂಡವಿಲ್ಲದೇ ಎಲ್ಲರಿಗೂ 2 ಸಾವಿರ ಕೊಡ್ತಿದಾರೆ. ಗ್ಯಾರಂಟಿ ಯೋಜನೆಗಳನ್ನು ಹುಚ್ಚರು ಮಾಡಬೇಕು ಅಷ್ಟೆ ಎಂದು ವಿಧಾನಪರಿಷತ್ತು ಸದಸ್ಯ ಎಚ್. ವಿಶ್ವನಾಥ್ ವಾಗ್ದಾಳಿ ನಡೆಸಿದರು.ಎಲ್ಲಾ ಜಿಲ್ಲಾ ಮಂತ್ರಿಗಳು ಕಂಟ್ರ್ಯಾಕ್ಟ್, ವರ್ಗಾವಣೆ, ಕಮೀಷನ್ ನಲ್ಲಿ ಮುಳುಗಿದ್ದಾರೆ. ಗ್ರೇಟರ್ ಮೈಸೂರು ಮಾಡಲು ಹೊರಟ್ಟಿದ್ದರು. ವ್ಯಾಪಾರ ಸರಿ ಆಗಲಿಲ್ಲ ಎಂದು ಮುಂದೂಡಲಾಗಿದೆ. ಈಗ ಗ್ರೇಟರ್ ಬೆಂಗಳೂರಿನಿಂದ ಸೈಟ್ ಗಳ ಬೆಲೆ ಮೂರು ಪಟ್ಟು ಹೆಚ್ಚಾಗುತ್ತದೆ. ಮಂತ್ರಿಗಳು ರಿಯಲ್ ಎಸ್ಟೇಟ್ ನಡಿ ಸಿಲುಕಿದ್ದಾರೆ.
- ಎಚ್. ವಿಶ್ವನಾಥ್, ವಿಧಾನಪರಿಷತ್ ಸದಸ್ಯ